Vijayanagara | ಋತುಮಾನದ ಇನ್ಫ್ಲುಯೆಂಜಾ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಡಿಎಚ್ಒ ಸಲಹೆ
ವಿಜಯನಗರ (ಹೊಸಪೇಟೆ) : ಋತುಮಾನದ ಇನ್ಫ್ಲುಯೆಂಜಾ ಸಾಂಕ್ರಾಮಿಕ ರೋಗವಾಗಿದ್ದು, ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಸಲಹೆ ನೀಡಿದ್ದಾರೆ.
ಇನ್ಫ್ಲುಯೆಂಜಾದ ಪ್ರಮುಖ ಲಕ್ಷಣಗಳಲ್ಲಿ ಹೆಚ್ಚಿನ ಜ್ವರ, ನಿರಂತರ ಕೆಮ್ಮು, ಗಂಟಲು ನೋವು, ದೇಹದ ನೋವು, ಶಕ್ತಿ ಹೀನತೆ, ಚಳಿ-ನಡುಕ ಹಾಗೂ ತಲೆನೋವು ಸೇರಿವೆ. ಇಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.
ಜ್ವರ ಅಥವಾ ಕೆಮ್ಮು ಇರುವವರು ಜನಸಂದಣಿ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು. ಕೈಗಳನ್ನು ಸಾಬೂನಿನಿಂದ ನಿಯಮಿತವಾಗಿ ತೊಳೆಯುವುದು, ಸಾಕಷ್ಟು ನೀರು ಕುಡಿಯುವುದು ಹಾಗೂ ವಿಶ್ರಾಂತಿ ಪಡೆಯುವುದು ಅಗತ್ಯ. ಜ್ವರ ಅಥವಾ ಉಸಿರಾಟದ ತೊಂದರೆ ತೀವ್ರವಾಗಿದ್ದರೆ, ಅಥವಾ 2–3 ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯಕೀಯ ಸಲಹೆ ಪಡೆಯಬೇಕು ಎಂದರು.
ಜಿಲ್ಲೆಯಲ್ಲಿ ಇನ್ಫ್ಲುಯೆಂಜಾ ಪ್ರಕರಣಗಳ ಶೀಘ್ರ ಪತ್ತೆ, ಸಮಯೋಚಿತ ಚಿಕಿತ್ಸೆ ಹಾಗೂ ನಿಯಂತ್ರಣಕ್ಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಖಾಸಗಿ ಆರೋಗ್ಯ ಸಂಸ್ಥೆಗಳೊಂದಿಗೆ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಏನು ಮಾಡಬಾರದು: ರೋಗಲಕ್ಷಣಗಳಿರುವಾಗ ಕಣ್ಣು, ಮೂಗು ಹಾಗೂ ಬಾಯಿಯನ್ನು ಪದೇಪದೇ ಮುಟ್ಟಬಾರದು. ಸ್ವಯಂ ಔಷಧೋಪಚಾರ ಮಾಡಬಾರದು. ಕೈಕುಲುಕುವುದನ್ನು ಹಾಗೂ ಜನಸಂದಣಿ ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸಬೇಕು. ಬಳಸಿದ ಕರವಸ್ತ್ರ ಅಥವಾ ನ್ಯಾಪ್ಕಿನ್‌ಗಳನ್ನು ಮರುಬಳಕೆ ಮಾಡಬಾರದು. ರೋಗಲಕ್ಷಣಗಳು ಕಂಡುಬಂದರೆ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ಡಾ. ಲಿಂಗರಾಜು ತಿಳಿಸಿದ್ದಾರೆ.