×
Ad

ಹರಪನಹಳ್ಳಿ | ಶಾರ್ಟ್ ಸರ್ಕೂಟ್‌ನಿಂದ ಬೆಂಕಿ : 8 ಎಕರೆ ಮೆಕ್ಕೆಜೋಳ, 6 ಎಕರೆ ರಾಗಿ ಬಣವೆ ಸುಟ್ಟು ಭಸ್ಮ

Update: 2026-01-23 23:34 IST

ಹರಪನಹಳ್ಳಿ: ತಾಲೂಕಿನ ಸಮೀಪದ ಬಾಗಳಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಶಾರ್ಟ್ ಸರ್ಕೂಟ್‌ನಿಂದ ಉಂಟಾದ ಬೆಂಕಿ ಅವಘಡದಲ್ಲಿ 11 ಕೆವಿ ವಿದ್ಯುತ್ ತಂತಿ ಕಣಕ್ಕೆ ಬಿದ್ದು, ಪಕ್ಕದಲ್ಲಿದ್ದ ಮೆಕ್ಕೆಜೋಳದ ಗುಡ್ಡೆಗಳು ಹಾಗೂ ರಾಗಿ ತೆನೆಯ ಬಣವೆಗಳಿಗೆ ಬೆಂಕಿ ಹತ್ತಿ ಭಾರೀ ಹಾನಿ ಸಂಭವಿಸಿದೆ.

ಈ ಅವಘಡದಲ್ಲಿ 8 ಎಕರೆ ಮೆಕ್ಕೆಜೋಳ ಮತ್ತು 6 ಎಕರೆ ರಾಗಿ ತೆನೆಯ ಬಣವೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಬೆಂಕಿ ನಂದಿಸಲು ಗ್ರಾಮಸ್ಥರು ಹರಸಾಹಸ ಪಟ್ಟರೂ, ಅಷ್ಟರಲ್ಲೇ ಕಣದಲ್ಲಿ ಇಟ್ಟಿದ್ದ ಎತ್ತಿನ ಬಂಡಿ ಸೇರಿದಂತೆ ಕೃಷಿ ಸಲಕರಣೆಗಳು ಸಹ ಸಂಪೂರ್ಣವಾಗಿ ಸುಟ್ಟು ನಾಶವಾಗಿವೆ.

ಈ ಬೆಳೆಗಳು ಹುಲ್ಲುಮನಿ ಜಾತಪ್ಪ ಹಾಗೂ ಹುಲ್ಲುಮನಿ ನಾಗರಾಜ ಎಂಬ ಸಹೋದರ ರೈತರಿಗೆ ಸೇರಿದ್ದಾಗಿದ್ದು, ಬೆಂಕಿ ಅವಘಡದಿಂದ ಸುಮಾರು 13 ಲಕ್ಷ ರೂ. ಮೌಲ್ಯದ ಬೆಳೆ ಹಾಗೂ ಕೃಷಿ ಉಪಕರಣಗಳು ನಾಶವಾಗಿವೆ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ.

ಘಟನೆಯ ಬಗ್ಗೆ ಮಾತನಾಡಿದ ರೈತ ಹುಲ್ಲುಮನಿ ಜಾತಪ್ಪ, “ಸಾಲ ಮಾಡಿ ಬೆಳೆ ಬೆಳೆದಿದ್ದೆವು. ಈಗಾಗಲೇ ಅತಿವೃಷ್ಟಿಯಿಂದ ಕೆಲ ಬೆಳೆ ಹಾನಿಯಾಗಿತ್ತು. ಉಳಿದಿದ್ದ ಮೆಕ್ಕೆಜೋಳ ಮತ್ತು ರಾಗಿ ಬಣವೆಗಳ ಮೇಲೆ ಹಳೆಯ ವಿದ್ಯುತ್ ತಂತಿ ಬಿದ್ದು ಸಂಪೂರ್ಣವಾಗಿ ಸುಟ್ಟುಹೋಯಿತು. ಕೃಷಿ ಸಾಲ ತೀರಿಸುವುದು ಮತ್ತು ಕುಟುಂಬ ನಿರ್ವಹಣೆ ಬಗ್ಗೆ ತೀವ್ರ ಚಿಂತೆ ಎದುರಾಗಿದೆ. ಸಂಬಂಧಿಸಿದ ಇಲಾಖೆ ನಷ್ಟಕ್ಕೆ ತಕ್ಕಂತೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News