Vijayanagara | ಹಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಹೋಂ ಸ್ಟೇಗಳ ವಿರುದ್ಧ ದಿಢೀರ್ ಕಾರ್ಯಾಚರಣೆ
ವಿಜಯನಗರ (ಹೊಸಪೇಟೆ) : ವಿಶ್ವ ಪಾರಂಪರಿಕ ತಾಣ ಹಂಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ ಅನಧಿಕೃತ ಹೋಂ ಸ್ಟೇ, ಗೆಸ್ಟ್‌ಹೌಸ್ ಹಾಗೂ ಲಾಡ್ಜ್‌ಗಳ ವಿರುದ್ಧ ಜಿಲ್ಲಾಡಳಿತ, ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಂಗಳವಾರ ಜಂಟಿ ಕಾರ್ಯಾಚರಣೆ ನಡೆಸಿದರು.
ಹಂಪಿ, ಹೊಸಹಂಪಿ, ಜನತಾ ಬಜಾರ್, ಕಡ್ಡಿರಾಂಪುರ ಹಾಗೂ ಕಮಲಾಪುರ ವ್ಯಾಪ್ತಿಯಲ್ಲಿ ನಡೆದ ದಿಢೀರ್ ಪರಿಶೀಲನೆಯಲ್ಲಿ ಸೂಕ್ತ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ವಸತಿ ಘಟಕಗಳನ್ನು ತಕ್ಷಣ ಬಂದ್ ಮಾಡುವಂತೆ ಅಧಿಕಾರಿಗಳು ಸೂಚಿಸಿದರು.
ಅನಧಿಕೃತ ಹೋಂ ಸ್ಟೇ, ಗೆಸ್ಟ್‌ಹೌಸ್ ಹಾಗೂ ಲಾಡ್ಜ್‌ಗಳಲ್ಲಿ ನೇರ ಹಾಗೂ ಆನ್‌ಲೈನ್ ಬುಕಿಂಗ್‌ಗಳನ್ನು ತಕ್ಷಣ ಸ್ಥಗಿತಗೊಳಿಸಬೇಕು. ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಕಡ್ಡಿರಾಂಪುರ ಬಳಿ ವೆಂಕಟೇಶ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಹೋಂ ಸ್ಟೇಗೆ ಬಳಸಲಾಗುತ್ತಿದ್ದ ಕೃಷಿ ಉದ್ದೇಶದ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಸಿಬ್ಬಂದಿ ಮೂಲಕ ಕಡಿತಗೊಳಿಸಿ, ಸ್ಥಳದಲ್ಲಿಯೇ ನೋಟಿಸ್ ಜಾರಿ ಮಾಡಲಾಯಿತು.
ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಇ. ಬಾಲಕೃಷ್ಣ ಮಾತನಾಡಿ, ವಸತಿ ಅಥವಾ ಕೃಷಿ ಉದ್ದೇಶಕ್ಕೆ ಅನುಮತಿ ಪಡೆದು ವಾಣಿಜ್ಯ ರೀತಿಯಲ್ಲಿ ಹೋಂ ಸ್ಟೇ ನಡೆಸುವುದು ಕಾನೂನುಬಾಹಿರ. ಪರವಾನಗಿ ಪಡೆದಿದ್ದರೂ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಅಂತಹ ಘಟಕಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸಿ, ಘಟಕಗಳನ್ನು ಸೀಜ್ ಮಾಡಲಾಗುವುದು ಎಂದು ತಿಳಿಸಿದರು.
ಅಧಿಕೃತ ಅನುಮತಿ ದೊರೆಯುವವರೆಗೆ ಹೋಂ ಸ್ಟೇ ನಡೆಸುವುದಿಲ್ಲ ಎಂದು ಮಾಲೀಕರು ಜಿಲ್ಲಾಧಿಕಾರಿ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಲಿಖಿತ ಮುಚ್ಚಳಿಕೆ ಪತ್ರ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ದಾಖಲೆಗಳನ್ನು ಪರಿಶೀಲಿಸಿ ನಿಯಮಾನುಸಾರ ಪರವಾನಗಿ ನೀಡಲಾಗುವುದು ಎಂದರು.
ಹಂಪಿ ಅಭಿವೃದ್ಧಿ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಅಗತ್ಯ ಅನುಮತಿಗಳನ್ನು ಪಡೆದುಕೊಂಡ ನಂತರವೇ ಹೋಂ ಸ್ಟೇಗಳನ್ನು ಪುನರಾರಂಭಿಸಬೇಕು. ನಿಯಮ ಉಲ್ಲಂಘಿಸಿ ಮತ್ತೆ ಕಾರ್ಯಾಚರಣೆ ನಡೆಸಿದರೆ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಕಾರ್ಯಾಚರಣೆಯಲ್ಲಿ ಹೊಸಪೇಟೆ ಉಪವಿಭಾಗಾಧಿಕಾರಿ ವಿವೇಕಾನಂದ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆಲಂ ಪಾಷಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.