Vijayanagara | ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸುವುದು ಮುಖ್ಯ : ಜಿ.ಕೆ.ಅಮರೇಶ
ಕೊಟ್ಟೂರು (ವಿಜಯನಗರ): ಕ್ರೀಡಾಕೂಟಗಳಲ್ಲಿ ಗೆಲುವು ಸಿಗುವುದು ಒಬ್ಬರಿಗೆ ಮಾತ್ರ. ಭಾಗವಹಿಸಿದವರೆಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಆದರೆ ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದು ಬಹುಮುಖ್ಯ ಎಂದು ತಹಸೀಲ್ದಾರ ಜಿ.ಕೆ. ಅಮರೇಶ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾಗೀರಥಿ ಪದವಿ ಪೂರ್ವ ಕಾಲೇಜಿನ ಆತಿಥ್ಯದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾಕೂಟಗಳು ನಡೆದಾಗ ಮಾತ್ರ ವಿದ್ಯಾರ್ಥಿಗಳು ತಯಾರಿ ನಡೆಸದೆ, ಸದಾ ವಿವಿಧ ಕ್ರೀಡೆಗಳಲ್ಲಿ ತರಬೇತಿ ಪಡೆಯಬೇಕು. ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಓದಿನಲ್ಲೂ ಆಸಕ್ತಿ ಹೆಚ್ಚುವುದರ ಜತೆಗೆ ಸದಾ ಕ್ರಿಯಾಶೀಲರಾಗಿರಲು ಸಾಧ್ಯವಾಗುತ್ತದೆ. ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರು ಮುಂದಿನ ಹಂತದಲ್ಲೂ ಉತ್ತಮ ಪ್ರದರ್ಶನ ನೀಡಿ ಗೆಲುವು ಸಾಧಿಸುವ ಮೂಲಕ ತಾಲೂಕಿಗೆ ಕೀರ್ತಿ ತರಬೇಕು ಎಂದು ಹೇಳಿದರು.
ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಡಿ. ದುರುಗಪ್ಪ ಮಾತನಾಡಿ, ಕ್ರೀಡೆಯಿಂದ ಮನಸ್ಸಿಗೆ ಹುಮ್ಮಸ್ಸು ದೊರೆಯುತ್ತದೆ. ಶಾಲಾ-ಕಾಲೇಜುಗಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡುವುದು ಅಗತ್ಯ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಯಾವುದೇ ವೈಷಮ್ಯವಿಲ್ಲದೆ ಕ್ರೀಡಾ ಮನೋಭಾವದಿಂದ ಸ್ಪರ್ಧಿಸಬೇಕು. ಗೆದ್ದಾಗ ಬೀಗದೆ, ಸೋತಾಗ ಹತಾಶರಾಗದೆ ಮುಂದಿನ ಹಂತದಲ್ಲಿ ಗೆಲುವು ಸಾಧಿಸಲು ಶ್ರಮಿಸಬೇಕು ಎಂದರು.
ಕ್ರೀಡಾ ಜ್ಯೋತಿ ಉದ್ಘಾಟಿಸಿದ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ನಾಗರಾಜ ಹವಾಲ್ದಾರ್ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ತಾಲೂಕುಗಳಲ್ಲೂ ಕ್ರೀಡಾಕೂಟಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ತಮ್ಮಲ್ಲಿರುವ ಕ್ರೀಡಾ ಪ್ರತಿಭೆಯನ್ನು ಸೂಕ್ತವಾಗಿ ಪ್ರದರ್ಶಿಸಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಗೆಲುವಿಗೆ ಮಾತ್ರ ಸೀಮಿತವಾಗದೆ ರಾಜ್ಯ ಮಟ್ಟದಲ್ಲೂ ಸಾಧನೆ ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದರು.
ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಜಿ. ಸೋಮಶೇಖರ ಅಧ್ಯಕ್ಷತೆ ವಹಿಸಿದ್ದರು. ಭಾಗೀರಥಿ ಕಾಲೇಜಿನ ಪ್ರಾಚಾರ್ಯೆ ನಿರ್ಮಲಾ ಶಿವನಗುತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.