Photo Credit: PTI

ನೂರಾರು ಜನರನ್ನು ಬಲಿಪಡೆದ ಭೀಕರ ಪ್ರವಾಹದ ಆಘಾತದಿಂದ ನೇಪಾಳ ಇನ್ನು ಚೇತರಿಸಿಕೊಳ್ಳುತ್ತಿರುವಾಗಲೇ, ಟಿಬೆಟ್ ಭಾಗದಲ್ಲಿ ಉಂಟಾಗಿರುವ "ದೊಡ್ಡ ಬ್ಯಾರಿಯರ್ ಲೇಕ್ (ನೈಸರ್ಗಿಕ ತಡೆಗೋಡೆಯಿಂದ ನಿರ್ಮಾಣವಾದ ಸರೋವರ)" ಒಡೆಯುವ ಸಾಧ್ಯತೆ ಇರುವುದರಿಂದ ದೇಶಕ್ಕೆ ಈಗ ಮತ್ತೊಂದು ಪ್ರವಾಹದ ಭೀತಿ ಎದುರಾಗಿದೆ.

ಬುಧವಾರ ನೇಪಾಳದಲ್ಲಿ ಸಂಭವಿಸಿದ ವಿಕೋಪಕ್ಕೆ ಹಿಮಬಂಡೆಗಳ ಕುಸಿತವೇ ಕಾರಣ ಎಂದು ಶಂಕಿಸಲಾಗಿದ್ದು, ಇದರಿಂದ ಹರಿದು ಬಂದ ಹಿಮ ಮತ್ತು ಬಂಡೆಗಳ ತಾಜ್ಯವು ಛೋಚೆನ್ ಹಾಗೂ ಪುರೆಪು ತ್ಸಾಂಗ್ಪೋ ನದಿಗಳು ಸೇರುವ ಸ್ಥಳದಲ್ಲಿ ನೀರನ್ನು ತಡೆದು ಸರೋವರ ರೂಪುಗೊಳ್ಳಲು ಕಾರಣವಾಗಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಟಿಬೆಟ್ ಭಾಗದಲ್ಲಿದ್ದ "ನೀರಿನ ತಡೆಗೋಡೆ/ಆಣೆಕಟ್ಟು" ಒಡೆದುಹೋಗಿದೆ ಎಂದು ಶುಕ್ರವಾರ ನೇಪಾಳ ಪೊಲೀಸರು ನೇಪಾಳಿ ಭಾಷೆಯ ಪೋಸ್ಟ್ ಒಂದರಲ್ಲಿ ಎಚ್ಚರಿಸಿದ್ದಾರೆ.

ಈ ಸರೋವರ ಒಡೆದು ಕೆಳಭಾಗದ ಪ್ರದೇಶಗಳಿಗೆ ಎರಡನೇ ಬಾರಿಗೆ ಪ್ರವಾಹ ಅಪ್ಪಳಿಸುವ ಸಾಧ್ಯತೆಯಿದೆ ಎಂದು ನೇಪಾಳ ಮತ್ತು ಚೀನಾ ಎರಡೂ ದೇಶಗಳು ಮುಂಚಿತವಾಗಿಯೇ ಎಚ್ಚರಿಕೆ ನೀಡಿದ್ದವು. ಗುರುವಾರ ಬೆಳಿಗ್ಗೆಯ ವೇಳೆಗೆ ಈ ಬ್ಯಾರಿಯರ್ ಲೇಕ್ ತುಂಬಿ ಹರಿಯುತ್ತಿದ್ದು, ಇದರಲ್ಲಿ ಸುಮಾರು 20 ಲಕ್ಷ ಕ್ಯೂಬಿಕ್ ಮೀಟರ್ ನೀರಿದೆ ಎಂದು ಅಂದಾಜಿಸಲಾಗಿತ್ತು. ಮುಂದಿನ 3 ದಿನಗಳಲ್ಲಿ ಸುಮಾರು 1,200 ಒಲಿಂಪಿಕ್ ಈಜುಕೊಳಗಳಿಗೆ ಸಮನಾದ 30 ಲಕ್ಷ ಕ್ಯೂಬಿಕ್ ಮೀಟರ್ ನೀರು ಈ ಸರೋವರಕ್ಕೆ ಹರಿದು ಬರುವ ನಿರೀಕ್ಷೆಯಿದ್ದು, ಇದು ಸರೋವರ ಒಡೆಯುವ ಅಪಾಯವನ್ನು ಹೆಚ್ಚಿಸಿದೆ ಎಂದು ಚೀನಾ ಸೆಂಟ್ರಲ್ ಟೆಲಿವಿಷನ್ ವರದಿ ಮಾಡಿದೆ.

