ಕೂಡ್ಲಿಗಿ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ: 1.97 ಲಕ್ಷ ಮತದಾರರ ನೋಂದಣಿ
ಕೂಡ್ಲಿಗಿ: 96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 2026ನೇ ಸಾಲಿನ ಅಂತಿಮ ಮತದಾರರ ಪಟ್ಟಿಯನ್ನು ತಾಲೂಕು ಆಡಳಿತ ಸೌಧದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.
ತಹಶೀಲ್ದಾರ್ ಕುಮಾರಿ ನೇತ್ರಾವತಿ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮತದಾರರ ಪಟ್ಟಿಯ ಅಂಕಿಅಂಶಗಳನ್ನು ಪ್ರಕಟಿಸಲಾಯಿತು. ಕ್ಷೇತ್ರದಲ್ಲಿ ಒಟ್ಟು 1,97,922 ಮತದಾರರು ನೋಂದಣಿಯಾಗಿದ್ದು, ಇವರಲ್ಲಿ 1,00,474 ಪುರುಷರು, 97,393 ಮಹಿಳೆಯರು ಹಾಗೂ 15 ತೃತೀಯ ಲಿಂಗದ ಮತದಾರರಿದ್ದಾರೆ. ಇದರೊಂದಿಗೆ 40 ಸೇವಾ ಮತದಾರರು ಪಟ್ಟಿಯಲ್ಲಿದ್ದಾರೆ.
ಕ್ಷೇತ್ರದ ಅಂದಾಜು ಜನಸಂಖ್ಯೆ 2,78,824 ಆಗಿದ್ದು, ಮತದಾರರ ಅನುಪಾತ ಶೇ.70.97ರಷ್ಟಿದೆ. ಲಿಂಗಾನುಪಾತ 969 ಆಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಮತದಾರರ ಪಟ್ಟಿಯಲ್ಲಿ 18ರಿಂದ 19 ವರ್ಷ ವಯಸ್ಸಿನ 4,120 ಯುವ ಮತದಾರರು ನೋಂದಣಿಯಾಗಿದ್ದಾರೆ. 85 ವರ್ಷ ಮೇಲ್ಪಟ್ಟ 1,179 ಹಿರಿಯ ನಾಗರಿಕರು, 2,502 ಅಂಗವಿಕಲ ಮತದಾರರು ಹಾಗೂ ಒಬ್ಬ ಅನಿವಾಸಿ ಭಾರತೀಯ ಪುರುಷ ಮತದಾರರು ಪಟ್ಟಿಯಲ್ಲಿದ್ದಾರೆ.
2026ರ ಕರಡು ಮತದಾರರ ಪಟ್ಟಿಯಲ್ಲಿ 1,94,863 ಮತದಾರರಿದ್ದರು. ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಹೊಸದಾಗಿ 3,637 ಮತದಾರರನ್ನು ಸೇರ್ಪಡೆಗೊಳಿಸಲಾಗಿದ್ದು, 9,970 ಮತದಾರರ ವಿವರಗಳನ್ನು ತಿದ್ದುಪಡಿ ಮಾಡಲಾಗಿದೆ.
ಮರಣ ಹೊಂದಿದ ಇಬ್ಬರು, ಖಾಯಂ ಆಗಿ ಸ್ಥಳಾಂತರಗೊಂಡ 543 ಮಂದಿ ಹಾಗೂ ಇತರ ಕಾರಣಗಳಿಂದ 33 ಮಂದಿ ಸೇರಿದಂತೆ ಒಟ್ಟು 578 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಪರಿಷ್ಕರಣೆಯ ಬಳಿಕ ಮತದಾರರ ಸಂಖ್ಯೆಯಲ್ಲಿ ನಿವ್ವಳ 3,059ರಷ್ಟು ಹೆಚ್ಚಳವಾಗಿದೆ.
ಮುಂಬರುವ ಚುನಾವಣೆಗಳ ಸಿದ್ಧತೆಯ ಭಾಗವಾಗಿ ಕ್ಷೇತ್ರದಲ್ಲಿ 237 ಗ್ರಾಮೀಣ ಹಾಗೂ 27 ನಗರ ಮತಗಟ್ಟೆಗಳು ಸೇರಿದಂತೆ ಒಟ್ಟು 264 ಮತಗಟ್ಟೆಗಳನ್ನು ಗುರುತಿಸಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಒಟ್ಟು 1,821 ನೋಟಿಸ್ಗಳನ್ನು ಸಿದ್ಧಪಡಿಸಿ ಸಂಬಂಧಪಟ್ಟವರಿಗೆ ತಲುಪಿಸಲಾಗಿತ್ತು. ಈ ಎಲ್ಲ 1,821 ಪ್ರಕರಣಗಳ ವಿಚಾರಣೆಯನ್ನು ಪೂರ್ಣಗೊಳಿಸಲಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಜಿಲಾನ್, ವಿಜಯಕುಮಾರ್ ಮತ್ತು ತಿಪ್ಪೇರುದ್ರ, ಬಿಜೆಪಿ ಪಕ್ಷದ ಸೂರ್ಯ ಪಾಪಣ್ಣ ಮತ್ತು ಮಂಜುನಾಥ, ಜೆಡಿಎಸ್ ಪಕ್ಷದ ಗುಪ್ಪಲ್ ಕಾರಪ್ಪ, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಪತ್ರಿಕಾ ಮಾಧ್ಯಮದ ಪ್ರತಿನಿಧಿಗಳು ಉಪಸ್ಥಿತರಿದ್ದರು.