ಅಸ್ಸಾಂ ವೈದ್ಯರ ಸಾವು ತಂದ ಆತಂಕ; ಜಿಮ್ನಲ್ಲಿ ಹಠಾತ್ ಹೃದಯ ಸ್ತಂಭನ ಸಂಭವಿಸುವುದು ಹೇಗೆ?
Screengrab : instagram.com
ಕಠಿಣ ವ್ಯಾಯಾಮದ ಕಹಿ ಸತ್ಯವೇನು? ಹೊರಗಿನ ಫಿಟ್‌ನೆಸ್ ಇದ್ದರೂ ಹೃದಯ ಎಷ್ಟು ಸುರಕ್ಷಿತ?
ಇತ್ತೀಚೆಗೆ ಅಸ್ಸಾಂನ ನಾಗಾಂವ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿರುವ 47 ವರ್ಷ ಪ್ರಾಯದ ಡಾ. ಸಾಹಿನ್ ರೆಹಮಾನ್ ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಹಠಾತ್ ಕುಸಿದು ಬಿದ್ದು, ಚೇತರಿಸಿಕೊಳ್ಳಲು ಸಾಧ್ಯವಾಗದೆ ನಿಧನರಾಗಿರುವುದು ಕಳವಳಕಾರಿ. ವೈದ್ಯರಾಗಿ ವ್ಯಾಯಾಮದಲ್ಲಿ ತೊಡಗಿಸಿಕೊಂಡಿದ್ದರು ಮತ್ತು ವಯಸ್ಸಿನಲ್ಲೂ ಚಿಕ್ಕವರು. ಇಂತಹ ವ್ಯಕ್ತಿಯ ನಿಧನ ಬಹಳ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮತ್ತು ಪ್ರಮುಖ ಹೃದಯತಜ್ಞರೂ ಆಗಿರುವ ಡಾ. ರಂಜನ್ ಶೆಟ್ಟಿ ಹೇಳುವ ಪ್ರಕಾರ, “ಹೃದಯದ ಆರೋಗ್ಯವನ್ನು ಇಂತಹ ಸ್ಥಿತಿ ಎಂದು ಹೇಳಲಾಗದು. ಗುರುತಿಸಲಾಗದ ತೊಡಕುಗಳು, ಲಯದಲ್ಲಿ ಮಾರಕವಾದ ಅಡಚಣೆ, ಒತ್ತಡ, ನಿದ್ರೆಯ ಕೊರತೆ ಅಥವಾ ತೀವ್ರ ಡಿಹೈಡ್ರೇಶನ್ ಕಾರಣದಿಂದ ಕುಸಿತ ಉಂಟಾಗಿರಬಹುದು. ಆರೋಗ್ಯವಾಗಿ ಕಾಣುವ ಮಂದಿಯಲ್ಲಿ ನಾವು ಮೌನವಾದ ಹೃದಯರಕ್ತನಾಳದ ಕಾಯಿಲೆಯ ಪ್ರಕರಣಗಳನ್ನು ಹೆಚ್ಚಾಗಿ ನೋಡುತ್ತಿದ್ದೇವೆ.”
ಆರೋಗ್ಯವಂತರಾಗಿರುವ ಊಹೆ ಸರಿಯೆ?
ತೆಳ್ಳಗಿನ ದೇಹ, ನಿಯಮಿತ ವ್ಯಾಯಾಮಗಳು, ಕಡಿಮೆ ವಿಶ್ರಾಂತಿ ಹೃದಯ ಬಡಿತ (ವ್ಯಕ್ತಿ ಚಟುವಟಿಕೆಯಿಲ್ಲದೆ ವಿಶ್ರಾಂತಿಯಲ್ಲಿ ಇದ್ದಾಗ ಹೃದಯವು ಒಂದು ನಿಮಿಷದಲ್ಲಿ ಎಷ್ಟು ಬಾರಿ ಬಡಿತ ಹೊಡೆಯುತ್ತದೆ ಎಂಬುದು), ಅನೇಕ ಕಿಲೋಮೀಟರ್ ಓಡುವ ಸಾಮರ್ಥ್ಯ ಅಥವಾ ಭಾರವಾದ ತೂಕವನ್ನು ಎತ್ತುವ ಸಾಮರ್ಥ್ಯವೆಲ್ಲವೂ ಧೈರ್ಯ ತುಂಬುವಂತೆ ಕಾಣಿಸಬಹುದು. ಆದರೆ ಇವು ಯಾವುವೂ ರೋಗನಿರ್ಣಯವಾಗದ ಹೃದಯರೋಗವನ್ನು ಸೂಚಿಸಲು ಸಾಧ್ಯವಿಲ್ಲ.
ಕಠಿಣ ವ್ಯಾಯಾಮದ ಸಮಯದಲ್ಲಿ ಹೃದಯವು ಹೆಚ್ಚು ಕೆಲಸ ಮಾಡುವುದು, ರಕ್ತದೊತ್ತಡ ಹೆಚ್ಚಾಗುವುದು ಮತ್ತು ಆಮ್ಲಜನಕದ ಬೇಡಿಕೆ ಹೆಚ್ಚಾಗುವುದು ದೇಹದ ಸಾಮಾನ್ಯ ಪ್ರತಿಕ್ರಿಯೆಯ ಭಾಗವಾಗಿದೆ. ಆದರೆ ದುರ್ಬಲವಾದ ಕೊರೊನರಿ ಆರ್ಟರಿ ಇದ್ದರೆ, ಗಮನಾರ್ಹ ರಿದಂ ಅಸಹಜತೆ ಅಥವಾ ಆಧಾರವಾಗಿರುವ ಸ್ಟ್ರಕ್ಚರಲ್ ಸಮಸ್ಯೆ ಇದ್ದರೆ, ಕಾರ್ಡಿಯೋವ್ಯಾಸ್ಕ್ಯುಲರ್ (ಹೃದಯರಕ್ತನಾಳ) ಬೇಡಿಕೆಯಲ್ಲಿನ ಹಠಾತ್ ಹೆಚ್ಚಳವು ಕೆಲವು ಸಂದರ್ಭಗಳಲ್ಲಿ ಬಿಕ್ಕಟ್ಟನ್ನು ಉಂಟುಮಾಡಬಹುದು. ವ್ಯಾಯಾಮದ ಸೆಷನ್‌ಗಳು ಅರಿವಿಲ್ಲದ ಸಮಸ್ಯೆಯನ್ನು ಸಾಮಾನ್ಯವಾಗಿ ಬಹಿರಂಗಪಡಿಸುತ್ತವೆ.
40ರ ವಯಸ್ಸಿನಲ್ಲಿ ಏಕೆ ಅಪಾಯ?
40ರ ವಯಸ್ಸಿನಲ್ಲಿ ವ್ಯಕ್ತಿಯ ಕಾರ್ಡಿಯೋವ್ಯಾಸ್ಕ್ಯುಲರ್ ಆರೋಗ್ಯವು ವರ್ಷಗಳ ದೀರ್ಘಕಾಲದ ಸಂಗ್ರಹಿತ ಪರಿಣಾಮವನ್ನು ಎದುರಿಸುತ್ತದೆ. ಅಂದರೆ, ವರ್ಷಗಳ ಕಾಲ ಕೊಲೆಸ್ಟರಾಲ್ ಮಟ್ಟ, ರಕ್ತದೊತ್ತಡ, ಮಧುಮೇಹ, ತಂಬಾಕು, ಅಸಮರ್ಪಕ ನಿದ್ರೆ, ಒತ್ತಡ, ಆಹಾರ, ಮದ್ಯಪಾನ ಮತ್ತು ಕುಟುಂಬದ ಇತಿಹಾಸ ಹೇಗಿತ್ತು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಕೆಲವರು ಯಾವುದೇ ಎಚ್ಚರಿಕೆ ಇಲ್ಲದೆಯೇ ಗಣನೀಯ ಅಪಾಯವನ್ನು ಹೊಂದಿರುತ್ತಾರೆ. ಭಾರತದಲ್ಲಿ ಇದು ವಿಶೇಷವಾಗಿ ಪ್ರಸ್ತುತವೆನಿಸಿದೆ. ಹೃದಯ ಕಾಯಿಲೆಯು ಅನೇಕ ಮಂದಿ ನಿರೀಕ್ಷಿಸುವುದಕ್ಕಿಂತ ಕಿರಿಯ ವಯಸ್ಸಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಆರೋಗ್ಯದ ಕಡೆಗೆ ಗಮನಹರಿಸದ ವೈದ್ಯರು
ವೈದ್ಯರು ಆರೋಗ್ಯ ವ್ಯವಸ್ಥೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿರುತ್ತಾರೆ. ಅವರಿಗೆ ಲಕ್ಷಣಗಳು ತಿಳಿದಿರುತ್ತವೆ. ಅಪಾಯಕಾರಿ ಅಂಶಗಳೂ ತಿಳಿದಿವೆ. ರೋಗಿಗಳಿಗೆ ಉತ್ತಮ ನಿದ್ರೆ, ವ್ಯಾಯಾಮ ಮಾಡುವುದು, ರಕ್ತದೊತ್ತಡ ನಿಯಂತ್ರಿಸುವುದು ಮತ್ತು ಕೊಲೆಸ್ಟರಾಲ್ ಪರೀಕ್ಷೆಗೆ ಒತ್ತಾಯಿಸುತ್ತಾರೆ.
ಆದರೆ ಅವರ ವೃತ್ತಿಯೇ ಕಷ್ಟಕರವಾಗಿರುತ್ತದೆ. ದೀರ್ಘ ಪಾಳಿಗಳು, ರಾತ್ರಿ ಕರ್ತವ್ಯ, ನಿದ್ರೆಗೆ ಅಡ್ಡಿ, ಭಾವನಾತ್ಮಕ ಬಳಲಿಕೆ, ನಿರಂತರ ಜವಾಬ್ದಾರಿ, ರೋಗಿಗಳನ್ನು ನೋಡಿ ಸಮಯ ಸಿಕ್ಕಾಗ ಊಟ ಮಾಡುವುದು—ದೇಹದ ನೈಸರ್ಗಿಕ ಗಡಿಯಾರವನ್ನು ಪಕ್ಕಕ್ಕಿಟ್ಟು ಕೆಲಸ ಮಾಡುವ ವರ್ಷಗಳು.
ಅಂದರೆ, ದೀರ್ಘಕಾಲದ ಒತ್ತಡ ಮತ್ತು ಕಳಪೆ ನಿದ್ರೆ ಕಾರ್ಡಿಯೋವ್ಯಾಸ್ಕ್ಯುಲರ್ ಅಪಾಯಕ್ಕೆ ಕಾರಣವಾಗಬಹುದು. ಮುಖ್ಯವಾಗಿ, ಇತರ ಅಂಶಗಳ ಜೊತೆಗೆ ಇವು ಸೇರಿಕೊಂಡರೆ ಅಪಾಯಕಾರಿ ಎನಿಸಬಹುದು.
ಕಠಿಣ ವ್ಯಾಯಾಮದಿಂದ ಹೃದಯದ ಮೇಲೆ ಒತ್ತಡ
ಕಠಿಣ ವ್ಯಾಯಾಮ ಎಂದರೆ ಕಾರ್ಡಿಯೋವ್ಯಾಸ್ಕ್ಯುಲರ್ ವ್ಯವಸ್ಥೆಯ ಮೇಲೆ ನಿಯಂತ್ರಿತ ಒತ್ತಡ ಹೇರುವುದು. ಆಗ ರಕ್ತದೊತ್ತಡ ಹೆಚ್ಚಾಗುತ್ತದೆ. ದೇಹವು ಅಡ್ರಿನಾಲಿನ್ ಬಿಡುಗಡೆ ಮಾಡುತ್ತದೆ. ಸ್ನಾಯುಗಳಿಗೆ ಹೆಚ್ಚು ಆಮ್ಲಜನಕ ಬೇಕಾಗುತ್ತದೆ. ಬಹುತೇಕ ಸಂದರ್ಭದಲ್ಲಿ ಇದೇ ಕಾರಣದಿಂದ ವ್ಯಾಯಾಮ ಅಗತ್ಯವಾಗುತ್ತದೆ.
ಆದರೆ ಎಷ್ಟು ತೀವ್ರವಾಗಿ ವ್ಯಾಯಾಮ ಮಾಡುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ರೋಗನಿರ್ಣಯವಾಗದ ಹೃದಯದ ಸ್ಥಿತಿ ಇರುವವರಿಗೆ ದೈನಂದಿನ ಚಟುವಟಿಕೆ ಸಹಿಸಿಕೊಳ್ಳಬಹುದು. ಆದರೆ ಹೆಚ್ಚು ಪರಿಶ್ರಮ ತೊಂದರೆ ಕೊಡಬಹುದು. ಭಾರ ಎತ್ತುವುದು, ಗರಿಷ್ಠ ಪ್ರಯತ್ನ, ತೀವ್ರ ಹೃದಯಬಡಿತ, ಅಸಮರ್ಪಕ ಹೈಡ್ರೇಶನ್ ಸಮಸ್ಯೆ ಒಡ್ಡಬಹುದು ಅಥವಾ ತಮ್ಮ ಸ್ಥಿತಿ ಮೀರಿದ ವ್ಯಾಯಾಮ ದೈಹಿಕ ಒತ್ತಡಕ್ಕೆ ಕಾರಣವಾಗಬಹುದು.
ಆದರೆ, ಒಬ್ಬ ವ್ಯಕ್ತಿಯ ದೇಹಕ್ಕೆ ಇರುವ ಪ್ರಿಸ್ಕ್ರಿಪ್ಷನ್ ಮತ್ತೊಬ್ಬರಿಗೆ ಇರುವ ಪ್ರಿಸ್ಕ್ರಿಪ್ಷನ್ ಆಗಿರದೆ ಇರಬಹುದು.
ನಾವು ನಿರ್ಲಕ್ಷಿಸುವ ಎಚ್ಚರಿಕೆ ಚಿಹ್ನೆಗಳು
ಕೆಲವರಿಗೆ ಯಾವುದೇ ಎಚ್ಚರಿಕೆ ಇರುವುದಿಲ್ಲ. ಆದರೆ ಕೆಲವೊಮ್ಮೆ ಅಸಹಜವಾದ ಉಸಿರಾಟದ ತೊಂದರೆ, ಎದೆಯ ಮೇಲೆ ಒತ್ತಡ ಅಥವಾ ಅಹಿತಕರ ಭಾವನೆ, ಮೂರ್ಛೆ ಹೋಗುವ ಸಾಧ್ಯತೆ, ಹಠಾತ್ ತಲೆತಿರುಗುವಿಕೆ, ಹೃದಯಬಡಿತ, ವ್ಯಾಯಾಮ ಸಹಿಷ್ಣುತೆ ಕುಸಿತ ಇತ್ಯಾದಿ ಲಕ್ಷಣಗಳು ಕಂಡುಬರಬಹುದು.
ಇವು ಹೃದಯರೋಗದ ಸಮಸ್ಯೆ ಎಂದೇ ಹೇಳಲಾಗದು. ಆದರೆ ವ್ಯಾಯಾಮದ ಸಮಯದಲ್ಲಿ ಇಂತಹ ಲಕ್ಷಣಗಳು ಕಂಡುಬಂದಲ್ಲಿ ವೈದ್ಯಕೀಯ ಆರೈಕೆ ಪಡೆಯಬೇಕಾಗುತ್ತದೆ. ಬದಲಾಗಿ, ದಣಿದಿದ್ದಾನೆ ಎಂದು ಊಹಿಸಬಾರದು.
ಮಧ್ಯ ವಯಸ್ಸಿಗೆ ಕಾಯದೆ ಬೇಗನೇ ಕಾರ್ಡಿಯೋವ್ಯಾಸ್ಕ್ಯುಲರ್ ಅಪಾಯದ ಬಗ್ಗೆ (ಕೊಲೆಸ್ಟ್ರಾಲ್, ರಕ್ತದಲ್ಲಿನ ಸಕ್ಕರೆ, ಬೊಜ್ಜು, ಅಧಿಕ ರಕ್ತದೊತ್ತಡ) ಬಹಳ ಮೊದಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಿರಂತರ ರೋಗಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸಬೇಕು.
ನಿಯಮಿತವಾಗಿ ಇಸಿಜಿ, 2ಡಿ ಇಕೊ, ಒತ್ತಡ ಪರೀಕ್ಷೆ ಅಥವಾ ಸಿಟಿ ಕೊರೊನರಿ ಸ್ಕ್ಯಾನ್ ಮಾಡಿಸಿಕೊಳ್ಳಬೇಕು. ಅಲ್ಲದೆ, ಪ್ರತಿ ಸಾರ್ವಜನಿಕ ಸ್ಥಳವು ಆಟೋಮೇಟೆಡ್ ಎಕ್ಸ್‌ಟರ್ನಲ್ ಡಿಫೈಬ್ರಿಲೇಟರ್‌ಗಳನ್ನು (AEDs) ಹೊಂದಿರಬೇಕು. ಅಂದರೆ, ಹೃದಯ ಬಡಿತ ಅಸಹಜವಾಗಿ ನಿಂತಾಗ ಅಥವಾ ಅತಿಯಾಗಿ ಅಸ್ತವ್ಯಸ್ತವಾದಾಗ ವಿದ್ಯುತ್ ಶಾಕ್ ನೀಡಿ ಹೃದಯವನ್ನು ಮತ್ತೆ ಸರಿಯಾದ ಬಡಿತಕ್ಕೆ ತರುವ ಸಾಧನವನ್ನು ಹೊಂದಿರಬೇಕು.
ಕೃಪೆ: ಇಂಡಿಯನ್ ಎಕ್ಸ್‌ಪ್ರೆಸ್