ಅಂತಿಮ ಮತದಾರರ ಪಟ್ಟಿ ಪ್ರಕಟ | ವಿಜಯನಗರ ಜಿಲ್ಲೆಯಲ್ಲಿ 10,08,367 ಮತದಾರರು : ಡಿಸಿ ಕವಿತಾ ಎಸ್. ಮನ್ನಿಕೇರಿ
ವಿಜಯನಗರ (ಹೊಸಪೇಟೆ) : ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಡಿ ವಿಜಯನಗರ ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜಿಲ್ಲೆಯ 1,301 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಒಟ್ಟು 10,08,367 ಮತದಾರರಿದ್ದು, ಇವರಲ್ಲಿ 5,05,785 ಪುರುಷರು, 5,02,477 ಮಹಿಳೆಯರು ಹಾಗೂ 105 ತೃತೀಯ ಲಿಂಗದ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಎಸ್ಐಆರ್ ಅಂತಿಮ ಮತದಾರರ ಪಟ್ಟಿ ಹಾಗೂ ಯುನೆಸ್ಕೋ ತಂಡದ ಭೇಟಿ ಕುರಿತು ಮಾಹಿತಿ ಹಂಚಿಕೊಳ್ಳಲು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕಾರ, ಪ್ರತಿ 1,000 ಪುರುಷ ಮತದಾರರಿಗೆ 994 ಮಹಿಳಾ ಮತದಾರರ ಅನುಪಾತವಿದೆ. ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ ಹೊಸದಾಗಿ 14,210 ಮತದಾರರು ಸೇರ್ಪಡೆಯಾಗಿದ್ದು, ಇದು ಒಟ್ಟು ಮತದಾರರ ಸಂಖ್ಯೆಯ ಶೇ. 1.31ರಷ್ಟಿದೆ. ಸೇವಾ ಮತದಾರರ ವಿಭಾಗದಲ್ಲಿ 356 ಮಂದಿ ನೋಂದಾಯಿತರಾಗಿದ್ದು, ಇವರಲ್ಲಿ 351 ಪುರುಷರು ಹಾಗೂ ಐವರು ಮಹಿಳೆಯರಿದ್ದಾರೆ ಎಂದು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಮೃತಪಟ್ಟವರು, ವಿಳಾಸ ಬದಲಿಸಿಕೊಂಡವರು, ಗೈರುಹಾಜರಾದವರು ಹಾಗೂ ಬೇರೆಡೆ ಈಗಾಗಲೇ ನೋಂದಾಯಿಸಿಕೊಂಡವರ ವಿವರಗಳನ್ನು ಪರಿಶೀಲಿಸಲಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ ಒಟ್ಟು 11,42,732 ಮತದಾರರಿದ್ದರು. ಇವರಲ್ಲಿ 38,412 ಮಂದಿ ಮೃತಪಟ್ಟವರು, 21,224 ಮಂದಿ ಗೈರುಹಾಜರಾದವರು, 69,598 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 415 ಮಂದಿ ಇತರ ವರ್ಗಕ್ಕೆ ಸೇರಿದವರು ಹಾಗೂ 18,926 ಮಂದಿ ಈಗಾಗಲೇ ಬೇರೆಡೆ ನೋಂದಾಯಿಸಿಕೊಂಡವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಒಟ್ಟು 1,48,575 ಮತದಾರರ ಹೆಸರುಗಳನ್ನು ವಿಶೇಷ ಪರಿಷ್ಕರಣೆ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ 30,622 ಮತದಾರರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಏಳು ದಿನಗಳೊಳಗೆ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾದವರ ಪೈಕಿ ದಾಖಲೆಗಳನ್ನು ಪರಿಶೀಲಿಸಿ ಅರ್ಹರೆಂದು ಕಂಡುಬಂದ 30,494 ಮತದಾರರನ್ನು ಅಂತಿಮ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಒಟ್ಟು 128 ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಗುರುತಿಸಲಾಗಿದೆ. ಇವರಲ್ಲಿ 26 ಮಂದಿ ಮೃತಪಟ್ಟವರು, 43 ಮಂದಿ ಸ್ಥಳಾಂತರಗೊಂಡವರು ಹಾಗೂ 50 ಮಂದಿ ಬೇರೆಡೆ ಈಗಾಗಲೇ ನೋಂದಾಯಿಸಿಕೊಂಡವರಾಗಿದ್ದಾರೆ. ವಿಳಾಸದಲ್ಲಿ ಲಭ್ಯವಾಗದ ಒಂಬತ್ತು ಮತದಾರರ ವಿವರಗಳನ್ನೂ ಪರಿಶೀಲಿಸಲಾಗಿದ್ದು, ಅವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತದಾರರು ತಮ್ಮ ಹೆಸರು, ವಿಳಾಸ ಸೇರಿದಂತೆ ಮತದಾರರ ಪಟ್ಟಿಯಲ್ಲಿರುವ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು. ಯಾವುದೇ ತಿದ್ದುಪಡಿ ಅಥವಾ ಸೇರ್ಪಡೆ ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಕ್ರಮ ಕೈಗೊಳ್ಳಬಹುದು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಬಿಟ್ಟುಹೋಗಿದ್ದರೆ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಹೊಸದಾಗಿ ನೋಂದಾಯಿಸಿಕೊಳ್ಳಬಹುದು. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಉಪಸ್ಥಿತರಿದ್ದರು.