ಹೊಸಪೇಟೆ/ವಿಜಯನಗರ: ಕೈ ಸಾಲವಾಗಿ ನೀಡಿದ್ದ ಹಣವನ್ನು ಮರಳಿ ಕೇಳಿದ್ದಕ್ಕೆ ಯುವಕನ ತಲೆಗೆ ರುಬ್ಬುಗುಂಡಿನಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಹೊಸಪೇಟೆ ಪಟ್ಟಣದ ಎಸ್.ಎಲ್. ಚೌಕಿ 4ನೇ ಕ್ರಾಸ್‌ನಲ್ಲಿ ತಡರಾತ್ರಿ ನಡೆದಿದೆ.

ಹತ್ಯೆಯಾದ ಯುವಕನನ್ನು ಹೊಸಪೇಟೆ ನಿವಾಸಿ, ಆಟೋ ಚಾಲಕ ಕಿರಣ್ ಅಲಿಯಾಸ್ ಚುಮ್ಮಿ (25) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಕಿರಣ್ ಆರೋಪಿತನಿಗೆ ನೀಡಿದ್ದ ಕೈ ಸಾಲದ ಹಣವನ್ನು ಮರಳಿ ಪಡೆಯಲು ಎಸ್.ಎಲ್. ಚೌಕಿ 4ನೇ ಕ್ರಾಸ್‌ಗೆ ತೆರಳಿದ್ದನು. ಈ ಸಂದರ್ಭದಲ್ಲಿ ನ.10 ಮಂಗಳವಾರ ತಡರಾತ್ರಿ ಸುಮಾರು 1ರಿಂದ 1.30ರ ನಡುವೆ ಆರೋಪಿತನು ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಕಿರಣ್‌ನೊಂದಿಗೆ ಜಗಳವಾಡಿದ್ದಾನೆ. ಬಳಿಕ ರುಬ್ಬುಗುಂಡಿನಿಂದ ಆತನ ತಲೆಗೆ ಹೊಡೆದು ಕೊಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಮೃತನ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 135/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ 103(1) ಹಾಗೂ 3(5)ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕರಿಯಪ್ಪ ಅಲಿಯಾಸ್ ಕರಿಯಾ, ರಾಜಶೇಖರ್ ಹಾಗೂ ವೆಂಕಟೇಶ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor