Vijayanagara | ಖರ್ಗೆ ರ‍್ಯಾಲಿ ನಡೆಸಿದ 'ಸ್ಥಳ ಶುದ್ಧೀಕರಣ' : ಕಾಂಗ್ರೆಸ್‌ನಿಂದ ರಾಷ್ಟ್ರಪತಿಗಳಿಗೆ ಮನವಿ

Update: 2026-08-18 18:19 IST

ಹೊಸಪೇಟೆ/ವಿಜಯನಗರ: ಉತ್ತರಾಖಂಡದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಬಳಿಕ ಅವರು ಕುಳಿತಿದ್ದ ವೇದಿಕೆಯನ್ನು ನೀರು/ಗಂಗಾಜಲದಿಂದ ಶುದ್ಧೀಕರಿಸಲಾಗಿದೆ ಎಂಬ ಆರೋಪದ ಘಟನೆ ಖಂಡಿಸಿ, ಅಸ್ಪೃಶ್ಯತೆ ಹಾಗೂ ಜಾತಿ ತಾರತಮ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹೊಸಪೇಟೆ ಕಾಂಗ್ರೆಸ್ ಪಕ್ಷದ ವತಿಯಿಂದ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಸಂವಿಧಾನದ ವಿಧಿ 17 ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ನಿಷೇಧಿಸಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕವಾಗಿ ನಡೆದಿರುವುದಾಗಿ ಆರೋಪಿಸಲಾಗಿರುವ ಈ ಘಟನೆ ಸಂವಿಧಾನದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಡ್ ಚೌಡರ್ ಕೆರೆ ಚಳವಳಿಯನ್ನು ಸ್ಮರಿಸಿದ ಕಾಂಗ್ರೆಸ್ ಮುಖಂಡರು, ಇಂತಹ ತಾರತಮ್ಯಪೂರ್ಣ ಮನಸ್ಥಿತಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಘಟನೆ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಹಾಗೂ ಉತ್ತರಾಖಂಡ ಸರ್ಕಾರದಿಂದ ಸಮಗ್ರ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಕುಮಾರ್, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಲ್ಲಾಭಕ್ಷಿ, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಸೋಮಶೇಖರ್ ಬಣ್ಣದಮನೆ, ಸಣ್ಣ ಮಾರೆಪ್ಪ, ನಿಂಬಗಲ್ ರಾಮಕೃಷ್ಣ, ಡಿ. ವೆಂಕಟರಮಣ, ಮಾರೆಣ್ಣ, ಸಣ್ಣವೀರಪ್ಪ, ಶಿವಕುಮಾರ್, ಕಣ್ಣೇಶ್, ಚಾಂದ್ ಬಾಷ, ಯುವ ಕಾಂಗ್ರೆಸ್‌ನ ಪ್ರದೀಪ್ ಬಾವಿಕಟ್ಟಿ, ಗಣೇಶ್ ಪಾಟೀಲ್, ಅರುಣ್ ಶೇಕ್, ಪ್ರಮೋದ್ ಪುಣ್ಯಮೂರ್ತಿ, ಉಂಡೇಕರ್ ಜಮೀರ್, ಅಲ್ತಾಫ್ ಶೇಕ್, ಸಜ್ಜದ್ ಖಾನ್, ಗಿರೀಶ್, ಮೋಹನ್, ಹುಲುಗಪ್ಪ, ಮಹಿಳಾ ಕಾಂಗ್ರೆಸ್‌ನ ಯೋಗಲಕ್ಷ್ಮೀ, ಅನಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News