ವಿಜಯನಗರ (ಹೊಸಪೇಟೆ) : ಅಂತರರಾಷ್ಟ್ರೀಯ ಸುರಕ್ಷಿತ ಗರ್ಭಪಾತ ಸೇವಾ ದಿನದ ಅಂಗವಾಗಿ ಸುರಕ್ಷಿತ ಗರ್ಭಪಾತದ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶನಿವಾರ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಸುರಕ್ಷಿತ ಗರ್ಭಪಾತ ಸೇವಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನಧಿಕೃತ ವ್ಯಕ್ತಿಗಳಿಂದ, ನಕಲಿ ಗಿಡಮೂಲಿಕೆಗಳು ಹಾಗೂ ಮಾತ್ರೆಗಳ ಮೂಲಕ ಗರ್ಭಪಾತ ಮಾಡಿಸಿಕೊಳ್ಳುವುದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೆ, ಕೆಲ ಸಂದರ್ಭಗಳಲ್ಲಿ ಜೀವಕ್ಕೂ ಅಪಾಯ ಉಂಟುಮಾಡಬಹುದು ಎಂದು ಎಚ್ಚರಿಸಿದರು. ಅನಪೇಕ್ಷಿತ ಗರ್ಭಧಾರಣೆ, ತಾಯಿ ಅಥವಾ ಭ್ರೂಣದ ಆರೋಗ್ಯಕ್ಕೆ ಅಪಾಯವಿರುವ ಸಂದರ್ಭಗಳಲ್ಲಿ ಹಾಗೂ ಅತ್ಯಾಚಾರದಂತಹ ಪ್ರಕರಣಗಳಲ್ಲಿ ಕಾನೂನುಬದ್ಧವಾಗಿ ಅರ್ಹತೆ ಹೊಂದಿರುವ ಸಂದರ್ಭಗಳಲ್ಲಿ ಸುರಕ್ಷಿತವಾಗಿ ಗರ್ಭಪಾತ ಸೇವೆ ಪಡೆಯಲು ಅವಕಾಶವಿದೆ. ಆದರೆ ವೈದ್ಯರ ಸಲಹೆ ಅಥವಾ ಮೇಲ್ವಿಚಾರಣೆಯಿಲ್ಲದೆ ಮೆಡಿಕಲ್‌ ಶಾಪ್‌ಗಳಿಂದ ಗರ್ಭಪಾತದ ಮಾತ್ರೆಗಳನ್ನು ಪಡೆದು ಸೇವಿಸುವುದು ಅಪಾಯಕಾರಿ ಎಂದು ತಿಳಿಸಿದರು.

ಹೆಣ್ಣು ಭ್ರೂಣಹತ್ಯೆ ಕಾನೂನುಬದ್ಧವಾಗಿ ಶಿಕ್ಷಾರ್ಹ ಅಪರಾಧವಾಗಿದ್ದು, ಲಿಂಗ ಆಯ್ಕೆಗಾಗಿ ಗರ್ಭಪಾತ ಮಾಡಿಸುವುದು ಕಾನೂನುಬಾಹಿರವಾಗಿದೆ. ಮಹಿಳೆಯ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾನೂನಿನ ವ್ಯಾಪ್ತಿಯಲ್ಲಿ ಸುರಕ್ಷಿತ ಗರ್ಭಪಾತ ಸೇವೆಗಳನ್ನು ಒದಗಿಸಲಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ವೈದ್ಯಾಧಿಕಾರಿ ಡಾ. ಎಂ. ವಿನಯ್ ವಹಿಸಿದ್ದರು. ಈ ವೇಳೆ ನೂರು ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಂಗಾಧರ ಮೇಟಿ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ, ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor