×
Ad

Harapanahalli | ಇತಿಹಾಸದಲ್ಲಿ ಮುಸ್ಲಿಮರ ಸ್ವಾತಂತ್ರ್ಯ ಹೋರಾಟದ ಕೊಡುಗೆ ನಿರ್ಲಕ್ಷ್ಯ: ಕುಂ.ವೀರಭದ್ರಪ್ಪ

► ಜನದನಿ ಸಾಹಿತ್ಯ ವೇದಿಕೆ ಕಾರ್ಯಕ್ರಮ ► ‘ಸುಳ್ಳುಗಳ ಮಾರುಕಟ್ಟೆಯಲ್ಲಿ’ ಕೃತಿ ಲೋಕಾರ್ಪಣೆ

Update: 2026-07-09 19:36 IST

ಹರಪನಹಳ್ಳಿ, ಜು.9: ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮುಸ್ಲಿಂ ಸಮುದಾಯದ ಕೊಡುಗೆಗೆ ಸಮರ್ಪಕ ಸ್ಥಾನ ಸಿಗದೆ ಅನ್ಯಾಯವಾಗಿದೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು.

ನಗರದ ಟಿ.ಎಂ.ಎ.ಇ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜನದನಿ ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ಇಸ್ಮಾಯಿಲ್ ಯಲಿಗಾರ ಅವರ ‘ಸುಳ್ಳುಗಳ ಮಾರುಕಟ್ಟೆಯಲ್ಲಿ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಈ ಕೃತಿ ಇಂದಿನ ಸಾಮಾಜಿಕ-ರಾಜಕೀಯ ಬೆಳವಣಿಗೆಗಳ ಕುರಿತ ವ್ಯಂಗ್ಯಾತ್ಮಕ ಚಿತ್ರಣವಾಗಿದ್ದು, ಪ್ರಜಾಪ್ರಭುತ್ವದಲ್ಲಿನ ವೈಪರೀತ್ಯಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರವನ್ನು ಮರೆಮಾಚಿ ಇತಿಹಾಸವನ್ನು ಏಕಪಕ್ಷೀಯವಾಗಿ ನಿರೂಪಿಸಲಾಗಿದೆ. ಇದರಿಂದ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರಿಗೆ ನ್ಯಾಯ ದೊರೆತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಮುಸ್ಲಿಂ ಸಮುದಾಯ ಆತಂಕದ ವಾತಾವರಣದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಮಾಜ ಅವರೊಂದಿಗೆ ನಿಲ್ಲುವ ಮೂಲಕ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದರು. ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆಯೂ ಅವರು ಟೀಕಾತ್ಮಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಮಾತನಾಡಿ, ನಿವೃತ್ತಿಯ ಬಳಿಕವೂ ಸಮಾಜಮುಖಿ ಸಾಹಿತ್ಯದ ಮೂಲಕ ಜಾಗೃತಿ ಮೂಡಿಸುತ್ತಿರುವ ಇಸ್ಮಾಯಿಲ್ ಯಲಿಗಾರ ಅವರ ಸೇವೆ ಶ್ಲಾಘನೀಯವಾಗಿದೆ. ಸಮಾಜ ಪರಿವರ್ತನೆಗೆ ಪುಸ್ತಕಗಳು ಪರಿಣಾಮಕಾರಿ ಸಾಧನವಾಗಿದ್ದು, ಅವರ ಕೃತಿಗಳು ಸಮಕಾಲೀನ ಸಮಸ್ಯೆಗಳನ್ನು ಜನರ ಮುಂದೆ ತರುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಿ. ರಾಮನಮಲಿ, ನಿರ್ಮಲಾ ಶಿವನಗುತ್ತಿ, ಪುರಸಭೆ ಮಾಜಿ ಅಧ್ಯಕ್ಷ ಡಿ. ಅಬ್ದುಲ್ ರೆಹಮಾನ್, ವಕೀಲರ ಸಂಘದ ಅಧ್ಯಕ್ಷ ಟಿ. ವೆಂಕಟೇಶ್ ಸೇರಿದಂತೆ ಹಲವರು ಮಾತನಾಡಿದರು.

ಲೇಖಕ ಇಸ್ಮಾಯಿಲ್ ಯಲಿಗಾರ, ಕೋಡಿಹಳ್ಳಿ ಭೀಮಪ್ಪ, ಮೋರಗೇರಿ ಹೇಮಣ್ಣ, ನಿಚ್ಚವ್ವನಹಳ್ಳಿ ಭೀಮಪ್ಪ, ಪ್ರಾಚಾರ್ಯ ಸಿ.ಎಂ. ವೀರೇಶ್, ಮೇಟಿ ಕೊಟ್ರಪ್ಪ, ಹುಲಿಕಟ್ಟೆ ಚೆನ್ನಬಸಪ್ಪ, ಗುಡಿಹಳ್ಳಿ ಹಾಲೇಶ್, ಎನ್.ಜಿ. ಬಸವರಾಜ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News