Vijayanagara | ಸ್ವಚ್ಛ ಹಂಪಿ, ಹಸಿರು ಹಂಪಿಗೆ ಎಲ್ಲರೂ ಕೈಜೋಡಿಸಿ: ಪ್ರಭುಲಿಂಗ
ವಿಜಯನಗರ (ಹೊಸಪೇಟೆ): ಹಂಪಿಗೆ ಪ್ರತಿದಿನ ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಐತಿಹಾಸಿಕ ಸ್ಮಾರಕಗಳು, ರಸ್ತೆಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಕಸವನ್ನು ಎಲ್ಲೆಂದರಲ್ಲಿ ಹಾಕದೆ ನಿಗದಿತ ಸ್ಥಳದಲ್ಲೇ ವಿಲೇವಾರಿ ಮಾಡಿ ಸ್ವಚ್ಛ ಹಂಪಿ, ಹಸಿರು ಹಂಪಿ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ಎಸ್. ತಳಕೇರಿ ಕರೆ ನೀಡಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಕಮಲಾಪುರದ ಇವೊಲ್ವ್ ಬ್ಯಾಕ್ ರೆಸಾರ್ಟ್ ಸಹಯೋಗದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ–2026 ಅಂಗವಾಗಿ ಹಂಪಿಯ ವಿರೂಪಾಕ್ಷ ದೇವಸ್ಥಾನ ಮುಂಭಾಗ ಮತ್ತು ಗ್ರಾಮ ಪಂಚಾಯಿತಿ ಪಾರ್ಕಿಂಗ್ ಪ್ರದೇಶದಲ್ಲಿ ನಡೆದ ಎರಡನೇ ದಿನದ ಸ್ವಚ್ಛತಾ ಪಕ್ವಾಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಂಪಿಯ ನಿವಾಸಿಗಳು, ವ್ಯಾಪಾರಸ್ಥರು ಮತ್ತು ಆಟೋ ಚಾಲಕರು ಪ್ರವಾಸಿಗರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಬೀದಿಬದಿ ವ್ಯಾಪಾರಿಗಳು ಆಹಾರ ತ್ಯಾಜ್ಯ, ಪ್ಲಾಸ್ಟಿಕ್ ಸೇರಿದಂತೆ ಇತರೆ ಕಸವನ್ನು ರಸ್ತೆಗೆ ಎಸೆಯದೆ ಕಸದ ಬುಟ್ಟಿಗಳನ್ನು ಬಳಸಬೇಕು ಎಂದು ಸೂಚಿಸಿದರು.
ಹಂಪಿಯನ್ನು ಸ್ವಚ್ಛ, ಹಸಿರು ಹಾಗೂ ಸುಂದರವಾಗಿ ಉಳಿಸುವ ಮೂಲಕ ದೇಶ-ವಿದೇಶದ ಪ್ರವಾಸಿಗರಿಗೆ ಉತ್ತಮ ಅನುಭವ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಯ್ಕ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಭಿಯಂತರ ಸುನೀಲ, ಇವೊಲ್ವ್ ಬ್ಯಾಕ್ ರೆಸಾರ್ಟ್ ಜನರಲ್ ಮ್ಯಾನೇಜರ್ ಬಿಪಿನ್ ಬಿದ್ದಪ್ಪ, ಹಂಪಿ ಗೈಡ್‌ಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.