×
Ad

Vijayanagar | ಶಾಸಕ ಎನ್.ವೈ.ಗೋಪಾಲಕೃಷ್ಣರಿಗೆ ಸಚಿವ ಸ್ಥಾನ ನೀಡಲು ತಿಪ್ಪೇಸ್ವಾಮಿ ಆಗ್ರಹ

Update: 2026-06-13 21:06 IST

ಕೂಡ್ಲಿಗಿ/ವಿಜಯನಗರ: ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ, ಅಪಾರ ಆಡಳಿತ ಅನುಭವ ಹಾಗೂ ಜನಪರ ಕಾಳಜಿ ಹೊಂದಿರುವ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಅವರ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ. ತಿಪ್ಪೇಸ್ವಾಮಿ ಆಗ್ರಹಿಸಿದರು.

ತಾಲೂಕಿನ ರಾಂಪುರದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎನ್.ವೈ. ಗೋಪಾಲಕೃಷ್ಣ ಅವರು ಮೊಳಕಾಲ್ಮೂರು, ಬಳ್ಳಾರಿ ಗ್ರಾಮೀಣ ಹಾಗೂ ಕೂಡ್ಲಿಗಿ ಕ್ಷೇತ್ರಗಳಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿ ಜನರ ವಿಶ್ವಾಸ ಗಳಿಸಿದ್ದಾರೆ ಎಂದು ಹೇಳಿದರು.

ವಿಶೇಷವಾಗಿ ಕೂಡ್ಲಿಗಿ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆ ಜಾರಿಗೊಳಿಸುವ ಮೂಲಕ ಈ ಭಾಗದ ರೈತರ ಬದುಕಿಗೆ ಹೊಸ ಆಶಾಕಿರಣ ಮೂಡಿಸಿದ್ದಾರೆ. ಅಭಿವೃದ್ಧಿ ಪರ ಚಿಂತನೆ ಹಾಗೂ ಆಡಳಿತ ಅನುಭವ ಹೊಂದಿರುವ ಇಂತಹ ನಾಯಕರಿಗೆ ಸಚಿವ ಸ್ಥಾನ ನೀಡಿದರೆ ಸರ್ಕಾರದ ಕಾರ್ಯಕ್ಷಮತೆ ಮತ್ತಷ್ಟು ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎನ್.ವೈ. ಗೋಪಾಲಕೃಷ್ಣ, “ನನಗೆ ಅಧಿಕಾರದ ಆಸೆಗಿಂತ ಜನಸೇವೆಯೇ ಮುಖ್ಯ. ಆದರೆ, ಏಳು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನ್ನ ಅನುಭವ ಹಾಗೂ ಪಕ್ಷಕ್ಕಾಗಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡಬೇಕೆಂಬುದು ಕ್ಷೇತ್ರದ ಜನರ ಆಶಯವಾಗಿದೆ. ಅಭಿವೃದ್ಧಿ ಕಾಮಗಾರಿಗಳ ಮೂಲಕ ಜನರ ವಿಶ್ವಾಸವನ್ನು ಗಳಿಸಿದ್ದೇನೆ” ಎಂದು ಹೇಳಿದರು.

ಜೂನ್ 18ರ ವಿಧಾನ ಪರಿಷತ್ ಚುನಾವಣೆ ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೊಟ್ಟೂರು ಎಂ.ಎಂ.ಜೆ. ಹರ್ಷವರ್ಧನ್, ಎನ್.ವೈ. ಪೆನ್ನೋಬಳಸ್ವಾಮಿ, ಅಸುಂಡಿ ನಾಗರಾಜ, ಕಾವಲ್ಲಿ ಶಿವಪ್ಪನಾಯಕ, ಮೊಳಕಾಲ್ಮೂರು ಪ್ರಕಾಶ್, ಅಬ್ದುಲ್ ಸುಭಾನ್, ಪಾಪನಾಯಕ ಸೇರಿದಂತೆ ವಿವಿಧ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News