Vijayanagara | ಹೆಣ್ಣು ಭ್ರೂಣ ಹತ್ಯೆ ತಡೆಗೆ PCPNDT ಕಾಯ್ದೆ ಜಾಗೃತಿ ಕಾರ್ಯಾಗಾರ
ವಿಜಯನಗರ (ಹೊಸಪೇಟೆ) : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ PCPNDT ಕಾಯ್ದೆ–1994 ಕುರಿತು ಜಾಗೃತಿ ಮತ್ತು ತರಬೇತಿ ಕಾರ್ಯಾಗಾರವನ್ನು ಹರಪನಹಳ್ಳಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಲಾಯಿತು.
ಜಿಲ್ಲಾ ಮಿಷನ್ ಶಕ್ತಿ ಸಂಯೋಜಕಿ ವಿದ್ಯಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, PCPNDT ಕಾಯ್ದೆಯ ಉದ್ದೇಶ, ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವಲ್ಲಿ ಕಾಯ್ದೆಯ ಮಹತ್ವ ಹಾಗೂ ಹೆಣ್ಣು ಮಗುವಿನ ರಕ್ಷಣೆ ಮತ್ತು ಸಮಾನ ಅವಕಾಶ ಕಲ್ಪಿಸುವ ಅಗತ್ಯತೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರಪನಹಳ್ಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮನಗೌಡ ಮಾತನಾಡಿ, ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಕುಸಿತವಾಗದಂತೆ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಮತ್ತು ಹೆಣ್ಣು ಮಗುವಿನ ಕುರಿತು ಇರುವ ಸಾಮಾಜಿಕ ಮನೋಭಾವದಲ್ಲಿ ಬದಲಾವಣೆ ತರುವುದು ಅತ್ಯಗತ್ಯ ಎಂದು ಹೇಳಿದರು.
ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ವಿನಯ ಅವರು PCPNDT ಕಾಯ್ದೆ–1994ರ ಪ್ರಮುಖ ಅಂಶಗಳು, ಕಾಯ್ದೆಯಡಿ ಕೈಗೊಳ್ಳಲಾಗುವ ಕ್ರಮಗಳು ಹಾಗೂ ಭ್ರೂಣದ ಲಿಂಗ ಪತ್ತೆ ಮತ್ತು ಲಿಂಗ ಆಯ್ಕೆ ಪರೀಕ್ಷೆಗಳನ್ನು ತಡೆಗಟ್ಟುವ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಧರ್ಮನಗೌಡ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊಡ್ಡಮನಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅರವಿಂದ್ ಸೇರಿದಂತೆ ಹಿರಿಯ ಶ್ರೇಣಿ ಮೇಲ್ವಿಚಾರಕಿಯರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.