ಹರಪನಹಳ್ಳಿ: ಸಾರಿಗೆ ಬಸ್ ಕೊರತೆಯಿಂದ ವಿದ್ಯಾರ್ಥಿಗಳ ಪರದಾಟ; ಹೆಚ್ಚುವರಿ ಬಸ್ಗಳಿಗೆ ಆಗ್ರಹ
ಹರಪನಹಳ್ಳಿ: ತಾಲೂಕಿನ ಅನಂತನಹಳ್ಳಿ ಬಳಿಯಿರುವ ಶಾಲಾ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ನಿತ್ಯ ಬಸ್ ಗಾಗಿ ಪರದಾಡುವಂತಾಗಿದೆ.
ನೀಲಗುಂದ, ಕಡಬಗೆರೆ, ಮತ್ತಿಹಳ್ಳಿ, ಹಲುವಾಗಲು, ನಂದಿಬೇವೂರು, ಕಣಿವೆಹಳ್ಳಿ, ಮೈದೂರು, ಕಂಚಿಕೆರೆ, ಬೆಂಡಿಗೆರೆ, ಇಟ್ಟಿಗುಡಿ ಸೇರಿದಂತೆ ತಾಲೂಕಿನ ವಿವಿಧ ಭಾಗಗಳ 40ಕ್ಕೂ ಹೆಚ್ಚು ಗ್ರಾಮಗಳಿಂದ ಸುಮಾರು 550 ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆಗೆ ಆಗಮಿಸುತ್ತಾರೆ. ಆದರೆ ಈ ಮಾರ್ಗದಲ್ಲಿ ಸಂಚರಿಸುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಕೆಲ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ನಿಲ್ದಾಣದಲ್ಲಿ ನಿಂತಿದ್ದರೂ ನಿಲ್ಲಿಸದೆ ತೆರಳುತ್ತಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇನ್ನು ಕೆಲವು ಬಸ್‌ಗಳಲ್ಲಿ ಅತಿಯಾದ ಪ್ರಯಾಣಿಕರ ದಟ್ಟಣೆಯಿಂದಾಗಿ ಎಲ್ಲ ವಿದ್ಯಾರ್ಥಿಗಳಿಗೂ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶ ಸಿಗುತ್ತಿಲ್ಲ. ಕೆಲ ವಿದ್ಯಾರ್ಥಿಗಳನ್ನು ಮಾತ್ರ ಹತ್ತಿಸಿಕೊಂಡು, ಉಳಿದ ವಿದ್ಯಾರ್ಥಿಗಳನ್ನು ನಿಲ್ದಾಣದಲ್ಲೇ ಬಿಟ್ಟು ಬಸ್‌ಗಳು ತೆರಳುತ್ತಿರುವುದರಿಂದ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಗ್ರಾಮಗಳಲ್ಲಿ ಪೋಷಕರು ಬಸ್‌ಗಳನ್ನು ತಡೆದು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಘಟನೆಗಳೂ ನಡೆದಿವೆ ಎಂದು ಶಾಲಾ ಎಸ್‌ಡಿಎಂಸಿ ಸದಸ್ಯರು ತಿಳಿಸಿದ್ದಾರೆ.
ಶಾಲೆ ಮುಕ್ತಾಯವಾದ ನಂತರ ವಿದ್ಯಾರ್ಥಿಗಳು ಹರಪನಹಳ್ಳಿಗೆ ವಾಪಸ್ ಬರಲು ಸುಮಾರು 550 ವಿದ್ಯಾರ್ಥಿಗಳಿಗೆ ಕೇವಲ ಎರಡು ಬಸ್‌ಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಅಪಾಯಕಾರಿ ರೀತಿಯಲ್ಲಿ ಕಿಕ್ಕಿರಿದು ಪ್ರಯಾಣಿಸುವಂತಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಪೋಷಕರಲ್ಲಿ ಆತಂಕ ಮೂಡಿದೆ.
ಸಮಸ್ಯೆ ಕುರಿತು ಪೋಷಕರು ಹಲವು ಬಾರಿ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದರೂ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕನಿಷ್ಠ ನಾಲ್ಕು ಬಸ್‌ಗಳನ್ನು ಹೆಚ್ಚುವರಿಯಾಗಿ ಓಡಿಸಬೇಕು ಎಂದು ಪೋಷಕರು ಹಾಗೂ ಎಸ್‌ಡಿಎಂಸಿಯವರು ಒತ್ತಾಯಿಸಿದ್ದಾರೆ.
ಈ ಕುರಿತು ಶಾಸಕರ ಗಮನಕ್ಕೂ ಸಮಸ್ಯೆಯನ್ನು ತರಲಾಗಿದ್ದು, ಸೂಕ್ತ ಪರಿಹಾರ ದೊರಕಿಲ್ಲ, ತಕ್ಷಣ ಸಂಬಂಧಿಸಿದ ಮೇಲಾಧಿಕಾರಿಗಳು ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.