ವಿಜಯನಗರ (ಹೊಸಪೇಟೆ) : ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿ ‘ಮಹಿಳಾ ಸ್ಪಂದನ’ ಕಾರ್ಯಕ್ರಮವನ್ನು ಕಡ್ಡಾಯವಾಗಿ ಆಯೋಜಿಸಬೇಕು. ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ. ಅದರಲ್ಲೂ ಮಹಿಳೆಯರಿಗೆ ಸರ್ಕಾರದ ಯೋಜನೆಗಳು ಮತ್ತು ಯಾವ ಇಲಾಖೆಯಲ್ಲಿ ಯಾವ ಸೌಲಭ್ಯ ದೊರೆಯುತ್ತದೆ ಎಂಬುದರ ಬಗ್ಗೆ ಸಮರ್ಪಕ ಅರಿವಿಲ್ಲ. ಆದ್ದರಿಂದ ಸರ್ಕಾರದ ಯೋಜನೆಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ತಿಳಿಸಿದರು.

ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳು, ಮೂಲಸೌಕರ್ಯಗಳ ಕೊರತೆ ಹಾಗೂ ಇಲಾಖೆಗಳ ಕಾರ್ಯವೈಖರಿ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದರು.

ಜಿಲ್ಲೆಯ 13 ಗಣಿ ಬಾಧಿತ ಕ್ಯಾಂಪ್‌ಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಡಿಸೆಂಬರ್ ವೇಳೆಗೆ ಕಾಮಗಾರಿಗಳಿಗೆ ಚಾಲನೆ ನೀಡುವ ಉದ್ದೇಶವಿದ್ದು, ವಸತಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಕ್ರಮ ವಹಿಸಲಿದೆ. ಹಲವು ವರ್ಷಗಳಿಂದ ಮೂಲಸೌಕರ್ಯಗಳಿಲ್ಲದೆ ಬದುಕುತ್ತಿರುವ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಗಣಿ ಬಾಧಿತ ಪ್ರದೇಶಗಳಲ್ಲಿ ಕುಡಿಯುವ ನೀರು, ರಸ್ತೆ, ಸಾರಿಗೆ ಹಾಗೂ ವಸತಿ ಸೌಲಭ್ಯಗಳ ಕೊರತೆ ಗಂಭೀರವಾಗಿದೆ. ಮಕ್ಕಳು ಶಾಲೆಗೆ ತೆರಳಲು ಸೂಕ್ತ ರಸ್ತೆಗಳಿಲ್ಲದೆ ರೈಲ್ವೆ ಹಳಿಗಳ ಕೆಳಗೆ ಹಾಗೂ ಅಪಾಯಕಾರಿ ಮಾರ್ಗಗಳಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ದಾಲ್ಮಿಯಾ ಕ್ಯಾಂಪ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಜನರ ಸಂಚಾರಕ್ಕೆ ರೈಲ್ವೆ ಹಳಿಗಳು ಅಡ್ಡಿಯಾಗಿವೆ. ಈ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನ ಸೆಳೆಯಲಾಗಿದೆ ಎಂದರು.

ದೇವದಾಸಿ ಮಹಿಳೆಯರಿಗೆ ಸೌಲಭ್ಯ ಕಲ್ಪಿಸಲು ಸೂಚನೆ :

ದೇವದಾಸಿ ಮಹಿಳೆಯರ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಲಾಗಿದ್ದು, ಅರ್ಹ ಫಲಾನುಭವಿಗಳಿಗೆ ಪುನರ್ವಸತಿ ಸೌಲಭ್ಯ, ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ ಸೌಲಭ್ಯಗಳು ತಲುಪುತ್ತಿಲ್ಲ ಎಂಬ ದೂರುಗಳು ಬಂದಿವೆ. ಪರಿಶೀಲನೆಯ ನೆಪದಲ್ಲಿ ಸೌಲಭ್ಯಗಳನ್ನು ತಡೆಹಿಡಿಯುವ ಬದಲು ಅರ್ಹತೆಯ ಆಧಾರದ ಮೇಲೆ ಸೌಲಭ್ಯ ಕಲ್ಪಿಸಬೇಕು. ಬಾಕಿ ಸಮಸ್ಯೆಗಳನ್ನು ಸರಿಪಡಿಸಿ, ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಸ್ಮಶಾನದಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಉದ್ಯೋಗ :

