Harapanahalli | ಅಡವಿಹಳ್ಳಿಯಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ : ಕಳಸಾರೋಹಣ ಕಾರ್ಯಕ್ರಮ
ಹರಪನಹಳ್ಳಿ: ತಂದೆ–ತಾಯಿಗಳು ಮಕ್ಕಳಿಗೆ ವಿದ್ಯೆ, ವಿನಯ ಹಾಗೂ ಸಂಸ್ಕಾರದ ಶಿಕ್ಷಣ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಬೆಳೆಸಬೇಕು ಎಂದು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಶ್ರೀಮದ್ ಉಜ್ಜಯಿನಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಶ್ರೀ ಬಸವೇಶ್ವರ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಆಗಮ, ಪುರಾಣ ಮತ್ತು ವೇದಗಳು ಪರಮಾತ್ಮನಿಂದ ಬಂದ ಜ್ಞಾನವಾಗಿದ್ದು, ಅವುಗಳನ್ನು ಜನರಿಗೆ ತಲುಪಿಸುವಲ್ಲಿ ನಂದಿಯ ಪಾತ್ರ ಮಹತ್ವದ್ದಾಗಿದೆ ಎಂದು ವಿವರಿಸಿದರು. “ಪರಮಾತ್ಮ ಮತ್ತು ಭಕ್ತರ ನಡುವೆ ನಂದಿ ಮಧ್ಯವರ್ತಿಯಾಗಿದ್ದು, ಪರಮಾತ್ಮನ ಆಪ್ತ ಸಹಾಯಕನಾಗಿದ್ದಾನೆ,” ಎಂದು ಹೇಳಿದರು.
ಅಧಿಕ ಮಾಸವು ಶ್ರೇಷ್ಠ ಮಾಸವಾಗಿದ್ದು, ಇಂತಹ ಪವಿತ್ರ ಸಂದರ್ಭದಲ್ಲಿ ನಂದಿಬಸವೇಶ್ವರ ದೇವಸ್ಥಾನದ ಕಳಸಾರೋಹಣ ನೆರವೇರಿರುವುದು ಅತ್ಯಂತ ಶುಭಕರ ಕಾರ್ಯ ಎಂದು ಹೇಳಿದರು. ದೇವಸ್ಥಾನ ನಿರ್ಮಾಣದ ನಂತರ ಗೋಪುರ ಹಾಗೂ ಕಳಸಾರೋಹಣ ನಡೆದಾಗ ದೇವಾಲಯಕ್ಕೆ ಪೂರ್ಣ ಶಕ್ತಿ ತುಂಬಿದಂತಾಗುತ್ತದೆ ಎಂದು ತಿಳಿಸಿದರು.
ಯುವಜನತೆ ಮದ್ಯವ್ಯಸನದಿಂದ ದೂರ ಉಳಿಯಬೇಕು. ಮಹಿಳೆಯರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರು ಸಮೃದ್ಧ ಬೆಳೆ ಪಡೆಯಲಿ ಎಂದು ಆಶೀರ್ವಚನ ನೀಡಿದರು.
ಧರ್ಮಸಭೆಗೆ ಮುನ್ನ ಗ್ರಾಮದಲ್ಲಿ ವಿವಿಧ ಕಲಾ ವಾದ್ಯಗಳೊಂದಿಗೆ ಭಕ್ತರು ಅಡ್ಡಪಲ್ಲಕ್ಕಿ ಉತ್ಸವವನ್ನು ವಿಜೃಂಭಣೆಯಿಂದ ನಡೆಸಿದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ಚಿರಸ್ತಹಳ್ಳಿ ಮಲ್ಲಿಕಾರ್ಜುನಸ್ವಾಮಿ ಕಲ್ಮಠ ಜಿ.ನಂಜನಗೌಡ್ರು, ಓಂಕಾರಗೌಡ, ಬಣಕಾರ ಮಲ್ಲಿಕಾರ್ಜುನ, ಪೂಜಾರ ದಕ್ಷಿಣಮೂರ್ತಿ, ಬೆಣ್ಣಿ ಪೂಜಾರ ಬಸಪ್ಪ, ಬಳ್ಳಾರಿ ನಾಗಪ್ಪ, ಎ.ಜಿ ಮಂಜುನಾಥ, ಹಾವನೂರು ಹಾಲಪ್ಪ, ಗುಬ್ಬವ್ವರ ಪೂಜಾರ ಬಸವರಾಜ, ಬಿ.ಜಿ.ಶರಣಪ್ಪ, ನಿಂಬಳಗೇರಿ ಬಸವರಾಜ, ಎನ್.ಕೊಟ್ರಪ್ಪ, ಐ.ಎಂ.ಬಸವರಾಜಯ್ಯ, ಕೆ.ಅಂಜಿನಪ್ಪ, ಕೆ.ಕೊಟ್ರಪ್ಪ, ಪೂಜಾರ ಬಸವರಾಜ, ಎಂ.ಕರಿಯಪ್ಪ, ಉಪ್ಪಾರ ಬಸವರಾಜ, ಚಾಕರಿ ಮಂಜಪ್ಪ ಸೇರಿದಂತೆ ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.