Harapanahalli | ಕೆರೆಗುಡಿಹಳ್ಳಿಯಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಥಮ ಸಾಮಾನ್ಯ ಸಭೆ
ಹರಪನಹಳ್ಳಿ: ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಪ್ರಥಮ ಸಾಮಾನ್ಯ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೆಎಂಎಫ್ ತಾಲೂಕು ವಿಸ್ತರಣಾಧಿಕಾರಿ ಮೃತ್ಯುಂಜಯ, ಹರಪನಹಳ್ಳಿ ತಾಲೂಕಿನಲ್ಲಿ ಒಟ್ಟು 110 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಮೂಲಕ ಪ್ರತಿದಿನ ಸುಮಾರು 36 ಸಾವಿರ ಲೀಟರ್ ಹಾಲು ಸರಬರಾಜಾಗುತ್ತಿದೆ ಎಂದು ತಿಳಿಸಿದರು. ಇದೀಗ ಕೆರೆಗುಡಿಹಳ್ಳಿಯಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭವಾಗಿರುವುದು ಹಾಲು ಉತ್ಪಾದಕರಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಸಂಘಕ್ಕೆ ಕಾರ್ಯದರ್ಶಿಯನ್ನು ನೇಮಕ ಮಾಡಲಾಗುವುದು. ಸಂಘದ ಹಣಕಾಸಿನ ವ್ಯವಹಾರಗಳನ್ನು ಪಾರದರ್ಶಕವಾಗಿ ನಿರ್ವಹಿಸಲು ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗುವುದು. ಸಂಘದ ಚಟುವಟಿಕೆಗಳು ವಿಸ್ತಾರಗೊಂಡಂತೆ ಸರ್ಕಾರದ ಸಬ್ಸಿಡಿ ಯೋಜನೆಯಡಿ ಅಗತ್ಯ ಉಪಕರಣಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹಾಲು ಉತ್ಪಾದನೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಸಂಘದ ಮೂಲಕ ಸದಸ್ಯರಿಗೆ ಅಗತ್ಯ ಸಹಕಾರ, ಮಾರ್ಗದರ್ಶನ ಹಾಗೂ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಹೈನುಗಾರಿಕೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಮೃತ್ಯುಂಜಯ ತಿಳಿಸಿದರು.
ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ಸಿದ್ದನಗೌಡ, ಸಂಘದ ಅಧ್ಯಕ್ಷೆ ಲಲಿತಮ್ಮ ಭರಮಪ್ಪ, ಉಪಾಧ್ಯಕ್ಷೆ ಲಕ್ಷ್ಮಮ್ಮ ರಾಜಶೇಖರ್, ದುಗ್ಗತ್ತಿ ಚನ್ನಬಸಪ್ಪ, ಗುಡಿಹಳ್ಳಿ ಹಾಲೇಶ್, ಡಿ. ದೇವಿಕಮ್ಮ, ಗೌರಮ್ಮ, ಸುಜಾತ, ಕಮಲಮ್ಮ, ಹಿಟ್ಟಿನ ಗಿರಣಿ ಬಸವರಾಜ್, ಎ. ದುರುಗಪ್ಪ, ಗಿರೀಶ್, ಬಸವರಾಜಪ್ಪ, ವಿರೂಪಾಕ್ಷಪ್ಪ, ಗಂಗಪ್ಪ, ಅಮರೇಶ್ ಸೇರಿದಂತೆ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.