ನೈಸರ್ಗಿಕ ತಡೆಗೋಡೆಯಿಂದ ನಿರ್ಮಾಣವಾದ ಸರೋವರ (ಬ್ಯಾರಿಯರ್ ಲೇಕ್) ಎಂದರೇನು?

ಚೀನಾ ಅಧಿಕಾರಿಗಳು ಈ ನಿರ್ಮಿತಿಯನ್ನು ನೈಸರ್ಗಿಕ ತಡೆಗೋಡೆಯಿಂದ ನಿರ್ಮಾಣವಾದ ಸರೋವರ ಎಂದು ಕರೆಯುತ್ತಿದ್ದರೂ, ಇದನ್ನು ಸಾಮಾನ್ಯವಾಗಿ 'ಭೂಕುಸಿತದ ಆಣೆಕಟ್ಟು' ಅಥವಾ 'ಭೂಕುಸಿತದ ಸರೋವರ' (ಲ್ಯಾಂಡ್‌ಸ್ಲೈಡ್ ಡ್ಯಾಮ್/ಲೇಕ್) ಎಂದು ಕರೆಯಲಾಗುತ್ತದೆ. ಯುಎಸ್ ಜಿಯೋಲಾಜಿಕಲ್ ಸರ್ವೇ ಪ್ರಕಾರ, ಭೂಕುಸಿತದಿಂದ ಕೊಚ್ಚಿಬಂದ ತಾಜ್ಯವು ನದಿ ಅಥವಾ ತೊರೆಯನ್ನು ಸಂಪೂರ್ಣವಾಗಿ ತಡೆದು ನಿಲ್ಲಿಸಿದಾಗ ನದಿ ಕಣಿವೆಗಳಲ್ಲಿ ಇಂತಹ ಸರೋವರಗಳು ಸೃಷ್ಟಿಯಾಗುತ್ತವೆ.

ಭೂಕಂಪಗಳು ಮತ್ತು ಅತಿಯಾದ ಮಳೆಯೇ ಇಂತಹ ಭೂಕುಸಿತಗಳಿಗೆ ಅತ್ಯಂತ ಪ್ರಮುಖ ಕಾರಣಗಳಾಗಿವೆ.

ಇಂತಹ ತಾತ್ಕಾಲಿಕ ಸರೋವರಗಳಲ್ಲಿ ನೀರು ಹೊರಹೋಗಲು ದಾರಿಯಿಲ್ಲದೆ ಅಪಾರ ಪ್ರಮಾಣದ ನೀರು ಶೇಖರಣೆಯಾಗುತ್ತದೆ. ನೀರು ಶೇಖರಣೆಯಾಗುವುದು ಹೀಗೆಯೇ ಮುಂದುವರಿದರೆ, ಇತ್ತೀಚೆಗೆ ವರದಿಯಾದಂತೆ ಅದು ತುಂಬಿ ಹರಿಯಬಹುದು ಅಥವಾ ಆಣೆಕಟ್ಟು ಒಡೆದುಹೋಗಬಹುದು. ಇದು 'ಎಲ್‌ಎಲ್‌ಒಎಫ್' (LLOF - ಭೂಕುಸಿತದ ಸರೋವರ ಸ್ಫೋಟ ಪ್ರವಾಹ) ಎಂದು ಕರೆಯಲಾಗುವ ಅತ್ಯಂತ ವಿನಾಶಕಾರಿ ದುರಂತಕ್ಕೆ ಕಾರಣವಾಗುತ್ತದೆ. ಹಿಮನದಿ ಅಥವಾ ಹಿಮದ ಬಂಡೆಗಳಿಂದ ತಡೆಯಲ್ಪಟ್ಟ ನೀರು ದಿಢೀರನೆ ಹೊರಹರಿದಾಗ ಸಂಭವಿಸುವ 'ಜಿಎಲ್‌ಒಎಫ್' (GLOF - ಹಿಮನದಿ ಸರೋವರ ಸ್ಫೋಟ ಪ್ರವಾಹ) ಮಾದರಿಯಲ್ಲೇ ಇದರ ಪರಿಣಾಮವೂ ಇರುತ್ತದೆ.

