×
Ad

ವಿಜಯಪುರ | ಕಿತ್ತೂರು ಚೆನ್ನಮ್ಮ ಅವರ ಭವ್ಯ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Update: 2026-01-09 14:59 IST

ವಿಜಯಪುರ: ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ಪ್ರತಿಷ್ಠಾಪಿಸಲಾಗಿರುವ ಅಶ್ವಾರೂಢ ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಭವ್ಯ ಪ್ರತಿಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗಣ್ಯರ ಸಮ್ಮುಖದಲ್ಲಿ ಅನಾವರಣಗೊಳಿಸಿದರು.

ಮೂರ್ತಿಯನ್ನು ಅನಾವರಣಗೊಳಿಸಿದ ಬಳಿಕ ನೆರೆದಿದ್ದ ಸಾವಿರಾರು ಜನರಿಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಆತ್ಮೀಯವಾಗಿ ಕೈ ಮುಗಿದು ಗೌರವ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ 'ಕಿತ್ತೂರು ರಾಣಿ ಚೆನ್ನಮ್ಮ ಬಸ್ ನಿಲ್ದಾಣ' ಎಂದು ನಾಮಕರಣ ಮಾಡಿದ ನಾಮಫಲಕವನ್ನು ಸಹ ಮುಖ್ಯಮಂತ್ರಿಗಳು ಉದ್ಘಾಟಿಸಿದರು.

ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ಚೆನ್ನಮ್ಮ ಅವರ ಜನ್ಮಭೂಮಿ ಜಂಬಗಿಯಿಂದ ಹೊರಟ 'ವೀರ ಜ್ಯೋತಿ'ಯು ವಿಜಯಪುರಕ್ಕೆ ತಲುಪಿತು. ಅಲ್ಲಿಂದ ಸಾವಿರಾರು ಮಹಿಳೆಯರು ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ಜಮಾಯಿಸಿ, ಪೂರ್ಣಕುಂಭ ಹೊತ್ತು ಭವ್ಯ ಮೆರವಣಿಗೆಯನ್ನು ನಡೆಸಿದರು. ಕೇಸರಿ ವರ್ಣದ ಶಲ್ಯ ಹಾಗೂ ಟೊಪ್ಪಿಗೆ ಧರಿಸಿದ ಸಾವಿರಾರು ಯುವಕರು 'ಜೈ ಚೆನ್ನಮ್ಮ' ಎಂಬ ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಬಸ್ ನಿಲ್ದಾಣದ ಎದುರು ಹಾಕಲಾಗಿದ್ದ ಬೃಹತ್ ಶಾಮಿಯಾನದಲ್ಲಿ ಸಾವಿರಾರು ಮಹಿಳೆಯರು ಹಾಗೂ ಸಾರ್ವಜನಿಕರಿಗೆ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಮಹಾಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಸಚಿವರಾದ ಡಾ.ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ರಾಮಲಿಂಗಾರೆಡ್ಡಿ, ಭೈರತಿ ಸುರೇಶ್, ಡಾ. ಎಚ್.ಸಿ. ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕೆ.ಎಸ್.ಡಿ.ಎಲ್ ಅಧ್ಯಕ್ಷ ಸಿ.ಎಸ್. ನಾಡಗೌಡ, ಶಾಸಕರಾದ ಯಶವಂತರಾಯಗೌಡ ಪಾಟೀಲ್, ವಿಠ್ಠಲ ಕಟಕಧೋಂಡ, ಅಶೋಕ ಮನಗೂಳಿ, ರಾಜುಗೌಡ ಪಾಟೀಲ್, ಪಂಚಮಸಾಲಿ ಸಮಾಜದ ಮುಖಂಡರಾದ ಉಮೇಶ ಕೋಳಕೂರ, ರಾಜು ತೊರವಿ, ವಿದ್ಯಾರಾಣಿ ತುಂಗಳ, ಡಾ. ಸುರೇಶ ಬಿರಾದಾರ, ಮಲ್ಲಿಕಾರ್ಜುನ ಲೋಣಿ ಸೇರಿದಂತೆ ಹಲವು ಗಣ್ಯರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News