ವಿಜಯನಗರ 11-ಎ ಉಪಕಾಲುವೆಗಳಿಗೆ ನೀರು ಹರಿಸಲು ಆಗ್ರಹಿಸಿ ರೈತರ ಪ್ರತಿಭಟನೆ : ಬಿಜೆಪಿಯಿಂದ ಬೆಂಬಲ

Update: 2026-07-20 20:36 IST

ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ವಿಜಯನಗರ ಎಡದಂಡೆಯ 11-ಎ ವಿತರಣಾ ವ್ಯಾಪ್ತಿಯ ಉಪಕಾಲುವೆಗಳಿಗೆ ತಕ್ಷಣ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರೈತರು ಹಾಗೂ ಬಿಜೆಪಿ ಮುಖಂಡರು ಸೋಮವಾರ ಹಿಟ್ನಾಳದ ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಿಟ್ನಾಳ, ಬಂಡಿಹರ್ಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಈಗಾಗಲೇ ಹಲವು ಬಾರಿ ಸಭೆ ನಡೆಸಿ, ವಿಜಯನಗರ ಎಡದಂಡೆ ಹಾಗೂ ಹಿರೇಹಳ್ಳ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ತುಂಗಭದ್ರಾ ಮಂಡಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್, ಅಣೆಕಟ್ಟಿನ ನೀರನ್ನು ನಂಬಿ ಬೆಳೆ ಬೆಳೆಯಬೇಡಿ ಎಂಬ ಸರ್ಕಾರದ ನಿಲುವು ಸರಿಯಲ್ಲ. ಇದೇ ಕಾರಣ ನೀಡಿ ಅಧಿಕಾರಿಗಳು ಕಾಲುವೆಗಳಿಗೆ ನೀರು ಹರಿಸಲು ನಿರಾಕರಿಸುತ್ತಿದ್ದು, ರೈತರೊಂದಿಗೆ ಸೌಜನ್ಯದಿಂದಲೂ ವರ್ತಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಹೊರರಾಜ್ಯಗಳ ಒತ್ತಡಕ್ಕೆ ಮಣಿದು ರೈತರಿಗೆ ನೀರು ನೀಡಲು ಸಾಧ್ಯವಿಲ್ಲ ಎಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ತುಂಗಭದ್ರಾ ಜಲಾಶಯ ನಿರ್ಮಾಣಕ್ಕಾಗಿ ಈ ಭಾಗದ ರೈತರು ಜಮೀನು ಕಳೆದುಕೊಂಡಿದ್ದು, ನೀರಿನ ಮೇಲೆ ಐತಿಹಾಸಿಕ ಹಕ್ಕು ಹೊಂದಿದ್ದಾರೆ. ಇದು ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ; ನಮ್ಮ ಪಾಲಿನ ನೀರಿಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಎರಡು ವರ್ಷಗಳ ಹಿಂದೆ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಮುರಿದ ಬಳಿಕ ಉಳಿದ ಗೇಟ್‌ಗಳ ದುರಸ್ತಿಯನ್ನು ಸಮರ್ಪಕವಾಗಿ ಕೈಗೊಂಡಿದ್ದರೆ ಇಂದಿನ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಜಲಾಶಯದ ದುಸ್ಥಿತಿಗೆ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

ರೈತ ಮುಖಂಡರು ಮಾತನಾಡಿ, ವಿಜಯನಗರ ಕಾಲುವೆಗಳ ನೀರು ಸರ್ಕಾರದ ಭಿಕ್ಷೆಯಲ್ಲ. ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಈ ಭಾಗದ ರೈತರು ಈ ನೀರನ್ನು ಅವಲಂಬಿಸಿ ಕೃಷಿ ಮಾಡುತ್ತಿದ್ದು, ಕೃಷ್ಣಾ ಜಲವಿವಾದ ನ್ಯಾಯಮಂಡಳಿಯೂ ವಿಜಯನಗರ ಕಾಲುವೆಗಳ 5.71 ಟಿಎಂಸಿ ಐತಿಹಾಸಿಕ ನೀರಿನ ಹಕ್ಕನ್ನು ಮಾನ್ಯತೆ ನೀಡಿದೆ ಎಂದು ಹೇಳಿದರು.

ಕಾಲುವೆಗಳಿಗೆ ನೀರು ಹರಿಸದಿದ್ದರೆ ಕೃಷಿ ಸಂಪೂರ್ಣ ಸ್ಥಗಿತಗೊಳ್ಳುವುದರ ಜೊತೆಗೆ ಆಹಾರ ಧಾನ್ಯ ಹಾಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ವಿಜಯನಗರ ಎಡದಂಡೆಯ 11-ಎ ವಿತರಣಾ ವ್ಯಾಪ್ತಿಗೆ ತಕ್ಷಣ 1.5 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಬಳಿಕ ರೈತರು ಹಾಗೂ ಬಿಜೆಪಿ ಮುಖಂಡರು ತುಂಗಭದ್ರಾ ಮಂಡಳಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಸರ್ಕಾರ ತಕ್ಷಣ ಸ್ಪಂದಿಸದಿದ್ದರೆ ಮುನಿರಾಬಾದ್‌ನ ತುಂಗಭದ್ರಾ ಜಲಾಶಯದ ಎದುರು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಡಾ. ಬಸವರಾಜ್ ಕ್ಯಾವಟರ್, ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ್ ಪಾಟೀಲ್ ಮೈನಹಳ್ಳಿ, ವೀರೇಶ್ ಸಜ್ಜನ್, ಗಣೇಶ್ ಹೊರತಟ್ನಾಳ, ಪ್ರಭುರಾಜ ಪಾಟೀಲ್, ಪ್ರದೀಪ್ ಹಿಟ್ನಾಳ, ಖಾಸಿಂಸಾಬ್, ವಿರೂಪಾಕ್ಷಯ್ಯ ಹಿರೇಮಠ , ವೆಂಕಟರಾವ್ ರೆಡ್ಡಿ, ಕಾಶಯ್ಯ ಅಜ್ಜ, ಹುಲಗಪ್ಪ ಬಾಳಿಕಾಯಿ , ಚನ್ನಪ್ಪಮಲಗಿ , ಖಾಜಾಹುಸೇನ್ ಹೊಸಳ್ಳಿ , ವೆಂಕಟೇಶ್ ಹಲವರ್ತಿ , ಹುಲಗಪ್ಪ ಗಡಾದ ಅನ್ವರ್ ಸಾಬ , ಮಹೇಶ್ ಮಂಗಳೂರು , ಯಂಕಪ್ಪ ಹೊಸಳ್ಳಿ , ಅಶೋಕ ಗುಳದಳ್ಳಿ, ನೀಲಕಂಠಯ್ಯ ಹಾಗೂ ಹಿಟ್ನಾಳ, ಬಂಡಿಹರ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯ ರೈತ ಮುಖಂಡರು ಪಾಲ್ಗೊಂಡಿದ್ದರು.

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News