Vijayanagara | ಮೊದಲ ಬೆಳೆಗೆ ನೀರು ಹರಿಸಲು ಆಗ್ರಹ: ಟಿಬಿ ಬೋರ್ಡ್ ಕಚೇರಿಗೆ ಪೊಲೀಸ್ ಬಂದೋಬಸ್ತ್

Update: 2026-08-18 18:22 IST

ಹೊಸಪೇಟೆ/ವಿಜಯನಗರ: ತುಂಗಭದ್ರಾ ಜಲಾಶಯದಿಂದ ಮೊದಲ ಬೆಳೆಯ ಕೃಷಿ ಚಟುವಟಿಕೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಬಳ್ಳಾರಿ, ವಿಜಯನಗರ ಹಾಗೂ ರಾಯಚೂರು ಜಿಲ್ಲೆಗಳ ನೂರಾರು ರೈತರು ಮಂಗಳವಾರ ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯ ಮಂಡಳಿ (ಟಿಬಿ ಬೋರ್ಡ್) ಕಚೇರಿ ಎದುರು ಪ್ರತಿಭಟನೆ ನಡೆಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.

ನೀರಿನ ಕೊರತೆಯಿಂದ ಕೃಷಿ ಬೆಳೆಗಳು ಒಣಗುವ ಸ್ಥಿತಿ ನಿರ್ಮಾಣವಾಗಿದ್ದು, ಮೊದಲ ಬೆಳೆಗೆ ಸಮರ್ಪಕವಾಗಿ ನೀರು ಬಿಡುಗಡೆ ಮಾಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ರಾಯಚೂರು, ಸಿಂಧನೂರು, ಸಿರುಗುಪ್ಪ, ಮಾನ್ವಿ, ಕಾರಟಗಿ ಸೇರಿದಂತೆ ವಿವಿಧ ಭಾಗಗಳಿಂದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಟಿಬಿ ಡ್ಯಾಂ ವ್ಯಾಪ್ತಿಯಲ್ಲಿ ಸುಮಾರು 8.5 ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತಿದ್ದರೂ ಅದರ ಪ್ರಯೋಜನ ನಮ್ಮ ಭಾಗದ ರೈತರಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲ. ನೀರು ಆಂಧ್ರಪ್ರದೇಶದತ್ತ ಹರಿದುಹೋಗುತ್ತಿದೆ ಎಂಬುದು ರೈತರ ಆರೋಪವಾಗಿದೆ. ಹೀಗಾಗಿ ನಮ್ಮ ಭಾಗದ ಕೃಷಿ ಪ್ರದೇಶಗಳಿಗೆ ಆದ್ಯತೆ ನೀಡಿ ನೀರು ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಟಿಬಿ ಬೋರ್ಡ್ ಕಚೇರಿಗೆ ಖಾಕಿ ಸರ್ಪಗಾವಲು :

ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಟಿಬಿ ಡ್ಯಾಂ ಕಚೇರಿ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಅವರ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು, ಅವರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಬಂದೋಬಸ್ತ್‌ಗಾಗಿ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 17 ಇನ್ಸ್‌ಪೆಕ್ಟರ್‌ಗಳು, 25 ಪಿಎಸ್‌ಐಗಳು, 50 ಎಎಸ್‌ಐಗಳು, 8 ಡಿಆರ್ ಸಿಬ್ಬಂದಿ, ಎರಡು ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ ಒಟ್ಟು ಸುಮಾರು 350 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಹಿಳಾ ಪೊಲೀಸ್ ಸಿಬ್ಬಂದಿಯನ್ನೂ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ನೀರಿಗಾಗಿ ರೈತರ ಹೋರಾಟ :

ಕೃಷಿ ಚಟುವಟಿಕೆಗಳಿಗೆ ನೀರಿನ ತೀವ್ರ ಅಭಾವ ಎದುರಾಗಿರುವ ಹಿನ್ನೆಲೆಯಲ್ಲಿ ಟಿಬಿ ಡ್ಯಾಂನಿಂದ ನೀರು ಬಿಡುಗಡೆ ಮಾಡುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಬೆಳೆಗಳು ಒಣಗುತ್ತಿರುವ ಪರಿಸ್ಥಿತಿಯಲ್ಲಿ ತಕ್ಷಣವೇ ನೀರು ಹರಿಸದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.

ಒಟ್ಟಿನಲ್ಲಿ, ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಟಿಬಿ ಬೋರ್ಡ್ ಕಚೇರಿ ಸುತ್ತಮುತ್ತ ಪೊಲೀಸ್ ಸರ್ಪಗಾವಲು ನಿರ್ಮಾಣವಾಗಿದ್ದು, ರೈತರ ಬೇಡಿಕೆ ಹಾಗೂ ಅಧಿಕಾರಿಗಳ ಮುಂದಿನ ಕ್ರಮ ಕುತೂಹಲಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News