Kudligi | ಒನಕೆ ಓಬವ್ವ ಜಯಂತಿ ಸರಳ, ಅರ್ಥಪೂರ್ಣ ಆಚರಣೆಗೆ ನಿರ್ಧಾರ : ತಹಶೀಲ್ದಾರ್ ವಿ.ಕೆ.ನೇತ್ರಾವತಿ
ಕೂಡ್ಲಿಗಿ/ವಿಜಯನಗರ : ಕನ್ನಡ ನಾಡಿನ ವೀರವನಿತೆ, ಕೂಡ್ಲಿಗಿ ತಾಲೂಕಿನ ಹೆಮ್ಮೆಯ ಪುತ್ರಿ ಒನಕೆ ಓಬವ್ವ ಅವರ ಜಯಂತಿಯನ್ನು ತಾಲೂಕು ಆಡಳಿತದ ವತಿಯಿಂದ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಹಶೀಲ್ದಾರ್ ವಿ.ಕೆ.ನೇತ್ರಾವತಿ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತದ ಸಭಾಂಗಣದಲ್ಲಿ ನಡೆದ ಒನಕೆ ಓಬವ್ವ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಗಳ ಅನ್ವಯ ಜಯಂತಿ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ವೀರವನಿತೆ ಓಬವ್ವ ಅವರ ಸಾಹಸ, ಧೈರ್ಯ ಹಾಗೂ ದೇಶಪ್ರೇಮದ ಸಂದೇಶವನ್ನು ಯುವಜನತೆಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಸಲಹೆ ನೀಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಾಟೇರ್ ಹಾಲೇಶ್, ಕೂಡ್ಲಿಗಿ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಮಹಿಳಾ ಸಾಧಕರಿಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ನಾಡಿನ ಹೆಮ್ಮೆಯ ವೀರಮಾತೆ ಒನಕೆ ಓಬವ್ವ ಅವರ ವಂಶಸ್ಥರನ್ನು ತಾಲೂಕು ಆಡಳಿತದ ವತಿಯಿಂದ ಗೌರವಿಸುವ ಮೂಲಕ ಜಯಂತಿಗೆ ವಿಶೇಷ ಮೆರುಗು ನೀಡಬೇಕು. ಓಬವ್ವ ಅವರ ಸಾಹಸಗಾಥೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗುವಂತೆ ಕಾರ್ಯಕ್ರಮ ಆಯೋಜಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ನರಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು, ಬಿಸಿಎಂ ಅಧಿಕಾರಿ ಶ್ಯಾಮಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಎಸ್.ಫಕೀರಪ್ಪ, ಅಬಕಾರಿ ಇಲಾಖೆಯ ನಾಗಭೂಷಣ, ಕಾರ್ಮಿಕ ಇಲಾಖೆಯ ಸಂತೋಷ್, ಮಾರಬನಹಳ್ಳಿ ಮಾರಪ್ಪ, ಒನಕೆ ಓಬವ್ವ ಸಂಘದ ರಾಜ್ಯಾಧ್ಯಕ್ಷ ಹಿರೇಕುಂಬಳಗುಂಟೆ ಉಮೇಶ್, ಕೋಗಳಿ ಮಂಜುನಾಥ್, ಗುಡೇಕೋಟೆ ಎನ್. ಕೃಷ್ಣ, ಅಂಬೇಡ್ಕರ್ ಸಂಘದ ಅಧ್ಯಕ್ಷ ಗುಣಸಾಗರ ಕೃಷ್ಣಪ್ಪ, ಬಂಡೆ ರಾಘವೇಂದ್ರ, ನಿವೃತ್ತ ಶಿಕ್ಷಕ ಬಸಪ್ಪ, ಮಾರಬನಹಳ್ಳಿ ಕರಿಯಪ್ಪ, ಚಲವಾದಿ ಮಹಾಸಭಾ ಅಧ್ಯಕ್ಷ ಸಿ. ಮಾರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.