ನಗರದ ಹೊರವಲಯದಲ್ಲಿ ಸ್ಮಶಾನದಲ್ಲಿ ವಾಸಿಸುತ್ತಿದ್ದ ಕುಟುಂಬದ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ಕುಟುಂಬಕ್ಕೆ ಜೀವನೋಪಾಯ ಕಲ್ಪಿಸುವ ನಿಟ್ಟಿನಲ್ಲಿ ಗಾರ್ಡನರ್ ಉದ್ಯೋಗಾವಕಾಶ ಒದಗಿಸಲಾಗಿದೆ. ಮಕ್ಕಳಿಗೆ ಶಾಲಾ ಶಿಕ್ಷಣ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಲೆಪ್ರಸಿ ಕಾಲೊನಿಯಲ್ಲಿಯೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಜೀವನೋಪಾಯಕ್ಕಾಗಿ 25 ಸಾವಿರ ರೂ. ಪರಿಹಾರ ಘೋಷಿಸಿರುವುದು ಆಯೋಗಕ್ಕೆ ತೃಪ್ತಿ ತಂದಿದೆ ಎಂದರು.

ಭ್ರೂಣ ಹತ್ಯೆ ನಿರ್ಮೂಲನೆಗೆ ಆದ್ಯತೆ :

ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಕಾಲುವೆಯಲ್ಲಿ ನಾಲ್ಕರಿಂದ ಐದು ಭ್ರೂಣಗಳು ಪತ್ತೆಯಾಗಿರುವ ವಿಚಾರ ಗಮನಕ್ಕೆ ಬಂದಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಗೆ ಆಯೋಗದ ವತಿಯಿಂದ ಪತ್ರ ಬರೆಯಲಾಗುವುದು. ಭ್ರೂಣ ಹತ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಹಂಪಿ ಪ್ರದೇಶದಲ್ಲಿ ಸಿಸಿಟಿವಿ ಕಾರ್ಯನಿರ್ವಹಿಸುತ್ತಿಲ್ಲ :

ಹಂಪಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 280 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ ಅವುಗಳಲ್ಲಿ ಬಹುತೇಕ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಪರಿಶೀಲನೆ ವೇಳೆ ಗಮನಕ್ಕೆ ಬಂದಿದೆ. ಪ್ರವಾಸಿಗರು ಹಾಗೂ ಸ್ಥಳೀಯ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಹಂಪಿ ವಸತಿ ನಿಲಯದ ಅವ್ಯವಸ್ಥೆ ಸರಿಪಡಿಸಿ :

ಹಂಪಿಯ ವಸತಿ ನಿಲಯದಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಲು ನೂರಾರು ಕೋಟಿ ರೂಪಾಯಿ ಅನುದಾನದ ಅಗತ್ಯವಿಲ್ಲ. ಮಹಿಳಾ ಆಯೋಗದ ಅಧ್ಯಕ್ಷರೇ ಸ್ಥಳಕ್ಕೆ ಭೇಟಿ ನೀಡಬೇಕೆಂದೂ ಇಲ್ಲ. ಸಂಬಂಧಪಟ್ಟ ಆಡಳಿತಾಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಿದರೆ ಸಾಕು. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.

ಇದಲ್ಲದೆ, ಸಂಚಾರಿ ಕುರಿಗಾಹಿಗಳ ಸಮಸ್ಯೆಗಳು, ಕುರಿ ಹಟ್ಟಿಗಳ ಭದ್ರತೆ, ಕುಡಿಯುವ ನೀರು ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆ ಕುರಿತು ಪರಿಶೀಲನೆ ನಡೆಸಲಾಗಿದೆ. ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಪೋಕ್ಸೋ ಸೇರಿದಂತೆ ಸಂಬಂಧಪಟ್ಟ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಮಹಿಳೆಯರು ಹಾಗೂ ಅವರ ಮಕ್ಕಳಿಗೆ ಶಿಕ್ಷಣ, ವಸತಿ ಮತ್ತು ಉದ್ಯೋಗದಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಾ. ನಾಗಲಕ್ಷ್ಮಿ ಚೌಧರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor