ʼಕೃಷ್ಣಾ ಮೇಲ್ದಂಡೆʼಗೆ ಕೇಂದ್ರ ಸರಕಾರ ಸಹಕಾರ ನೀಡುತ್ತಿಲ್ಲ; ನೆರೆ ರಾಜ್ಯಗಳಿಂದ ದಾವೆಗಳ ಮೂಲಕ ಅಡಚಣೆ : ಡಿ.ಕೆ.ಶಿವಕುಮಾರ್
"ಭೂಮಿ ಮುಳುಗಡೆ ಸಂತ್ರಸ್ತ ರೈತರಿಗೆ ಎಕರೆಗೆ 35-40 ಲಕ್ಷ ಪರಿಹಾರ"
ವಿಜಯಪುರ : “ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರ ಸಹಕಾರ ನೀಡುತ್ತಿಲ್ಲ. ಈ ಯೋಜನೆಗೆ ಅಧಿಸೂಚನೆ ಹೊರಡಿಸುತ್ತಿಲ್ಲ. ನೆರೆ ರಾಜ್ಯಗಳು ದಾವೆಗಳ ಮೂಲಕ ಯೋಜನೆ ಜಾರಿಗೆ ಅಡಚಣೆ ಉಂಟು ಮಾಡುತ್ತಿವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
“ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದು ಚುನಾವಣೆ ಪ್ರಚಾರದ ವೇಳೆ ನಾನು ಹೇಳಿದ್ದೆ. ಈ ಕೈಗೆ ಅಧಿಕಾರ ಸಿಕ್ಕಿದ ಕಾರಣಕ್ಕೆ ಇಂದು ದೊಡ್ಡ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ನಿಮ್ಮ ಜಿಲ್ಲೆಯಲ್ಲಿ ಕೃಷ್ಣ ಜಲಭಾಗ್ಯ ನಿಗಮದಲ್ಲಿ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಆದ್ಯತೆ ನೀಡಲಾಗಿದೆ. ನಾನು ಸಚಿವನಾದ ಬಳಿಕ 3,700 ಕೋಟಿ ಕೆಲಸವನ್ನು ಈ ಜಿಲ್ಲೆಗೆ ಮಂಜೂರು ಮಾಡಿದ್ದೇವೆ. 1.19 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಸಲ್ಲಿಸಲಾಗಿದೆ. ಯುಕೆಪಿ 3ನೇ ಹಂತದಲ್ಲಿ ನಿಮಗೆ 80 ಟಿಎಂಸಿ ನೀರು ಲಭ್ಯವಾಗುತ್ತದೆ. ಈ ಯೋಜನೆಗೆ ಅಧಿಸೂಚನೆ ಹೊರಡಿಸಿ ಎಂದು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಆದರೆ ಕೇಂದ್ರ ಸರಕಾರ ನಮಗೆ ಸಹಕಾರ ನೀಡುತ್ತಿಲ್ಲ. ನೆರೆ ರಾಜ್ಯಗಳು ನಮ್ಮ ಮೇಲೆ ದಾವೆ ಹೂಡಿ ಅಡ್ಡಪಡಿಸುತ್ತಿವೆ. ಆದರೂ ಕೆರೆಗಳನ್ನು ತುಂಬಿಸುವ ಮೂಲಕ ಸಾವಿರಾರು ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಭಾಗದಲ್ಲಿ 21 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಭೂಮಿ ಮುಳುಗಡೆ ಸಂತ್ರಸ್ತ ರೈತರಿಗೆ ಎಕರೆಗೆ 35-40 ಲಕ್ಷ ಪರಿಹಾರ :
“ಇತ್ತೀಚೆಗೆ ಈ ಭಾಗದ ನಮ್ಮ ಶಾಸಕರ ಒತ್ತಡದ ಮೇರೆಗೆ ನಾನು ಹಾಗೂ ಮುಖ್ಯಮಂತ್ರಿಗಳು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ, ಯುಕೆಪಿ ಯೋಜನೆ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಘೋಷಿಸಿದ್ದೇವೆ. ಕಳೆದ ಬೊಮ್ಮಾಯಿ ಅವರ ಸರ್ಕಾರ ಈ ಭಾಗದ ರೈತರಿಗೆ 20-25 ಲಕ್ಷ ಪ್ರತಿ ಎಕರೆಗೆ ಪರಿಹಾರ ನೀಡಲು ನಿರ್ಧರಿಸಿತ್ತು. 1,33,867 ಎಕರೆ ಮುಳುಗಡೆಯಾಗಲಿದ್ದು, ನಮ್ಮ ಸರಕಾರ ಪ್ರತಿ ಎಕರೆಗೆ 30-40 ಲಕ್ಷ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 70 ಸಾವಿರ ಕೋಟಿ ವಿತರಣೆ ಮಾಡಲಾಗುವುದು. ಇನ್ನು ಕಾಲುವೆ ಭೂ ಸಂತ್ರಸ್ಥರಿಗೆ 25-30 ಲಕ್ಷ ಪರಿಹಾರ ನೀಡಲು ನಿರ್ಧರಿಸಿದ್ದೇವೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತಂದು, ರೈತರಿಗೆ ಶಕ್ತಿ ತುಂಬಲು ಈ ಕೃಷ್ಣ ಯೋಜನೆ ಜಾರಿಗೆ ಪ್ರಯತ್ನಿಸುತ್ತಿದ್ದೇವೆ” ಎಂದು ವಿವರಿಸಿದರು.