ತಡೆಗೋಡೆ ಸೃಷ್ಟಿಯಾದ ನಂತರ ಅದು ಒಡೆಯಲು ಕೆಲವು ದಿನಗಳಿಂದ ಹಿಡಿದು ಹತ್ತಾರು ವರ್ಷಗಳೇ ಬೇಕಾಗಬಹುದು. ಇತಿಹಾಸದಲ್ಲೇ ಅತ್ಯಂತ ಭೀಕರ ಎಲ್‌ಎಲ್‌ಒಎಫ್ ದುರಂತ ಸಂಭವಿಸಲು ಕೇವಲ 10 ದಿನಗಳು ಬೇಕಾಗಿದ್ದವು. ಇದಕ್ಕೆ ವ್ಯತಿರಿಕ್ತವಾಗಿ, ಕಿರ್ಗಿಸ್ತಾನ್‌ ನ ತಾಗರ್‌ಮಾರ್ಚ್ ನದಿಯಲ್ಲಿ ಬಂಡೆಗಳು ಮತ್ತು ತಾಜ್ಯಗಳಿಂದ ರೂಪುಗೊಂಡಿದ್ದ ಆಣೆಕಟ್ಟು ಒಡೆಯಲು ಬರೋಬ್ಬರಿ 131 ವರ್ಷಗಳು (1835–1966) ಹಿಡಿದಿದ್ದವು.

ನೇಪಾಳದ ಪ್ರವಾಹಕ್ಕೆ ಆರಂಭದಲ್ಲಿ ಜಿಎಲ್‌ಒಎಫ್ (GLOF) ಕಾರಣವಿರಬಹುದು ಎಂದು ಶಂಕಿಸಲಾಗಿತ್ತು, ಆದರೆ ಈಗ ಹಿಮಬಂಡೆ ಕುಸಿದು ಬಿದ್ದಿದ್ದೇ ಪ್ರಮುಖ ಕಾರಣವೆಂದು ತಿಳಿದುಬಂದಿದ್ದು, ಅದೇ ಈಗ ಭೂಕುಸಿತದ ಸರೋವರವನ್ನು ಸೃಷ್ಟಿಸಿದೆ.

