ವಿಜಯನಗರ | ಮಕ್ಕಳಿಂದ ಟಾಯ್ಲೆಟ್, ಬಾತ್‌ರೂಮ್ ಸ್ವಚ್ಛಗೊಳಿಸಿದ್ದು ಅಮಾನವೀಯ : ಎನ್.ವೆಂಕಟೇಶ್
ಎನ್.ವೆಂಕಟೇಶ್
ವಿಜಯನಗರ : ವಿಶೇಷ ಚೇತನ ಮಕ್ಕಳಿಂದಲೇ ವಸತಿಶಾಲೆಯ ಟಾಯ್ಲೆಟ್, ಬಾತ್‌ರೂಮ್ ಸ್ವಚ್ಛಗೊಳಿಸುವಂತಹ ಅಮಾನವೀಯ ಘಟನೆ ನಡೆದಿದೆಯೆಂದು ಆರೋಪಿಸಿ ವಿಶೇಷ ಚೇತನರ ಸಂಘದ ಗೌರವ ಸಲಹೆಗಾರ ಎನ್.ವೆಂಕಟೇಶ್ ಅವರು, ತಪ್ಪಿತಸ್ಥರಿಗೆ ಶಿಕ್ಷೆ ಆಗದಿದ್ದರೆ, ವಿಶೇಷ ಚೇತನರ ಸಂಘದಿಂದ ಹೋರಾಟ ಎದುರಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಬಾಗಲಕೋಟೆಯ ನವನಗರದ 54ನೇ ಸೆಕ್ಟರ್‌ನಲ್ಲಿ ದಿವ್ಯಜೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಮಕ್ಕಳ ಮೇಲೆ ವಸತಿಶಾಲೆಯ ಮುಖ್ಯಸ್ಥ ಹಾಗೂ ಸಹ ಶಿಕ್ಷಕರು ಪ್ಲಾಸ್ಟಿಕ್ ಪೈಪ್, ಬೆಲ್ಟ್‌ನಿಂದ ಹಲ್ಲೆ ನಡೆಸಿ ಖಾರದಪುಡಿ ಎರಚಿ ವಿಕೃತಿ ಮೆರೆದಿದ್ದಾರೆ ಎಂದು ಆಪಾದಿಸಿದ್ದಾರೆ.
ಇಡೀ ಮನುಕುಲವೇ ತಲೆತಗ್ಗಿಸುವಂತಹ ಘಟನೆ ಇದಾಗಿದೆ. ಯಾವುದೇ ಪರವಾನಿಗೆ ಪಡೆಯದೆ ನಡೆಸುತ್ತಿರುವ ಈ ವಸತಿ ಶಾಲೆಯಲ್ಲಿ 3 ತಿಂಗಳ ಹಿಂದೆ ಈ ಘಟನೆ ನಡೆದಿದ್ದು ಈಗ ಬೆಳಕಿಗೆ ಬಂದಿದೆ. ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳನ್ನು ಬಂಧಿಸಲಾಗಿದ್ದು, ಬಾಗಲಕೋಟೆ ಎಸ್.ಪಿ. ಸಿದ್ದಾರ್ಥ್ ಗೋಯೆಲ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ. ವಿಶೇಷ ಚೇತನರ ಕಲ್ಯಾಣಾಧಿಕಾರಿ ಗಿರಿಜಾ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.