ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ವಿಳಂಬ: ಶಾಸಕರ ವಿರುದ್ಧ ಆನಂದ್ ಸಿಂಗ್ ವಾಗ್ದಾಳಿ
ಹೊಸಪೇಟೆ/ವಿಜಯನಗರ : ಹೊಸಪೇಟೆ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಬೇಕು ಎಂಬುದು ರೈತರ ಬಹುದಿನಗಳ ಬೇಡಿಕೆಯಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕಾರ್ಖಾನೆ ಸ್ಥಾಪನೆಗಾಗಿ ಈಗಾಗಲೇ 84 ಎಕರೆ ಜಾಗ ಮೀಸಲಿಡಲಾಗಿದ್ದು, ಕಾರ್ಖಾನೆ ಮಾಲೀಕರು ಹಣ ಪಾವತಿಸಿದ್ದಾರೆ. ಸಚಿವ ಸಂಪುಟದಲ್ಲಿಯೂ ಅನುಮೋದನೆ ದೊರೆತಿದೆ. ಆದರೂ ಕಾರ್ಖಾನೆ ಸ್ಥಾಪನೆಯಾಗದಿರುವುದು ಬೇಸರದ ಸಂಗತಿ ಎಂದು ಮಾಜಿ ಸಚಿವ ಆನಂದ್ ಸಿಂಗ್ ಹೇಳಿದರು.
ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಸಾರ್ವಜನಿಕರು ಹೋರಾಟ ನಡೆಸುತ್ತಿದ್ದಾರೆ. ಶಾಸಕರು ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿವೆ. ಕಾರ್ಖಾನೆ ಸ್ಥಾಪನೆಯ ಕುರಿತು ಯಾವಾಗ ಪ್ರಶ್ನಿಸಿದರೂ ಸ್ಥಾಪಿಸುವುದಾಗಿ ಹೇಳುತ್ತಾರೆ. ಆದರೆ, ಸರ್ಕಾರ ಜಾಗ ನೀಡಿದರೆ ಕಾರ್ಖಾನೆ ಸ್ಥಾಪಿಸುವುದಾಗಿ ಹೇಳುತ್ತಿದ್ದಾರೆ. ಸರ್ಕಾರ ಸಹಕಾರ ನೀಡಲು ಸಿದ್ಧವಿದ್ದರೂ ಕಾರ್ಖಾನೆ ಸ್ಥಾಪನೆಯಾಗುತ್ತಿಲ್ಲ ಎಂದು ಟೀಕಿಸಿದರು.
ತಾವು ಗುರುತಿಸಿದ ಜಾಗದಲ್ಲಿ ಕಾರ್ಖಾನೆ ಸ್ಥಾಪಿಸುವುದು ಬೇಡ ಎಂಬ ನಿಲುವು ವ್ಯಕ್ತವಾಗುತ್ತಿದೆ. ಈ ವಿಚಾರವಾಗಿ ಇತ್ತೀಚೆಗೆ ಶಾಸಕರ ಮನೆಗೂ ಭೇಟಿ ನೀಡಿ ಚರ್ಚಿಸಿದ್ದೇನೆ. ಆದರೆ, ಈವರೆಗೆ ಕಾರ್ಖಾನೆ ಸ್ಥಾಪನೆಗೆ ಸಂಬಂಧಿಸಿದಂತೆ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಹೋರಾಟಕ್ಕೆ ಬೆಂಬಲ :
ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. “ನಾನು ಹೋರಾಟಕ್ಕೆ ಹೋದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಸಾಧ್ಯತೆಯಿದೆ. ಆದರೆ, ಅನಿವಾರ್ಯತೆ ಎದುರಾದರೆ ಖಂಡಿತವಾಗಿಯೂ ಹೋರಾಟದಲ್ಲಿ ಭಾಗವಹಿಸುತ್ತೇನೆ. ರೈತರ ಹೋರಾಟಕ್ಕೆ ನನ್ನ ಅಗತ್ಯವಿದ್ದರೆ ನಾನೂ ಹೋರಾಟಕ್ಕೆ ಬರುತ್ತೇನೆ” ಎಂದು ಆನಂದ್ ಸಿಂಗ್ ಭರವಸೆ ನೀಡಿದರು.
ಊಹಾಪೋಹಗಳಿಗೆ ಕಿವಿಗೊಡಬೇಡಿ: ಶಾಸಕ ಎಚ್.ಆರ್. ಗವಿಯಪ್ಪ
ಸಕ್ಕರೆ ಕಾರ್ಖಾನೆ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಜಯನಗರ ಕ್ಷೇತ್ರದ ಶಾಸಕ ಎಚ್.ಆರ್. ಗವಿಯಪ್ಪ, “ಊಹಾಪೋಹಗಳಿಗೆ ಕಿವಿಗೊಡಬೇಡಿ. ಕ್ಷೇತ್ರದ ಹಾಗೂ ರೈತರ ಹಿತ ಕಾಪಾಡಲು ನಾನು ಬದ್ಧನಾಗಿದ್ದೇನೆ. ಈ ನಿಟ್ಟಿನಲ್ಲಿ ಕಾರ್ಯನಿರತನಾಗಿದ್ದೇನೆ. ನನ್ನ ಬಗ್ಗೆ ಮಾತನಾಡುತ್ತಿರುವವರಿಗೆ ವಾಸ್ತವಾಂಶ ಏನೆಂಬುದು ಈಗಾಗಲೇ ಗೊತ್ತಿದೆ. ಸುಮ್ಮನೆ ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.