2017ರಲ್ಲಿ 'ಕರೆಂಟ್ ಸೈನ್ಸ್'ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕಡಿದಾದ ಎತ್ತರದ ಪರ್ವತಗಳು ಮತ್ತು ಕಿರಿದಾದ ನದಿ ಕಣಿವೆಗಳಿರುವ ಪ್ರದೇಶಗಳಲ್ಲಿ ಬಂಡೆ, ಮಣ್ಣು ಮತ್ತು ಕೆಸರು ಕುಸಿತದಂತಹ ಚಟುವಟಿಕೆಗಳು ನಡೆದಾಗ ಭೂಕುಸಿತದ ಆಣೆಕಟ್ಟುಗಳು ಸಾಮಾನ್ಯವಾಗಿ ರೂಪುಗೊಳ್ಳುತ್ತವೆ. ಈ ವಿವರಣೆಯು ಹಿಮಾಲಯ ಪ್ರದೇಶಕ್ಕೆ ಸರಿಯಾಗಿ ಒಪ್ಪುತ್ತದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ದಾಖಲೆಯೊಂದರ ಪ್ರಕಾರ, ಹಿಮಾಲಯದ ನದಿ ಪಾತ್ರಗಳಲ್ಲಿ ಎಲ್‌ಎಲ್‌ಒಎಫ್ ಸಾಮಾನ್ಯ. ಇವುಗಳ ಪ್ರಭಾವವನ್ನು ಕಡಿಮೆ ಮಾಡಲು ನೀರು ಹೊರಹೋಗಲು ಕೃತಕ ದಾರಿಗಳನ್ನು ನಿರ್ಮಿಸುವುದು ಒಂದು ಮಾರ್ಗವಾಗಿದೆ. ಚೀನಾ ಈಗ ಇದೇ ಮಾರ್ಗವನ್ನು ಪರಿಶೀಲಿಸುತ್ತಿರುವಂತೆ ತೋರುತ್ತಿದೆ.

ಸರೋವರ ಒಡೆದರೆ ಎಷ್ಟು ವಿನಾಶ ಉಂಟಾಗಬಹುದು?

ಅತ್ಯಂತ ವಿನಾಶಕಾರಿ. ಈ ಆಣೆಕಟ್ಟು ಒಡೆದರೆ ಅಲ್ಪ ಅವಧಿಯಲ್ಲಿ ಲಕ್ಷಾಂತರ ಕ್ಯೂಬಿಕ್ ಮೀಟರ್ ನೀರು ಹೊರಹರಿದು, ಕೆಳಭಾಗದ ಪ್ರದೇಶಗಳಲ್ಲಿ ಭೀಕರ ಪ್ರವಾಹ ಉಂಟುಮಾಡುವ ಸಾಧ್ಯತೆಯಿದೆ. ಈ ಪ್ರವಾಹವು ತಾಜ್ಯಗಳನ್ನು ಕೊಚ್ಚಿಕೊಂಡು ಬರುವುದಲ್ಲದೆ, ಕೆಳಭಾಗದಲ್ಲೂ ಮತ್ತೆ ಮಣ್ಣು ಕುಸಿಯುವಂತೆ ಮಾಡಿ ಹಾನಿಯ ಪ್ರಮಾಣವನ್ನು ದುಪ್ಪಟ್ಟುಗೊಳಿಸುತ್ತದೆ. ನೇಪಾಳದಲ್ಲಿ ಈಗಾಗಲೇ ಭೀಕರ ಪ್ರವಾಹ ಅಪ್ಪಳಿಸಿ ಜನವಸತಿ ಪ್ರದೇಶಗಳು, ಮೂಲಸೌಕರ್ಯಗಳು ಮತ್ತು ಅಪಾರ ಸಂಖ್ಯೆಯ ಜೀವಗಳನ್ನು ಬಲಿಪಡೆದಿರುವುದರಿಂದ ಅಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಇತಿಹಾಸದಲ್ಲೇ ವಿಶ್ವದ ಅತ್ಯಂತ ಭೀಕರ ಎಲ್‌ಎಲ್‌ಒಎಫ್ ದುರಂತವು 1786ರಲ್ಲಿ ಸಂಭವಿಸಿತ್ತು. ಚೀನಾದ ಸಿಚುವಾನ್ ಪ್ರಾಂತ್ಯದಲ್ಲಾದ ಭೀಕರ ಭೂಕಂಪವು ಬೃಹತ್ ಮಣ್ಣು ಕುಸಿತವನ್ನುಂಟುಮಾಡಿ, ದಾದೂ ನದಿಯನ್ನು ಸಂಪೂರ್ಣವಾಗಿ ತಡೆದು ನಿಲ್ಲಿಸಿತು. 10 ದಿನಗಳ ನಂತರ ಈ ನೈಸರ್ಗಿಕ ಆಣೆಕಟ್ಟು ಒಡೆದು ನೀರು ಬರೋಬ್ಬರಿ 1,400 ಕಿ.ಮೀ. ದೂರದವರೆಗೆ ಹರಿದು, ಸುಮಾರು 1,00,000 ಜನರನ್ನು ಬಲಿಪಡೆಯಿತು.

ಅಂದಾಜಿಸಲು ಸಾಧ್ಯವಾಗದ ಇಂತಹ ನೈಸರ್ಗಿಕ ವಿಕೋಪಗಳು ಗಡಿ ದಾಟಿಯೂ ತೀವ್ರ ಪರಿಣಾಮ ಬೀರುತ್ತವೆ.

ಎಪ್ರಿಲ್ 2000ರಲ್ಲಿ ಸಂಭವಿಸಿದ ಭೀಕರ ಯೀಗಾಂಗ್ ಮಣ್ಣು ಕುಸಿತವು ಯೀಗಾಂಗ್ ತ್ಸಾಂಗ್ಪೋ ನದಿಗೆ ಅಡ್ಡಲಾಗಿ 60 ಮೀಟರ್ ಎತ್ತರದ ಆಣೆಕಟ್ಟನ್ನು ಸೃಷ್ಟಿಸಿತು. ಈ ಸರೋವರವು ಎರಡು ತಿಂಗಳ ನಂತರ ಒಡೆದು ಹೋಗಿ ಭೀಕರ ಪ್ರವಾಹ ಸೃಷ್ಟಿಸಿತು. ಈ ಪ್ರವಾಹವು ಅರುಣಾಚಲ ಪ್ರದೇಶದಲ್ಲಿ 500 ಕಿ.ಮೀ. ದೂರದವರೆಗೆ ಹರಿದು ಅಸ್ಸಾಂನ ಬ್ರಹ್ಮಪುತ್ರ ನದಿ ಪಾತ್ರವನ್ನು ತಲುಪಿತು ಎಂದು 2020ರ 'ಸೈಂಟಿಫಿಕ್ ರಿಪೋರ್ಟ್ಸ್' ಅಧ್ಯಯನ ತಿಳಿಸಿದೆ. ಈ ಪ್ರವಾಹದಿಂದಾಗಿ 20 ಸೇತುವೆಗಳು ಧ್ವಂಸಗೊಂಡು, 50,000 ಜನರು ಮನೆಗಳನ್ನು ಕಳೆದುಕೊಂಡಿದ್ದರು.

'ನ್ಯಾಚುರಲ್ ಹಜಾರ್ಡ್ಸ್' ಪತ್ರಿಕೆಯಲ್ಲಿ ಪ್ರಕಟವಾದ 2008ರ ಅಧ್ಯಯನದ ಪ್ರಕಾರ, 2000 ಮತ್ತು 2005ರಲ್ಲಿ ಸಂಭವಿಸಿದ ಎಲ್‌ಎಲ್‌ಒಎಫ್‌ ಗಳು ಹಿಮಾಚಲ ಪ್ರದೇಶದ ಸಟ್ಲಜ್ ಮತ್ತು ಸ್ಪಿತಿ ನದಿಗಳ ಪಾತ್ರದಲ್ಲಿ ಅಪಾರ ಪ್ರಮಾಣದ ಮೂಲಸೌಕರ್ಯಗಳಿಗೆ ಹಾನಿ ಉಂಟುಮಾಡಿದ್ದವು. 2000ರ ದುರಂತದಲ್ಲಿ ಕನಿಷ್ಠ 156 ಜನರು ಸಾವನ್ನಪ್ಪಿದ್ದರು, ಆದರೆ ನೈಜ ಸಾವಿನ ಸಂಖ್ಯೆ ಇದಕ್ಕಿಂತ ಶೇಕಡಾ ಹೆಚ್ಚಿರಬಹುದು ಎಂದು ವರದಿ ಹೇಳುತ್ತದೆ. ಈ ಎರಡೂ ದುರಂತಗಳು ಗಡಿ ದಾಟಿ ಬಂದ ವಿಕೋಪಗಳಾಗಿದ್ದವು. ಇವುಗಳಿಗೆ ಕಾರಣವಾದ ಸರೋವರಗಳು ರೂಪುಗೊಂಡಿದ್ದು ಟಿಬೆಟ್‌ ನಲ್ಲಿ.

