ಹರಪನಹಳ್ಳಿ: ವೀರಶೈವ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳು ಮೌಲ್ಯಾಧಾರಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಾ ಬಂದಿವೆ ಎಂದು ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ನಗರದ ಎಡಿಬಿ ಕಾಲೇಜು ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಎಡಿಬಿ ಪ್ರಥಮ ದರ್ಜೆ ಕಾಲೇಜಿನ ಸುವರ್ಣ ಮಹೋತ್ಸವ ಹಾಗೂ ಎಸ್‌ಎಸ್‌ಎಚ್ ಜೈನ್ ಪಿಯು ಕಾಲೇಜಿನ ರಜತ ಮಹೋತ್ಸವದ ‘ಸುರ ಸಂಭ್ರಮ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವೀರಶೈವ ಶಿಕ್ಷಣ ಸಂಸ್ಥೆಗಳು ಅನ್ನ, ಅಕ್ಷರ, ಆಶ್ರಯ, ಅರಿವು ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸಮಾಜಕ್ಕೆ ಕೊಡುಗೆ ನೀಡುತ್ತಾ ಗುಣಮಟ್ಟದ ಶಿಕ್ಷಣ ಒದಗಿಸುತ್ತಿವೆ. ಆದರೆ, ನಾಡಿನಾದ್ಯಂತ ಪ್ರಸ್ತುತ ಶಿಕ್ಷಣ ವ್ಯವಸ್ಥೆ ವಿಷಾದಕರ ಸ್ಥಿತಿಯಲ್ಲಿದ್ದು, ಅಂಕಗಳ ಆಧಾರದ ಮೇಲೆ ಶಿಕ್ಷಣವನ್ನು ಅಳೆಯಲಾಗುತ್ತಿದೆ. ಮಕ್ಕಳ ಮೌಲ್ಯ ಹಾಗೂ ಗುಣಮಟ್ಟದ ಬೆಳವಣಿಗೆಗೆ ಸೂಕ್ತ ಆದ್ಯತೆ ನೀಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಥಳೀಯ ತೆಗ್ಗಿನಮಠದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯತೆಯ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಮೂಲಾಧಾರ ಎಂಬ ಧ್ಯೇಯದೊಂದಿಗೆ ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ಅದರ ಶಿಕ್ಷಣ ಸಂಸ್ಥೆಗಳು ಸುವರ್ಣ ಮತ್ತು ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಮೈಲಿಗಲ್ಲಾಗಿದೆ ಎಂದರು.

ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ಶೈಕ್ಷಣಿಕ ಕ್ರಾಂತಿ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ, ಹರಪನಹಳ್ಳಿಯಲ್ಲಿ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾದ ಬಳಿಕ ಈ ಭಾಗದಲ್ಲಿ ಶೈಕ್ಷಣಿಕ ಬೆಳವಣಿಗೆಗೆ ವೇಗ ದೊರೆತಿದ್ದು, ಹರಪನಹಳ್ಳಿ ವಿದ್ಯಾಕಾಶಿಯಾಗಲು ಕಾರಣವಾಗಿದೆ ಎಂದು ಹೇಳಿದರು.

ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಣೇಕಲ್ ಮಹಾಂತೇಶ ಮಾತನಾಡಿ, ಮುಂದಿನ ದಿನಗಳಲ್ಲಿ ಹರಪನಹಳ್ಳಿಯ ಕಾಲೇಜಿನಲ್ಲಿ ಸಿಬಿಎಸ್‌ಇ ಪಠ್ಯಕ್ರಮ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಭೂದಾನಿ ಅಂಬ್ಲಿ ಮಂಜುನಾಥ ಮಾತನಾಡಿ, ಈ ಹಿಂದೆ ತಮ್ಮ ಅಧ್ಯಕ್ಷತೆಯಲ್ಲಿ ಎಡಿಬಿ ಕಾಲೇಜಿನ ರಜತ ಮಹೋತ್ಸವ ಆಚರಿಸಲಾಗಿತ್ತು. ಕಾಲೇಜಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭಿಸಬೇಕು ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಮನವಿ ಮಾಡಿದರು.

ದಾನಿಗಳ ಕುಟುಂಬದ ಸತ್ಯಪಾಲ್ ಜೈನ್ ಮಾತನಾಡಿದರು. ಡಾ. ಅರವಿಂದ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರುಂಡಿ ಸುವರ್ಣ ನಾಗರಾಜ ನಿರೂಪಿಸಿದರು. ಪ್ರಾಚಾರ್ಯ ಡಾ. ಎಸ್.ಎಂ. ಸಿದ್ದಲಿಂಗಮೂರ್ತಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ‘ಸುರ ಸಂಭ್ರಮ’ ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು, ಉಭಯ ಕಾಲೇಜುಗಳ ಆಡಳಿತ ಮಂಡಳಿ ಅಧ್ಯಕ್ಷ ಕೆ. ಕೊಟ್ರೇಶ್ವರ, ಸದಸ್ಯರು, ಪ್ರಾಚಾರ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor