Vijayanagara | ನೂತನ ಡಿಎಚ್‌ಒ ಡಾ.ಟಿ.ಲಿಂಗರಾಜುಗೆ ಸನ್ಮಾನ; ಆರೋಗ್ಯ ಸೇವೆ ಸುಧಾರಣೆಗೆ ಮನವಿ
ಹೊಸಪೇಟೆ/ವಿಜಯನಗರ: ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಆಗಿ ಅಧಿಕಾರ ಸ್ವೀಕರಿಸಿರುವ ಡಾ. ಟಿ. ಲಿಂಗರಾಜು ಅವರನ್ನು ಸ್ಲಂ ಜನರ ಸಂಘಟನೆ ಕರ್ನಾಟಕದ ಜಿಲ್ಲಾ ಸಮಿತಿ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು ಆರೋಗ್ಯ ಇಲಾಖೆಯ ಅಭಿವೃದ್ಧಿ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಗಳ ಕುರಿತು ಡಿಎಚ್‌ಒ ಅವರೊಂದಿಗೆ ಸಮಾಲೋಚನೆ ನಡೆಸಿದರು. ಹೊಸದಾಗಿ ನಿರ್ಮಾಣಗೊಂಡಿರುವ 250 ಹಾಸಿಗೆಗಳ ಜಿಲ್ಲಾಸ್ಪತ್ರೆಯನ್ನು ಯಾವುದೇ ವಿಳಂಬವಿಲ್ಲದೆ ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಸರ್ಕಾರಿ ಬ್ಲಡ್ ಬ್ಯಾಂಕ್ ಸ್ಥಾಪಿಸುವ ಅಗತ್ಯವಿದ್ದು, ತುರ್ತು ಚಿಕಿತ್ಸೆಗೆ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು. ಅಲ್ಲದೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸೇವೆಗಳನ್ನು ಮತ್ತಷ್ಟು ಬಲಪಡಿಸಿ, ಹೆರಿಗೆ ಸೇರಿದಂತೆ ತುರ್ತು ಚಿಕಿತ್ಸೆಗಳಿಗಾಗಿ ಗರ್ಭಿಣಿಯರನ್ನು ಪಕ್ಕದ ಜಿಲ್ಲೆಗಳಿಗೆ ರೆಫರ್ ಮಾಡುವ ಪರಿಸ್ಥಿತಿ ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಆರೋಗ್ಯ ಇಲಾಖೆಯ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು ಸಾರ್ವಜನಿಕ ಸಂಘಟನೆಗಳೊಂದಿಗೆ ನಿಯಮಿತ ಸಭೆಗಳನ್ನು ನಡೆಸಿ, ಜನಪರ ಹಾಗೂ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಬೇಕೆಂದು ಸಂಘಟನೆ ಮನವಿ ಮಾಡಿತು.
ಮನವಿಗೆ ಪ್ರತಿಕ್ರಿಯಿಸಿದ ಡಾ. ಟಿ. ಲಿಂಗರಾಜು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವುದು ಇಲಾಖೆಯ ಆದ್ಯತೆಯಾಗಿದ್ದು, ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಎಚ್. ಶೇಷು, ಉಪಾಧ್ಯಕ್ಷ ತನ್ವೀರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಎನ್. ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಗುತ್ತಿ ಕೈಲಾಸ್, ಖಜಾಂಚಿ ಕೃಷ್ಣ, ಮಹಿಳಾ ಘಟಕದ ಅಧ್ಯಕ್ಷೆ ಹುಲಿಗೆಮ್ಮ, ಉಪಾಧ್ಯಕ್ಷೆ ನೂರ್ ಜಹಾನ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.