ಅರಣ್ಯ ಅತಿಕ್ರಮಣ ಮಾನವ-ವನ್ಯಜೀವಿಗಳ ಸಂಘರ್ಷಕ್ಕೆ ಪ್ರಮುಖ ಕಾರಣ: ನ್ಯಾ.ಆರ್ ನಟರಾಜ್
ವಿಜಯನಗರ: ಮನುಷ್ಯನು ಅರಣ್ಯವನ್ನು ಆಕ್ರಮಿಸಿಕೊಂಡು ವಸತಿ ಪ್ರದೇಶಗಳು, ರಸ್ತೆಗಳು ಮತ್ತು ಕೃಷಿ ಭೂಮಿಯನ್ನು ವಿಸ್ತರಿಕೊಳ್ಳುತ್ತಿದ್ದಾನೆ. ಇದರಿಂದ ವನ್ಯಜೀವಿಗಳಿಗೆ ವಾಸಿಸಲು ಜಾಗವಿಲ್ಲದೆ ಆಹಾರ ಮತ್ತು ನೀರನ್ನು ಹುಡುಕಿಕೊಂಡು ನಾಡಿಗೆ ಬರುತ್ತಿರುವುದೆ. ಇದು ಮಾನವ ಮತ್ತು ವನ್ಯ ಜೀವಿಗಳ ನಡುವಿನ ಸಂಘರ್ಷಕ್ಕೆ ಮುಖ್ಯ ಕಾರಣವಾಗಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಆರ್.ನಟರಾಜ್ ಹೇಳಿದರು.
ದರೋಜಿಯ ದರೋಜಿ ಕರಡಿ ಸಂರಕ್ಷಣಾ ಪ್ರದೇಶದಲ್ಲಿ ಜಿಲ್ಲಾ ನ್ಯಾಯಾಂಗ ಬಳ್ಳಾರಿ ಹಾಗೂ ವಿಜಯನಗರ, ಅರಣ್ಯ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಳ್ಳಾರಿ ಇದರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾನವ, ವನ್ಯಜೀವಿಗಳ ಸಂಘರ್ಷದ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಆರ್.ನಟರಾಜ್, ಈ ಭೂಮಿ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಾಗಿಲ್ಲ. ಇದು ಪ್ರಕೃತಿಯ ಭಾಗವಾಗಿರುವ ಪ್ರತಿಯೊಂದು ಜೀವಿಯ ಹಕ್ಕಾಗಿದೆ. ಇತ್ತೀಚಿನ ದಿನಗಳಲ್ಲಿ ಮಾನವ ಸಮುದಾಯಗಳ ಬೆಳವಣಿಗೆ ಮತ್ತು ವನ್ಯಜೀವಿಗಳ ವಾಸಸ್ಥಾನಗಳ ನಷ್ಟದಿಂದಾಗಿ, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ನಾವು ಕಾಡುಗಳನ್ನು ಆಕ್ರಮಿಸಿಕೊಳ್ಳುತ್ತಿದ್ದಿವೆ. ಇದರಿಂದ ವನ್ಯಜೀವಿಗಳು ನಾಡಿಗೆ ಬರುತ್ತಿವೆ ಎಂದು ಹೇಳಿದರು.
ಬಳ್ಳಾರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷೆ ಕೆ.ಜಿ.ಶಾಂತಿ ಮಾತನಾಡಿ, ಮಾನವ ತನ್ನ ಸ್ವಾರ್ಥಕ್ಕಾಗಿ ಕಾಡನ್ನು ಅತಿಕ್ರಮಿಸಿ ತನ್ನ ಜಮೀನನ್ನು ವಿಸ್ತರಿಸುತ್ತಾ ಹೋದಾಗ ಸಹಜವಾಗಿ ಪ್ರಾಣಿಗಳ ಕ್ಷೇತ್ರ ಕಡಿಮೆಯಾಗಿ ಅವು ನಾಡಿಗೆ ಬರುವುದು ಸ್ವಭಾವಿಕ. ಆದ್ದರಿಂದ ಮನುಷ್ಯ ತನ್ನ ಆಸೆಯನ್ನು ಇತಿಮಿತಿಯಲ್ಲಿ ಇಟ್ಟುಕೊಳ್ಳಬೇಕು. ದೇವರು ಈ ಭೂಮಿಯನ್ನು ಸಕಲ ಜೀವರಾಶಿಗಳಿಗಾಗಿ ಸೃಷ್ಟಿಸಿದ್ದು ಅದನ್ನು ನಾವು ಎಲ್ಲರೂ ಸರಿಯಾಗಿ ಬಳಸಿಕೊಳ್ಳಬೇಕು. ಈ ಕಾರ್ಯಾಗಾರವು ಕೇವಲ ಚರ್ಚಾ ವೇದಿಕೆಯಾಗಿರದೆ ಸಮಸ್ಯೆಗೆ ಸಮಗ್ರ, ವೈಜ್ಞಾನಿಕ ಮತ್ತು ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವ ಒಂದು ಗಂಭೀರ ಪ್ರಯತ್ನವಾಗಿದೆ ಎಂದು ಹೇಳಿದರು.
ವಿಜಯನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೆಚ್.ಅನುಪಮ ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಇರುವ ಕಾರಣಗಳು, ಸವಾಲುಗಳು ಮತ್ತು ಪರಿಹಾರ ಕುರಿತು ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ವಿಜಯನಗರ ಜಿಲ್ಲೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ. ರಾಜಶೇಖರ್, ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜ್ ಸೇರಿದಂತೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ನ್ಯಾಯಾಧೀಶರು, ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು, ನ್ಯಾಯಾಂಗ ಇಲಾಖೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.