ಕೂಡ್ಲಿಗಿ: ತಾಲೂಕಿನ ಬಣವಿಕಲ್ಲು ಮತ್ತು ಅಮಲಾಪುರ ಗ್ರಾಮಗಳ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಹೆಣ್ಣು ಚಿರತೆಯೊಂದು ಮೃತಪಟ್ಟಿದೆ.

ಶುಕ್ರವಾರ ಬೆಳಗಿನ ಜಾವ ಸುಮಾರು 5 ಗಂಟೆಗೆ ಹೆದ್ದಾರಿ ದಾಟುತ್ತಿದ್ದ ಚಿರತೆಗೆ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ತೀವ್ರವಾಗಿ ಗಾಯಗೊಂಡ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ಸಂದೀಪ್ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪಶುವೈದ್ಯಾಧಿಕಾರಿಗಳಿಂದ ಮೃತಪಟ್ಟ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಅರಣ್ಯ ಪ್ರದೇಶಗಳು ಹಾಗೂ ವನ್ಯಜೀವಿಗಳ ಸಂಚಾರ ಮಾರ್ಗಗಳ ಸಮೀಪ ಹಾದುಹೋಗುವ ಹೆದ್ದಾರಿಗಳಲ್ಲಿ ವಾಹನಗಳ ವೇಗವು ವನ್ಯಜೀವಿಗಳ ಜೀವಕ್ಕೆ ಅಪಾಯ ತಂದೊಡ್ಡುತ್ತಿದೆ. ಹೆದ್ದಾರಿ ದಾಟುವ ಸಂದರ್ಭದಲ್ಲಿ ಪ್ರಾಣಿಗಳು ವಾಹನಗಳಿಗೆ ಸಿಲುಕಿ ಮೃತಪಟ್ಟಿರುವ ಘಟನೆಗಳು ವನ್ಯಜೀವಿಗಳ ಸುರಕ್ಷತೆಯ ಕುರಿತು ಆತಂಕ ಮೂಡಿಸಿವೆ.

ವನ್ಯಜೀವಿಗಳ ಸಂಚಾರವಿರುವ ಪ್ರದೇಶಗಳಲ್ಲಿ ವೇಗ ನಿಯಂತ್ರಣ ಫಲಕಗಳನ್ನು ಅಳವಡಿಸುವುದು, ವಾಹನಗಳ ವೇಗಕ್ಕೆ ಕಡಿವಾಣ ಹಾಕುವುದು ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ. ಅಮೂಲ್ಯ ವನ್ಯಸಂಪತ್ತಿನ ಸಂರಕ್ಷಣೆಗೆ ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪರಿಸರಾಸಕ್ತರು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor