×
Ad

ವಿಜಯಪುರ : ಲಕ್ಷಾಂತರ ರೂ. ಮೌಲ್ಯದ ವಸ್ತುಗಳ ಕಳ್ಳತನ; ಆರೋಪಿ ಬಂಧನ

Update: 2026-01-22 14:29 IST

ನಿಡಗುಂದಿ, ಜ.21: ಟ್ರಕ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ನಾನಾ ಬಗೆಯ ವಸ್ತುಗಳ ಬಾಕ್ಸ್‌ಗಳನ್ನು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದು, ಸುಮಾರು 30 ಲಕ್ಷ ರೂ. ಮೌಲ್ಯದ 525 ಬಾಕ್ಸ್‌ಗಳ ನಾನಾ ಬಗೆಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಹೊಸೂರ ಕ್ರಾಸ್ ನಿವಾಸಿ, ರಾಜಸ್ಥಾನ ಮೂಲದ ವಾಲರಾಮ ತೇಜಾರಾಮ (32) ಬಂಧಿತ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲ ಆರೋಪಿಗಳು ಪರಾರಿಯಾಗಿದ್ದಾರೆ.

ಕಳೆದ ಡಿಸೆಂಬರ್ 20ರಂದು ಪಾಂಡಿಚೇರಿಯಿಂದ ಮಹಾರಾಷ್ಟ್ರದ ಬೀವಂಡಿಗೆ ಗೋದ್ರೇಜ್ ಕನ್ಸ್ಯೂಮರ್ ಪ್ರೊಡಕ್ಟ್ಸ್ ಲಿಮಿಟೆಡ್‌ಗೆ ಸೇರಿದ ನಾನಾ ಬಗೆಯ ವಸ್ತುಗಳಿರುವ 1,323 ಬಾಕ್ಸ್‌ಗಳನ್ನು ಲೋಡ್ ಮಾಡಿಕೊಂಡು ಹೊರಟಿದ್ದ ಶುಭಂ ಟ್ರಾನ್ಸ್‌ಪೋರ್ಟ್‌ಗೆ ಸೇರಿದ ಕಂಟೈನರ್ ಟ್ರಕ್‌ನಲ್ಲಿದ್ದ 525 ಬಾಕ್ಸ್‌ಗಳನ್ನು ಆಲಮಟ್ಟಿಯಲ್ಲಿ ಕಳವು ಮಾಡಿಕೊಂಡು ಹೋಗಿರುವ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ಇಲಾಖೆ, ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಹಾಗೂ ಬಸವನಬಾಗೇವಾಡಿ ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ಅವರ ಮಾರ್ಗದರ್ಶನದಲ್ಲಿ ನಿಡಗುಂದಿ ಸಿಪಿಐ ಶರಣಗೌಡ ಗೌಡರ ಮತ್ತು ಪಿಎಸ್ಐಗಳಾದ ಶಿವಾನಂದ ಪಾಟೀಲ ಹಾಗೂ ಎ.ಕೆ. ಸೊನ್ನದ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತು.

ತನಿಖೆ ಮುಂದುವರಿಸಿದ ತಂಡವು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ, ಕಳವುಗೈದ ವಸ್ತುಗಳನ್ನು ಜಪ್ತಿ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News