ಹೊಸಪೇಟೆ ಸಮೀಪ ಕಂಠೀರವ ಸ್ಟುಡಿಯೋ ಶಾಖೆ ಸ್ಥಾಪನೆಗೆ ಪ್ರಸ್ತಾವನೆ : ಮೆಹಬೂಬ್ ಪಾಷಾ

Update: 2026-08-06 20:20 IST

ಹೊಸಪೇಟೆ (ವಿಜಯನಗರ): ಕಂಠೀರವ ಸ್ಟುಡಿಯೋದ 60ನೇ ವಜ್ರಮಹೋತ್ಸವದ ಅಂಗವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸ ಶಾಖೆ ಸ್ಥಾಪಿಸುವ ಉದ್ದೇಶದಿಂದ ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪ ಸರ್ಕಾರಿ ಜಮೀನನ್ನು ಗುರುತಿಸಲಾಗಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮೆಹಬೂಬ್ ಪಾಷಾ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವ ಚಲನಚಿತ್ರ ಚಿತ್ರೀಕರಣ ಚಟುವಟಿಕೆಗಳನ್ನು ವಿಕೇಂದ್ರೀಕರಣಗೊಳಿಸುವ ಉದ್ದೇಶದಿಂದ ಹೊಸ ಸ್ಟುಡಿಯೋ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ತಾಲೂಕಿನ ಮರಿಯಮ್ಮನಹಳ್ಳಿ ಸಮೀಪದ ಕಣವಿಹಳ್ಳಿ ಗ್ರಾಮದ ಸರ್ವೆ ನಂ. 65/1ರಲ್ಲಿ ಇರುವ ಕಂದಾಯ ಇಲಾಖೆಯ ಜಮೀನನ್ನು ಸ್ಟುಡಿಯೋ ನಿರ್ಮಾಣಕ್ಕೆ ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕನಿಷ್ಠ 25 ಎಕರೆ ಭೂಮಿಯನ್ನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆ ಹಾಗೂ ಸ್ಥಳಾಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮಲೆನಾಡು ಭಾಗದಲ್ಲಿ ಸ್ಟುಡಿಯೋಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದ ಸ್ಥಳೀಯ ಕಲಾವಿದರು, ತಂತ್ರಜ್ಞರು ಹಾಗೂ ನಿರ್ದೇಶಕರಿಗೆ ತಮ್ಮ ಭಾಗದಲ್ಲೇ ಉದ್ಯೋಗ ಮತ್ತು ಅವಕಾಶಗಳು ದೊರೆಯಲಿವೆ ಎಂದು ಹೇಳಿದರು.

ಹಂಪಿ, ತುಂಗಭದ್ರಾ ಜಲಾಶಯ, ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಸೇರಿದಂತೆ ಐತಿಹಾಸಿಕ ತಾಣಗಳ ಸಮೀಪದಲ್ಲಿರುವ ಕಾರಣ, ಐತಿಹಾಸಿಕ ಹಾಗೂ ಹೊರಾಂಗಣ ಚಿತ್ರೀಕರಣಗಳಿಗೆ ಈ ಸ್ಟುಡಿಯೋ ಪ್ರಮುಖ ಕೇಂದ್ರವಾಗಲಿದೆ ಎಂದು ತಿಳಿಸಿದರು.

ಒಟಿಟಿ ವೇದಿಕೆಗಳಿಗೆ ಅಗತ್ಯವಿರುವ ಸಿನಿಮಾ, ವೆಬ್‌ಸಿರೀಸ್‌, ಟಿವಿ ಧಾರಾವಾಹಿ, ರಿಯಾಲಿಟಿ ಶೋ ಹಾಗೂ ಇತರೆ ಕಾರ್ಯಕ್ರಮಗಳ ಚಿತ್ರೀಕರಣಕ್ಕಾಗಿ ಅತ್ಯಾಧುನಿಕ ಫ್ಲೋರ್‌ಗಳನ್ನು ನಿರ್ಮಿಸುವ ಯೋಜನೆ ಇದೆ. ಜಮೀನು ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಯೋಜನಾ ವರದಿ ಸಿದ್ಧಪಡಿಸಿ ಕಾಮಗಾರಿ ಆರಂಭಿಸಲಾಗುವುದು. ಸ್ಟುಡಿಯೋ ನಿರ್ಮಾಣ ಪೂರ್ಣಗೊಳ್ಳಲು ಸುಮಾರು ಎರಡು ವರ್ಷಗಳ ಕಾಲಾವಕಾಶ ಬೇಕಾಗಬಹುದು ಎಂದು ಮಹಬೂಬ್ ಪಾಷಾ ಹೇಳಿದರು.

ಅಪರ ಜಿಲ್ಲಾಧಿಕಾರಿ ಈ. ಬಾಲಕೃಷ್ಣ ಮಾತನಾಡಿ, ಸ್ಟುಡಿಯೋ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಮರಿಯಮ್ಮನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗುರುತಿಸಲಾಗಿದೆ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಅಂತಿಮ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News