ಹೊಸಪೇಟೆ: ಬಕ್ರೀದ್ ಹಿನ್ನಲೆ ಶಾಂತಿ ಸಭೆ
ಸೌಹಾರ್ದತೆ, ಶಾಂತಿ ಕಾಪಾಡುವಂತೆ ಎಸ್‌ಪಿ ಜಾಹ್ನವಿ ಕರೆ
ಹೊಸಪೇಟೆ/ ವಿಜಯನಗರ: ಬಕ್ರೀದ್ ಹಬ್ಬದ ಪ್ರಯುಕ್ತ ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಹೊಸಪೇಟೆಯ ಎಸ್‌ಪಿ ಕಚೇರಿಯಲ್ಲಿ ಶಾಂತಿ ಸಭೆ ಅಯೋಜಿಸಲಾಗಿತ್ತು .
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಎಸ್ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ನಗರದ ಸಮಸ್ತ ಮುಸ್ಲಿಂ ಮುಖಂಡರು, ವಿವಿಧ ಧರ್ಮಗಳ ಮುಖಂಡರು, ಗಣ್ಯರು ಹಾಗೂ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಪಿ ಜಾಹ್ನವಿ ಅವರು, “ಬಕ್ರೀದ್ ಹಬ್ಬವು ತ್ಯಾಗ, ಬಲಿದಾನ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ವಿಶೇಷ ಹಬ್ಬವಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹಬ್ಬವನ್ನು ಶಿಸ್ತಿನಿಂದ ಹಾಗೂ ಪರಸ್ಪರ ಗೌರವದಿಂದ ಆಚರಿಸಬೇಕು” ಎಂದು ಹೇಳಿದರು.
ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಸಮಾಜದ ಶಾಂತಿ ಕದಡುವಂತಹ ವದಂತಿಗಳು, ಪ್ರಚೋದನಕಾರಿ ಹೇಳಿಕೆಗಳು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು ಮಾಹಿತಿಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ತಿಳಿಸಿದರು.
ಯಾವುದೇ ಅನುಮಾನಾಸ್ಪದ ಘಟನೆಗಳು ಕಂಡುಬಂದಲ್ಲಿ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಪರಿಸ್ಥಿತಿಗಳು ಎದುರಾದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಸಾರ್ವಜನಿಕರ ಸಹಕಾರದಿಂದಲೇ ಶಾಂತಿಯುತ ವಾತಾವರಣ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ವಿವಿಧ ಧಾರ್ಮಿಕ ಮುಖಂಡರು, ಸಮಾಜಸೇವಕರು ಹಾಗೂ ನಾಗರಿಕರು ಉಪಸ್ಥಿತರಿದ್ದರು.