Vijayanagara | ಪ್ರತ್ಯೇಕ ಕಳವು ಪ್ರಕರಣ : 6 ಆರೋಪಿಗಳ ಬಂಧನ
27 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 15 ಬೈಕ್‌ಗಳ ವಶ
ಹೊಸಪೇಟೆ/ವಿಜಯನಗರ : ವಿಜಯನಗರ ಜಿಲ್ಲಾ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣಗಳನ್ನು ಭೇದಿಸಿ, 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಒಟ್ಟು ಸುಮಾರು 27 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 15 ಕಳುವಾದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಜಾಹ್ನವಿ ಅವರು ಗುರುವಾರ ಹೊಸಪೇಟೆಯ ಎಸ್‌ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದರು.
ಹೊಸಪೇಟೆ ಹಾಗೂ ಹರಪನಹಳ್ಳಿ ಉಪವಿಭಾಗಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಚಿನ್ನಾಭರಣ ಮತ್ತು ಬೈಕ್ ಕಳವು ಪ್ರಕರಣಗಳ ತನಿಖೆಯನ್ನು ವಿಶೇಷ ತಂಡಗಳು ನಡೆಸಿ ಯಶಸ್ವಿಯಾಗಿ ಭೇದಿಸಿವೆ ಎಂದು ಅವರು ತಿಳಿಸಿದರು.
ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣದಲ್ಲಿ ಸುಮಾರು 11 ಲಕ್ಷ ರೂ. ಮೌಲ್ಯದ 6 ಬೈಕ್‌ಗಳು ಹಾಗೂ 33 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಕಳವು ಪ್ರಕರಣದಲ್ಲಿ 2.80 ಲಕ್ಷ ರೂ. ಮೌಲ್ಯದ 28 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಚಿತ್ತವಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳವು ಪ್ರಕರಣದಲ್ಲಿ 4.75 ಲಕ್ಷ ರೂ. ಮೌಲ್ಯದ 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೂವಿನಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯ ಮತ್ತೊಂದು ಪ್ರಕರಣದಲ್ಲಿ 3 ಲಕ್ಷ ರೂ. ಮೌಲ್ಯದ 52 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಜಿಲ್ಲೆಯ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ 6 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣಗಳ ಭೇದನೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್‌ಪಿ ಜಾಹ್ನವಿ ಅಭಿನಂದಿಸಿದರು.