ಸಾಂದರ್ಭಿಕ ಚಿತ್ರ

ಹರಪನಹಳ್ಳಿ: ತಾಲೂಕಿನಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಂತರ ಸಚಿವಾಲಯದ ಕೇಂದ್ರೀಯ ಅಧ್ಯಯನ ತಂಡವು ಅ.5ರಂದು ಹರಪನಹಳ್ಳಿ ತಾಲೂಕಿನಲ್ಲಿ ಬರ ಅಧ್ಯಯನ ನಡೆಸಲಿದೆ.

ಬೆಳಿಗ್ಗೆ 9.15ಕ್ಕೆ ತಾಲೂಕಿನ ಗಡಿ ಭಾಗವಾದ ದುಗ್ಗಾವತಿ ಬಳಿ ಉಪವಿಭಾಗಾಧಿಕಾರಿ ಸುರೇಶ್ ಕುಮಾರ್ ನೇತೃತ್ವದಲ್ಲಿ ತಹಶೀಲ್ದಾರ್ ಬಿ.ವಿ. ಗಿರೀಶ್ ಬಾಬು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಕೇಂದ್ರ ತಂಡವನ್ನು ಬರಮಾಡಿಕೊಳ್ಳಲಿದ್ದಾರೆ.

ನಂತರ ಬೆಳಿಗ್ಗೆ 9.45ಕ್ಕೆ ನೀಲಗುಂದ ಗ್ರಾಮಕ್ಕೆ ಭೇಟಿ ನೀಡಲಿರುವ ತಂಡವು, ಅಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೈಗೊಂಡಿರುವ ಕೆರೆ ಪುನಶ್ಚೇತನ ಕಾಮಗಾರಿಯನ್ನು ವೀಕ್ಷಿಸಲಿದೆ.

ಬಳಿಕ ಬೆಳಿಗ್ಗೆ 11 ಗಂಟೆಗೆ ಮೈದೂರು ಗ್ರಾಮಕ್ಕೆ ಆಗಮಿಸಲಿರುವ ತಂಡವು, ಬರದಿಂದ ಹಾನಿಗೊಳಗಾದ ಮೆಕ್ಕೆಜೋಳ, ರಾಗಿ, ಕಡಲೆಕಾಯಿ, ಸೂರ್ಯಕಾಂತಿ ಹಾಗೂ ಈರುಳ್ಳಿ ಬೆಳೆಗಳ ಸ್ಥಿತಿಯನ್ನು ಖುದ್ದು ಪರಿಶೀಲಿಸಲಿದೆ. ಅಲ್ಲದೆ, ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಕುರಿತು ರೈತರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಲಿದೆ.

ಮೈದೂರಿನಲ್ಲಿ ಪರಿಶೀಲನೆ ಪೂರ್ಣಗೊಳಿಸಿದ ನಂತರ ತಂಡವು ಹೂವಿನಹಡಗಲಿ ತಾಲೂಕಿನ ಇಟಗಿ ಗ್ರಾಮದತ್ತ ಪ್ರಯಾಣ ಬೆಳೆಸಲಿದೆ.

ಕೇಂದ್ರ ಅಧ್ಯಯನ ತಂಡದ ಭೇಟಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor