ಹರಪನಹಳ್ಳಿ: ತಾಲೂಕು ಮಟ್ಟದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸರ್ಕಾರಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲಿಸುವ ಕೆಡಿಪಿ ಸಭೆಗಳಿಗೆ ಉಪ ನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿ ಲಿಂಗರಾಜು ಅವರು ನಿರಂತರವಾಗಿ ಗೈರುಹಾಜರಾಗುತ್ತಿರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರತಿ ಕೆಡಿಪಿ ಸಭೆಯಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು, ತಮ್ಮ ಇಲಾಖೆಯ ಪ್ರಗತಿ, ಸಮಸ್ಯೆಗಳು ಹಾಗೂ ಸಾರ್ವಜನಿಕರಿಗೆ ಒದಗಿಸುತ್ತಿರುವ ಸೇವೆಗಳ ಕುರಿತು ಮಾಹಿತಿ ನೀಡುವುದು ಜವಾಬ್ದಾರಿಯಾಗಿದೆ. ಆದರೆ, ಸಬ್ ರಿಜಿಸ್ಟ್ರಾರ್ ಅಧಿಕಾರಿಗಳು ಸಭೆಗಳಿಗೆ ನಿರಂತರವಾಗಿ ಗೈರಾಗುತ್ತಿರುವುದಕ್ಕೆ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಯ ಕರ್ತವ್ಯ ನಿರ್ವಹಣೆಯ ಬಗ್ಗೆಯೇ ಅನುಮಾನ ಮೂಡುವಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಅಭಿವೃದ್ಧಿ ಕಾರ್ಯಗಳ ಪರಿಶೀಲನೆಗಾಗಿ ನಡೆಯುವ ಅಧಿಕೃತ ಸಭೆಗಳಿಗೆ ಅಧಿಕಾರಿಗಳು ಗೈರುಹಾಜರಾದರೆ ಆಡಳಿತ ವ್ಯವಸ್ಥೆಯ ಉತ್ತರದಾಯಿತ್ವಕ್ಕೆ ಧಕ್ಕೆಯಾಗುತ್ತದೆ. ಜನಪ್ರತಿನಿಧಿಗಳ ಸಭೆಗಳಿಗೆ ಅಧಿಕಾರಿಗಳು ಗಂಭೀರವಾಗಿ ಸ್ಪಂದಿಸಬೇಕು ಎಂದು ಶಾಸಕರು ಸೂಚಿಸಿದರು.

ಈ ಹಿನ್ನೆಲೆಯಲ್ಲಿ ಉಪ ನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿ ಲಿಂಗರಾಜು ಅವರಿಗೆ ಗೈರುಹಾಜರಿಯ ಕುರಿತು ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಸೂಚಿಸಿದರು. ಅಲ್ಲದೆ, ಮೇಲಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅಧಿಕಾರಿಗಳ ಸಭಾ ಹಾಜರಾತಿ ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ಜವಾಬ್ದಾರಿಯನ್ನು ಖಚಿತಪಡಿಸಬೇಕು ಎಂದು ತಿಳಿಸಿದರು.

ಸಿಬ್ಬಂದಿ ಕೊರತೆಯಿಂದ ಇಲಾಖೆಯಲ್ಲಿ ನಾನೊಬ್ಬನೇ ಕಾರ್ಯನಿರ್ವಹಿಸುತ್ತಿದ್ದೇನೆ. ಕೆಡಿಪಿ ಸಭೆಗೆ ಹೋದರೆ ದೈನಂದಿನ ಕೆಲಸಗಳು ಸ್ಥಗಿತಗೊಳ್ಳುತ್ತವೆ. ನನ್ನ ಲಾಗಿನ್ ಮೂಲಕ ನೀಡುವ ಅನುಮೋದನೆಗಳ ಹೊಣೆಗಾರಿಕೆಯೂ ನನ್ನ ಮೇಲೆಯೇ ಇರುತ್ತದೆ. ಸಾರ್ವಜನಿಕರಿಗೆ ತೊಂದರೆಯಾದರೆ ಸ್ಥಳಕ್ಕೆ ತೆರಳಿ ಸ್ಪಂದಿಸುತ್ತೇನೆ. ಶಾಸಕರಿಂದ ಕರೆ ಬಂದರೆ ಮಾತ್ರ ಸಭೆಗೆ ಹಾಜರಾಗುತ್ತೇನೆ.

-ಲಿಂಗರಾಜು, ಉಪ ನೋಂದಣಾಧಿಕಾರಿ, ಹರಪನಹಳ್ಳಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor