Vijayanagara | ಕೊಟ್ಟೂರು ಪೊಲೀಸ್ ವೃತ್ತ ರದ್ದು; ಪಿಎಸ್‌ಐ ಹುದ್ದೆ ಪಿಐಗೆ ಮೇಲ್ದರ್ಜೆ
ಹೊಸಹಳ್ಳಿ ಪೊಲೀಸ್ ವೃತ್ತ ಕೂಡ್ಲಿಗಿಗೆ ಸ್ಥಳಾಂತರಿಸಿ ಸರ್ಕಾರ ಆದೇಶ
ಕೊಟ್ಟೂರು (ವಿಜಯನಗರ): ಕೊಟ್ಟೂರು ಪೊಲೀಸ್ ವೃತ್ತವನ್ನು ರದ್ದುಪಡಿಸಿ, ಕೊಟ್ಟೂರು ಪೊಲೀಸ್ ಠಾಣೆಯ ಪಿಎಸ್‌ಐ ಹುದ್ದೆಯನ್ನು ಪಿಐ ಹುದ್ದೆಗೆ ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೇ ವೇಳೆ ಹೊಸಹಳ್ಳಿ ಪೊಲೀಸ್ ವೃತ್ತವನ್ನು ಕೂಡ್ಲಿಗಿಗೆ ಸ್ಥಳಾಂತರಿಸಲಾಗಿದೆ.
ಈ ಹಿಂದೆ ಹೊಸಹಳ್ಳಿ ಪೊಲೀಸ್ ಠಾಣೆ ಕೊಟ್ಟೂರು ಪೊಲೀಸ್ ವೃತ್ತಕ್ಕೆ ಸೇರಿತ್ತು. ಹೊಸಹಳ್ಳಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು, ಕೊಟ್ಟೂರು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಹೊಸಹಳ್ಳಿಯಿಂದ ಕೊಟ್ಟೂರಿಗೆ ಸುಮಾರು 55 ಕಿ.ಮೀ. ಹಾಗೂ ಕೂಡ್ಲಿಗಿಗೆ 25 ಕಿ.ಮೀ. ಅಂತರವಿರುವುದರಿಂದ ಸಾರ್ವಜನಿಕರಿಗೆ ಕೊಟ್ಟೂರಿಗೆ ತೆರಳಲು ಸಾರಿಗೆ ಸೌಲಭ್ಯ ಕಡಿಮೆ ಇದ್ದು, ಕೂಡ್ಲಿಗಿಗೆ ಸಂಪರ್ಕ ಹೆಚ್ಚು ಅನುಕೂಲಕರವಾಗಿದೆ. ಈ ಹಿನ್ನೆಲೆಯಲ್ಲಿ ಆಡಳಿತಾತ್ಮಕವಾಗಿ ಬದಲಾವಣೆ ಮಾಡಲಾಗಿದೆ.
ಕೊಟ್ಟೂರು ತಾಲೂಕು ಕೇಂದ್ರವಾಗಿದ್ದು, ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಕಚೇರಿಗಳು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳು ಇಲ್ಲಿವೆ. ಅಲ್ಲದೆ, ಪ್ರತಿವರ್ಷ ನಡೆಯುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯ ಪಿಎಸ್‌ಐ ಹುದ್ದೆಯನ್ನು ಪಿಐ ಹುದ್ದೆಗೆ ಉನ್ನತೀಕರಿಸಲಾಗಿದೆ.
ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಹೊಸಹಳ್ಳಿ ಪೊಲೀಸ್ ವೃತ್ತವನ್ನು ಕೂಡ್ಲಿಗಿ ವ್ಯಾಪ್ತಿಗೆ ಸ್ಥಳಾಂತರಿಸಲಾಗಿದೆ.