Vijayanagara | 250 ಹಾಸಿಗೆಯ ಜಿಲ್ಲಾ ಆಸ್ಪತ್ರೆ ತರಾತುರಿಯಲ್ಲಿ ಉದ್ಘಾಟಿಸಬೇಡಿ: ಸ್ವಾಭಿಮಾನಿ ಸೇನೆ ಆಗ್ರಹ
ಎಲ್ಲಾ ಉಪಕರಣ, ವೈದ್ಯರು, ಸಿಬ್ಬಂದಿ ನೇಮಕದ ಬಳಿಕವೇ ಆಸ್ಪತ್ರೆ ಆರಂಭಕ್ಕೆ ಒತ್ತಾಯ
ಹೊಸಪೇಟೆ/ವಿಜಯನಗರ: ನಗರದ ಜಂಬುನಾಥ ಏರಿಯಾದಲ್ಲಿ ನಿರ್ಮಾಣಗೊಂಡಿರುವ 250 ಹಾಸಿಗೆಗಳ ಸರ್ಕಾರಿ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣ ಸಿದ್ಧತೆ ಇಲ್ಲದೆ ತರಾತುರಿಯಲ್ಲಿ ಉದ್ಘಾಟಿಸಬಾರದು ಎಂದು ಸ್ವಾಭಿಮಾನಿ ಸೇನೆ ಆಗ್ರಹಿಸಿದೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ವಿಜಯನಗರ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದ ಮನವಿಯಲ್ಲಿ, ಆಸ್ಪತ್ರೆಯಲ್ಲಿ ಇನ್ನೂ ಅಗತ್ಯ ವೈದ್ಯಕೀಯ ಉಪಕರಣಗಳು, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ನಿಯೋಜನೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಆಸ್ಪತ್ರೆ ಉದ್ಘಾಟಿಸಿದರೆ ಸಾರ್ವಜನಿಕರಿಗೆ ಸಮರ್ಪಕ ಚಿಕಿತ್ಸೆ ದೊರೆಯುವುದಿಲ್ಲ ಎಂದು ತಿಳಿಸಲಾಗಿದೆ.
ಶಾಸಕ ಎಚ್.ಆರ್. ಗವಿಯಪ್ಪ, ಜಿಲ್ಲಾಧಿಕಾರಿ, ಡಿಎಚ್‌ಒ ಹಾಗೂ ಟಿಎಚ್‌ಒ ಸೇರಿದಂತೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಸ್ತುತ ಶೇ.50ರಷ್ಟು ವೈದ್ಯಕೀಯ ಉಪಕರಣಗಳು ಮಾತ್ರ ಬಂದಿವೆ. ಎಕ್ಸ್‌ರೇ, ಎಂಆರ್‌ಐ ಸೇರಿದಂತೆ ಪ್ರಮುಖ ಉಪಕರಣಗಳು ಇನ್ನೂ ಬಾಕಿಯಿದ್ದು, ಅವುಗಳನ್ನು ಶೀಘ್ರ ತರಿಸಿ ಅಕ್ಟೋಬರ್‌ನಲ್ಲಿ ಆಸ್ಪತ್ರೆ ಉದ್ಘಾಟಿಸುವುದಾಗಿ ಅಧಿಕಾರಿಗಳು ತಿಳಿಸಿರುವುದಾಗಿ ಸಂಘಟನೆ ಹೇಳಿದೆ.
ಸಂಪೂರ್ಣ ಸೌಲಭ್ಯಗಳಿಲ್ಲದೆ ಆಸ್ಪತ್ರೆ ಆರಂಭಿಸಿದರೆ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುವುದು ಸಾಧ್ಯವಿಲ್ಲ. ಆದ್ದರಿಂದ ಮೊದಲು ಎಲ್ಲಾ ವೈದ್ಯಕೀಯ ಉಪಕರಣಗಳು, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಿ ಆಸ್ಪತ್ರೆಯನ್ನು ಚಿಕಿತ್ಸೆಗೆ ಸಜ್ಜುಗೊಳಿಸಿದ ಬಳಿಕವೇ ಉದ್ಘಾಟನೆ ನಡೆಸಬೇಕು ಎಂದು ಸ್ವಾಭಿಮಾನಿ ಸೇನೆ ಒತ್ತಾಯಿಸಿದೆ.