ಹೊಸಪೇಟೆ/ವಿಜಯನಗರ: ಸ್ವಚ್ಛತಾ ಹಿ ಸೇವಾ ಅಭಿಯಾನ–2026ರ ಅಂಗವಾಗಿ ವಿಜಯನಗರ ಜಿಲ್ಲಾ ಪಂಚಾಯಿತಿ, ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ (FES) ಹಾಗೂ ಹೊಸಪೇಟೆಯ ಪ್ರೌಢದೇವರಾಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (PDIT) ವತಿಯಿಂದ ಹೊಸಪೇಟೆ ತಾಲ್ಲೂಕಿನ ಡಣಾನಾಯಕನಕೆರೆ ಗ್ರಾಮದಲ್ಲಿ ಪುರಾತನ ಕಲ್ಯಾಣಿಯ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಮೌನೇಶ್ ಬಿ.ವಿ. ಹಾಗೂ ಹೊಸಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ. ಆಲಂ ಭಾಷಾ ಅವರು ‘ತಾಯಿಯ ಹೆಸರಿನಲ್ಲಿ ಒಂದು ಗಿಡ’ ಕಾರ್ಯಕ್ರಮದಡಿ ಸಸಿ ನೆಡುವ ಮೂಲಕ ಶ್ರಮದಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೌನೇಶ್ ಬಿ.ವಿ., ಪುರಾತನ ಕಲ್ಯಾಣಿಗಳು ನಮ್ಮ ಪರಂಪರೆ ಹಾಗೂ ಗ್ರಾಮೀಣ ಜಲಸಂಸ್ಕೃತಿಯ ಪ್ರತೀಕಗಳಾಗಿವೆ. ಅವುಗಳನ್ನು ಸ್ವಚ್ಛವಾಗಿಟ್ಟುಕೊಂಡು ಪುನಶ್ಚೇತನಗೊಳಿಸುವುದು ಅಂತರ್ಜಲ ವೃದ್ಧಿ, ಪರಿಸರ ಸಮತೋಲನ ಹಾಗೂ ಭವಿಷ್ಯದ ಪೀಳಿಗೆಗೆ ಜಲಸಂಪನ್ಮೂಲಗಳನ್ನು ಉಳಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ಜಲಮೂಲಗಳ ಸಂರಕ್ಷಣೆ ಕೇವಲ ಸರ್ಕಾರಿ ಇಲಾಖೆಗಳ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. ಇಂತಹ ಶ್ರಮದಾನ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಡಿ. ಆಲಂ ಭಾಷಾ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಜಲಮೂಲಗಳ ಪುನಶ್ಚೇತನ, ಸ್ವಚ್ಛತೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಸುಸ್ಥಿರ ಗ್ರಾಮ ನಿರ್ಮಾಣಕ್ಕೆ ಅಗತ್ಯವಾಗಿದೆ. ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದೊಂದಿಗೆ ಜನಸಹಭಾಗಿತ್ವಕ್ಕೂ ಆದ್ಯತೆ ನೀಡಿದಾಗ ಕಲ್ಯಾಣಿಗಳು, ಕೆರೆಗಳು ಸೇರಿದಂತೆ ವಿವಿಧ ಜಲಮೂಲಗಳನ್ನು ಸಂರಕ್ಷಿಸಲು ಸಾಧ್ಯ. ನೀರಿನ ಸಂರಕ್ಷಣೆಯನ್ನು ಪ್ರತಿಯೊಬ್ಬರೂ ತಮ್ಮ ಸಂಕಲ್ಪವನ್ನಾಗಿಸಿಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳಿಂದ ಪರಿಸರ ಜಾಗೃತಿ :

FES ಸಂಸ್ಥೆಯ ಮುಖ್ಯಸ್ಥ ಕೆ. ವಾಸುದೇವ ಮೂರ್ತಿ ಹಾಗೂ PDITನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಶಿವ ಕೇಶವ ಕುಮಾರ್ ಅವರ ನೇತೃತ್ವದಲ್ಲಿ ವಿಭಾಗದ ಅಂತಿಮ ವರ್ಷದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಶ್ರಮದಾನದಲ್ಲಿ ಪಾಲ್ಗೊಂಡರು. ಪುರಾತನ ಕಲ್ಯಾಣಿಯ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸುವ ಮೂಲಕ ಜಲಮೂಲಗಳ ಸಂರಕ್ಷಣೆ ಹಾಗೂ ಪರಿಸರ ಸ್ವಚ್ಛತೆಯ ಮಹತ್ವವನ್ನು ಸಾರಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿಲಾನ್ ಸಾಬ್, ತಾಲ್ಲೂಕು VB-G-RAM-G ಐಇಸಿ ಸಂಯೋಜಕ ಎಚ್. ನಾಗರಾಜ್, ತಾಂತ್ರಿಕ ಸಹಾಯಕರು, ಸಾಮಾಜಿಕ ಅರಣ್ಯ ಉಪವಲಯ ಅರಣ್ಯಾಧಿಕಾರಿ ಬಿ. ನಿಸಾರ್ ಅಹಮದ್, ಅರಣ್ಯ ಇಲಾಖೆಯ ತಾಂತ್ರಿಕ ಸಹಾಯಕ ಯಲ್ಲೇಶ್ ಕುಮಾರ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ)ದ ಕುಮಾರಿ ನಿಖಿತಾ ಉಪಸ್ಥಿತರಿದ್ದರು. ಜಿಲ್ಲಾ ಐಇಸಿ ಸಮಾಲೋಚಕ ಹನುಮಂತ ನಾಯಕ ಕಾರ್ಯಕ್ರಮ ನಿರ್ವಹಿಸಿದರು.

ಪುರಾತನ ಕಲ್ಯಾಣಿಯ ಸ್ವಚ್ಛತೆ ಮತ್ತು ಸಂರಕ್ಷಣೆಯ ಮೂಲಕ ಜಲಮೂಲಗಳ ರಕ್ಷಣೆಯ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor