Vijayanagara | ಗಣೇಶೋತ್ಸವದಲ್ಲಿ ಸಸಿ ವಿತರಣೆ; ಪರಿಸರ ಸಂರಕ್ಷಣೆಗೆ ಕರೆ
ಹೊಸಪೇಟೆ/ವಿಜಯನಗರ: ನಗರದ ವಡಕರಾಯ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿ ಉತ್ಸವದ ಅಂಗವಾಗಿ ಶ್ರೀ ಸಸ್ಯ ಶ್ಯಾಮಲಾ ಸಂರಕ್ಷಣಾ ಸೇವಾ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಸಸಿಗಳ ವಿತರಣೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಮುಖಂಡ ಜಗದೀಶ್, ಭೂ, ವಾಯು ಹಾಗೂ ಜಲ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಟ್ರಸ್ಟ್ ಅಧ್ಯಕ್ಷ ವಿ. ನಾಗರಾಜ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಗರದಲ್ಲಿ ನಡೆಯುವ ಜಯಂತಿ, ಜಾತ್ರೆ ಹಾಗೂ ಉತ್ಸವಗಳ ಆಯೋಜಕರು ಸಸಿ ನೆಡುವುದು ಅಥವಾ ವಿತರಿಸುವುದನ್ನು ಕಡ್ಡಾಯಗೊಳಿಸುವಂತೆ ಜಿಲ್ಲಾಡಳಿತ ಹಾಗೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಟ್ರಸ್ಟ್ ಉಪಾಧ್ಯಕ್ಷ ಎ. ಗೋವಿಂದ ಮಾತನಾಡಿ, ಪರಿಸರ ಮಾಲಿನ್ಯ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಶುದ್ಧ ಗಾಳಿಗೂ ಹಣ ಪಾವತಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು. ಪರಿಸರ ಸಂರಕ್ಷಣೆಗೆ ಎಲ್ಲರೂ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯ ಪ್ರಭಾಕರ್, ವಾಹಿನಿ ಅಭಿವೃದ್ಧಿ ಸಂಸ್ಥೆಯ ಶಿವಕುಮಾರ್, ಜಂಬಯ್ಯ, ಬಿ. ರಮೇಶ್, ರಾಜೇಶ್, ಭೋವಿ ಸಮಾಜದ ಮುಖಂಡರಾದ ವಿ.ಎನ್. ಹುಲುಗಪ್ಪ, ಶಶಿಕುಮಾರ್ ಹಾಗೂ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಮುಖಂಡರು ಸೇರಿದಂತೆ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.