“ಈ ಭಾಗದ ಅನೇಕ ರೈತರು ನ್ಯಾಯಾಲಯದ ಮೇಟ್ಟಿಲೇರಿದ್ದು, 29 ಸಾವಿರ ಪ್ರಕರಣಗಳು ಇವೆ. ಅಲ್ಲಿ ನಿಮಗೆ ಹೆಚ್ಚಿನ ಪರಿಹಾರ ಸಿಗಲಿದೆ ಎಂದು ಭಾವಿಸಿದ್ದೀರಿ. ಅದು ಸಾಧ್ಯವಿಲ್ಲ. ಕೋಟಿಗಟ್ಟಲೆ ಪರಿಹಾರ ನೀಡಬೇಕಾದರೆ, ಯಾವುದೇ ಸರಕಾರ ಈ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ. ಒಪ್ಪಿತ ಭೂಸ್ವಾಧೀನ ಪ್ರಕ್ರಿಯೆ ಮಾಡಬೇಕು ಎಂದು ನಿಮ್ಮ ನಾಯಕರ ಒತ್ತಡದ ಮೇರೆಗೆ ಸರಕಾರದ ಮೇಲೆ ಆರ್ಥಿಕ ಹೊರೆ ಬಿದ್ದರೂ ನಾವು ಈ ತೀರ್ಮಾನ ಮಾಡಿದ್ದೇವೆ. ನೀವೆಲ್ಲರೂ ಸರಕಾರದ ಪರಿಹಾರ ಪಡೆದು ಭೂಮಿಯನ್ನು ನೀಡಬೇಕು” ಎಂದು ಮನವಿ ಮಾಡಿದರು.
ಸರ್ವರಿಗೂ ಸಮಬಾಳು, ಸಮಪಾಲು ತತ್ವದ ಮೇಲೆ ಕೆಲಸ:
“ನಿಮಗೆ ನಮ್ಮ ಪಕ್ಷ ಹಾಗೂ ಸರಕಾರದ ಮೇಲೆ ಅಪಾರವಾದ ವಿಶ್ವಾಸವಿದೆ. ಇಂದು ವಿಜಯಪುರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ ಅವರ ಹೆಸರು ಇಟ್ಟಿದ್ದೇವೆ. ದೇವರಹಿಪ್ಪರಗಿಯಲ್ಲಿ ಮಡಿವಾಳ ಮಾಚಯ್ಯ ಅವರ ಹೆಸರು ಇಡಲಾಗಿದೆ. ಸುರಪುರದಲ್ಲಿ ರಾಜ ವೆಂಕಟಪ್ಪ ನಾಯಕ ಅವರ ಹೆಸರಿಡಲಾಗಿದೆ. ಸಿಂದಗಿಯಲ್ಲಿ ಚನ್ನವೀರ ಸ್ವಾಮೀಜಿ ಅವರ ಹೆಸರು ಇಡಲಾಗಿದೆ. ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದ ಮೇಲೆ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ಸರಕಾರ ಹೆಜ್ಜೆ ಇಟ್ಟಿದೆ” ಎಂದು ಹೇಳಿದರು.