Harapanahalli | ಬೆಳೆ ವಿಮೆಗೆ ಬಂದ ರೈತರನ್ನು ವಾಪಸ್ ಕಳುಹಿಸಿದರೆ ಕ್ರಮ: ಬ್ಯಾಂಕ್‌ಗಳಿಗೆ ಡಿಸಿ ಎಚ್ಚರಿಕೆ

Update: 2026-07-21 18:01 IST

ಹರಪನಹಳ್ಳಿ : ಬೆಳೆ ವಿಮೆ ಮಾಡಿಸಿಕೊಳ್ಳಲು ಬಂದ ರೈತರನ್ನು ಯಾವುದೇ ಕಾರಣಕ್ಕೂ ವಾಪಸ್ ಕಳುಹಿಸಬಾರದು. ಅಂತಹ ದೂರುಗಳು ಬಂದರೆ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಎಚ್ಚರಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ತಾಲೂಕಿನ ವಿವಿಧ ಬ್ಯಾಂಕುಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 1.15 ಲಕ್ಷ ರೈತರಿಗೆ ಬೆಳೆ ವಿಮೆ ನೋಂದಣಿ ಮಾಡುವ ಗುರಿ ಹೊಂದಲಾಗಿದ್ದು, ಇದುವರೆಗೆ ಕೇವಲ 20 ಸಾವಿರ ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೆಕ್ಕೆಜೋಳ ಬೆಳೆ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನವಾಗಿರುವುದರಿಂದ ರೈತರಿಗೆ ಯಾವುದೇ ತೊಂದರೆಯಾಗದಂತೆ ತ್ವರಿತವಾಗಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರೈತರು ಕೂಡ ವಿಳಂಬ ಮಾಡದೆ ಕೂಡಲೇ ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಕಳೆದ ಸಾಲಿನ ಬೆಳೆ ವಿಮೆ ಪರಿಹಾರವಾಗಿ ವಿಜಯನಗರ ಜಿಲ್ಲೆಗೆ 50 ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮುಹಮ್ಮದ್ ನೊಂಗಾಜ್ ಅಲಿ, ಉಪವಿಭಾಗಾಧಿಕಾರಿ ಸುರೇಶ್‌ಕುಮಾರ್, ತಹಶೀಲ್ದಾರ್ ಗಿರೀಶಬಾಬು, ತಾಪಂ ಇಒ ಚಂದ್ರಶೇಖರ ಹಾಗೂ ನಗರಸಭೆ ಪೌರಾಯುಕ್ತೆ ರೇಣುಕಾ ಎಸ್. ದೇಸಾಯಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News