Vijayanagara | ಈಶಾನ್ಯ ಶಿಕ್ಷಕ ಕ್ಷೇತ್ರದ ಚುನಾವಣೆ: ಕೊಟ್ಟೂರಿನಲ್ಲಿ ಎರಡನೇ ಹಂತದ ತರಬೇತಿ
ಕೊಟ್ಟೂರು (ವಿಜಯನಗರ): ಈಶಾನ್ಯ ಶಿಕ್ಷಕ ಕ್ಷೇತ್ರದ ಚುನಾವಣೆ–2026ಕ್ಕೆ ಸಂಬಂಧಿಸಿದಂತೆ ಮತಗಟ್ಟೆಗಳಿಗೆ ನಿಯೋಜಿಸಲಾದ ಸಿಬ್ಬಂದಿಗೆ ಎರಡನೇ ಹಂತದ ಚುನಾವಣಾ ತರಬೇತಿಯನ್ನು ಕೊಟ್ಟೂರಿನ ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ನೀಡಲಾಯಿತು.
ಈಗಾಗಲೇ ಮೊದಲ ಹಂತದ ಚುನಾವಣಾ ತರಬೇತಿಯನ್ನು ಕೊಪ್ಪಳದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ನೀಡಲಾಗಿತ್ತು. ಎರಡನೇ ಹಂತದ ತರಬೇತಿಯಲ್ಲಿ ಮಾಸ್ಟರ್ ಟ್ರೈನರ್ ಮಹೇಶ ಅವರು ಚುನಾವಣಾ ಪ್ರಕ್ರಿಯೆ ನಡೆಸುವ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.
ಕಲಬುರಗಿಯ ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿಗಳು ವಿಡಿಯೊ ಸಂವಾದದ ಮೂಲಕ ಚುನಾವಣೆಗೆ ಸಂಬಂಧಿಸಿದ ಪ್ರಮುಖ ಸೂಚನೆಗಳನ್ನು ನೀಡಿದರು. ಅಲ್ಲದೆ, ತರಬೇತಿ ಕಾರ್ಯಕ್ರಮವನ್ನು ವೀಕ್ಷಿಸಿದರು.
ಕೊಟ್ಟೂರು ತಾಲೂಕಿನಲ್ಲಿ ಒಟ್ಟು ಎರಡು ಮತಗಟ್ಟೆಗಳಿದ್ದು, ಮತಗಟ್ಟೆ ಸಂಖ್ಯೆ 25ರ ಕೋಗಳಿಯಲ್ಲಿ 31 ಮತದಾರರು ಹಾಗೂ ಮತಗಟ್ಟೆ ಸಂಖ್ಯೆ 26ರ ಕೊಟ್ಟೂರಿನಲ್ಲಿ 491 ಮತದಾರರಿದ್ದಾರೆ. ಒಟ್ಟಾರೆ ತಾಲೂಕಿನಲ್ಲಿ 523 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ.
ಅಕ್ಟೋಬರ್ 23ರಂದು ಚುನಾವಣೆ ನಡೆಯಲಿದ್ದು, ಯಾವುದೇ ಲೋಪವಾಗದಂತೆ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಗ್ರೇಡ್-2 ತಹಶೀಲ್ದಾರ್ ಎಂ. ಪ್ರತಿಭಾ ಸೂಚನೆ ನೀಡಿದರು.
ಪ್ರತಿಯೊಂದು ಮತಗಟ್ಟೆಗೆ ತಲಾ ಒಬ್ಬರು ಪಿಆರ್ಒ, ಎಪಿಆರ್ಒ, ಪಿಒ-1, ಪಿಒ-2 ಹಾಗೂ ಮೈಕ್ರೋ ಅಬ್ಸರ್ವರ್ರನ್ನು ನಿಯೋಜಿಸಲಾಗಿದೆ. ತಾಲೂಕಿಗೆ ಒಬ್ಬ ಸೆಕ್ಟೋರಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಚುನಾವಣೆಗೆ ಅಗತ್ಯವಿರುವ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಅಮರೇಶ್ ಜಿ.ಕೆ. ತಿಳಿಸಿದರು.