Vijayanagara | ಕೊಟ್ಟೂರು ನೂತನ ನ್ಯಾಯಾಲಯ ಕಟ್ಟಡ ಕಾಮಗಾರಿ ಅಂತಿಮ ಹಂತಕ್ಕೆ
ಕೊಟ್ಟೂರು (ವಿಜಯನಗರ): ತಾಲೂಕಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ನ್ಯಾಯಾಲಯದ ಕಟ್ಟಡದ ಕಾಮಗಾರಿಗಳು ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ನ್ಯಾಯಾಲಯವು ಸಾರ್ವಜನಿಕ ಸೇವೆಗೆ ಮುಕ್ತವಾಗಿ ಕಾರ್ಯಾರಂಭಿಸಲಿದೆ ಎಂದು ಕೂಡ್ಲಿಗಿಯ ನ್ಯಾಯಾಧೀಶ ರಾಜಶೇಖರ್ ತಿಳಿಸಿದರು.
ಪಟ್ಟಣದಲ್ಲಿ ಸಿದ್ಧಗೊಳ್ಳುತ್ತಿರುವ ತಾಲೂಕು ನ್ಯಾಯಾಲಯದ ನೂತನ ಕಟ್ಟಡದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು. ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಅವರು, ಉಳಿದಿರುವ ಸಣ್ಣಪುಟ್ಟ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಹಾಗೂ ವಕೀಲರ ಬಳಗಕ್ಕೆ ಅನುಕೂಲವಾಗುವಂತೆ ನ್ಯಾಯಾಲಯವನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ರಾಜಶೇಖರ್ ಹಾಗೂ ಕೂಡ್ಲಿಗಿಯ ಹಿರಿಯ ಶ್ರೇಣಿ ನ್ಯಾಯಾಧೀಶ ಜೆ. ಯೋಗೇಶ್ ಅವರು ಜಂಟಿಯಾಗಿ ಕಟ್ಟಡದ ವಿವಿಧ ಕೊಠಡಿಗಳು ಹಾಗೂ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳನ್ನು ನೇರವಾಗಿ ವೀಕ್ಷಿಸಿ, ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಪರಿಶೀಲನೆ ಸಂದರ್ಭದಲ್ಲಿ ತಂಗಿನಕೇರಿ ಹನುಮಂತಪ್ಪ, ಪ್ರಭುರಾಜ್, ಪಂಡಿತಾರಾಧ್ಯ, ಅಂಜಿನಪ್ಪ, ಕೊಟ್ರೇಶ್ ಸೇರಿದಂತೆ ವಕೀಲರು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.