Vijayanagara | ಶಿಕ್ಷಣ ಪವಿತ್ರತೆ ಕಳೆದುಕೊಂಡು ವ್ಯವಹಾರವಾಗುತ್ತಿರುವುದು ವಿಷಾದನೀಯ : ಪ್ರೊ.ಮಹಾಬಲೇಶ್ವರಪ್ಪ
ಕೊಟ್ಟೂರು (ವಿಜಯನಗರ): ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆ ತನ್ನ ಪವಿತ್ರತೆಯನ್ನು ಕಳೆದುಕೊಂಡು ಕೇವಲ ವ್ಯವಹಾರವಾಗಿ ಮಾರ್ಪಡುತ್ತಿರುವುದು ಅತ್ಯಂತ ವಿಪರ್ಯಾಸದ ಸಂಗತಿಯಾಗಿದೆ ಎಂದು ಕೊಟ್ಟೂರೇಶ್ವರ ಮಹಾವಿದ್ಯಾಲಯದ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಸಂಶೋಧಕ, ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಬಿ.ಸಿ. ಮಹಾಬಲೇಶ್ವರಪ್ಪ ಕಳವಳ ವ್ಯಕ್ತಪಡಿಸಿದರು.
ಸ್ಥಳೀಯ ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ 1991ರಿಂದ 1996ರವರೆಗೆ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳ ಬಳಗ ಆಯೋಜಿಸಿದ್ದ ‘ಸಂಭ್ರಮದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ’ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಪ್ರೊ. ಮಹಾಬಲೇಶ್ವರಪ್ಪ, ಅಂದಿನ ಕಾಲದಲ್ಲಿ ವಿದ್ಯಾರ್ಥಿಗಳಲ್ಲಿ ಗುರುಗಳ ಬಗ್ಗೆ ಪೂಜ್ಯ ಭಾವನೆ, ಕಲಿಕೆಯಲ್ಲಿ ಶ್ರದ್ಧೆ ಹಾಗೂ ನಿಷ್ಠೆ ಹೆಚ್ಚಾಗಿತ್ತು. ಅಂದು ವಿದ್ಯಾರ್ಥಿಗಳು ತೋರಿದ ಶ್ರದ್ಧೆಯ ಫಲವಾಗಿ ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಹಾಗೂ ಗೌರವಯುತ ಸ್ಥಾನಮಾನಗಳಲ್ಲಿ ನೆಲೆಸಲು ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸುಮಾರು 30 ವರ್ಷಗಳ ಸುದೀರ್ಘ ಅವಧಿಯ ನಂತರವೂ ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ನೆನಪಿನಲ್ಲಿಟ್ಟುಕೊಂಡು ಒಂದೆಡೆ ಸೇರಿಸಿ ಗೌರವಿಸಿ ಸನ್ಮಾನಿಸುತ್ತಿರುವುದು ಹಳೆಯ ವಿದ್ಯಾರ್ಥಿಗಳಲ್ಲಿರುವ ಅಪಾರ ಅಭಿಮಾನ, ಸಂಸ್ಕಾರ ಹಾಗೂ ಗುರುಭಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಶ್ಲಾಘಿಸಿದರು.
ದಶಕಗಳ ಬಳಿಕ ತಮ್ಮ ನೆಚ್ಚಿನ ಗುರುಗಳು ಹಾಗೂ ಸಹಪಾಠಿಗಳನ್ನು ಕಂಡ ಹಳೆಯ ವಿದ್ಯಾರ್ಥಿಗಳು ಭಾವುಕರಾದರು. ಕಾಲೇಜು ದಿನಗಳಲ್ಲಿ ಅನುಭವಿಸಿದ ಮಧುರ ಕ್ಷಣಗಳು, ಗುರುಗಳು ನೀಡಿದ ಮಾರ್ಗದರ್ಶನ ಹಾಗೂ ಜೀವನದ ಮೌಲ್ಯಗಳನ್ನು ನೆನಪಿಸಿಕೊಂಡು ಕೃತಜ್ಞತೆ ಸಲ್ಲಿಸಿದರು. ಕಾಲೇಜಿನ ಆವರಣದಲ್ಲಿ ಹಳೆಯ ನೆನಪುಗಳ ಮೆಲುಕು ಹಾಕುವ ವಾತಾವರಣ ನಿರ್ಮಾಣವಾಗಿತ್ತು.
ಕಾರ್ಯಕ್ರಮದಲ್ಲಿ ಭೀಮಣ್ಣ ಗಜಪುರ, ಜಯಶ್ರೀ ಕೌಶಲ್ಯ ಹಾಗೂ ಕೊಡಳ್ಳಿ ಪ್ರಕಾಶ್ ಅವರು ತಮ್ಮ ಕಾಲೇಜು ದಿನಗಳ ಮಧುರ ನೆನಪುಗಳು ಹಾಗೂ ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿಗೆ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಉಪನ್ಯಾಸಕರಾದ ಸಹದೇವಪ್ಪ, ನಾಗನಗೌಡ, ಮಸ್ತನಪ್ಪ, ಶಶಿಕಿರಣ, ಗದಗೇಶ್, ಮಹೇಶ್ವರಮೂರ್ತಿ, ಪೂಜಾರ ಕೊಟ್ರಪ್ಪ ಹಾಗೂ ಕುಸುಮ ಸೇರಿದಂತೆ ಹಲವು ನಿವೃತ್ತ ಅಧ್ಯಾಪಕರನ್ನು ಹಳೆಯ ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಂಗನಹಳ್ಳಿ ನಾಗರಾಜ್ ಸ್ವಾಗತಿಸಿದರು. ವಾಗೀಶ ಎನ್.ಎಂ. ಹಾಗೂ ಆರ್. ಶ್ರೀಧರ ನಿರೂಪಿಸಿದರು. ಅಂಬಳಿ ಲೋಕೇಶ್ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಹರಪನಹಳ್ಳಿ ಕೊಟ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಂಬೂರಿ ಕೊಟ್ರೇಶ್ ವಂದನಾರ್ಪಣೆ ಸಲ್ಲಿಸಿದರು.
ಸ್ಮರಣೀಯ ಹಾಗೂ ಭಾವನಾತ್ಮಕ ಕಾರ್ಯಕ್ರಮದಲ್ಲಿ 1991–96ನೇ ಸಾಲಿನ ನೂರಾರು ಹಳೆಯ ವಿದ್ಯಾರ್ಥಿಗಳು, ಅವರ ಕುಟುಂಬಸ್ಥರು ಹಾಗೂ ಕಾಲೇಜಿನ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.