2008ರಲ್ಲಿ ವೆನ್‌ ಚುವಾನ್ ಭೂಕಂಪದಿಂದ ಉಂಟಾದ ಮಣ್ಣು ಮತ್ತು ಬಂಡೆಗಳ ಕುಸಿತವು ಪ್ರಮುಖವಾಗಿ ಚಿಂಗ್‌ಹೈ–ಟಿಬೆಟ್ ಪ್ರಸ್ಥಭೂಮಿಯ ಪೂರ್ವ ಭಾಗದಲ್ಲಿ 257 ಭೂಕುಸಿತದ ಆಣೆಕಟ್ಟುಗಳನ್ನು ಸೃಷ್ಟಿಸಿತು. ಇವುಗಳಲ್ಲಿ ಅತ್ಯಂತ ದೊಡ್ಡದಾದ ಆಣೆಕಟ್ಟು ಟ್ಯಾಂಗ್‌ಜಿಯಾಶಾನ್ ಎಂಬಲ್ಲಿ ಟೊಂಗ್‌ಕೌ ನದಿಯನ್ನು (ಫುಜಿಯಾಂಗ್ ನದಿಯ ಉಪನದಿ) ತಡೆದು ನಿಲ್ಲಿಸಿತು.

ಈ ಸರೋವರವು ಕೆಳಭಾಗದ ಪ್ರದೇಶಗಳ ಮೇಲೆ ಭೀಕರ ಪ್ರವಾಹ ಅಪ್ಪಳಿಸುವ ಭೀತಿ ಒಡ್ಡಿ, ಸುಮಾರು 13 ಲಕ್ಷ ಜನರ ಜೀವನವನ್ನು ಅಪಾಯಕ್ಕೆ ಸಿಲುಕಿಸಿತ್ತು. ಅಧಿಕಾರಿಗಳು ನಿಯಂತ್ರಿತ ರೀತಿಯಲ್ಲಿ ನೀರನ್ನು ಹೊರಹಾಕಲು ಪ್ರತ್ಯೇಕ ಕಾಲುವೆ ನಿರ್ಮಿಸಿ, ಕೆಳಭಾಗದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು.

2014ರ ಆಗಸ್ಟ್‌ ನಲ್ಲಿ ತೀವ್ರ ಮಳೆಯಿಂದಾಗಿ ನೇಪಾಳದಲ್ಲಿ ಭಾರೀ ಪ್ರಮಾಣದ ಮಣ್ಣು ಕುಸಿತ ಸಂಭವಿಸಿ, ಸುನ್ ಕೋಶಿ ನದಿಗೆ ಅಡ್ಡಲಾಗಿ ಸರೋವರ ರೂಪುಗೊಂಡಿತು. 45 ದಿನಗಳ ನಂತರ ಜಿಯೋ-ಎಂಜಿನಿಯರಿಂಗ್ ವಿಧಾನಗಳನ್ನು ಬಳಸಿ ಈ ಸರೋವರದಲ್ಲಿದ್ದ ನೀರನ್ನು ಖಾಲಿ ಮಾಡಲಾಯಿತು.

ಈಗ ಏನಾಗುತ್ತಿದೆ?

ನೈಸರ್ಗಿಕ ತಡೆಗೋಡೆಯಿಂದ ನಿರ್ಮಾಣವಾದ ಸರೋವರದ ಅಪಾಯ ಹೆಚ್ಚಿರುವುದರಿಂದ ನೇಪಾಳ–ಟಿಬೆಟ್ ಗಡಿ ಭಾಗದಲ್ಲಿ ನಡೆಸಲಾಗುತ್ತಿದ್ದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ನೇಪಾಳ ಪೊಲೀಸರು ಎಕ್ಸ್ ಪೋಸ್ಟ್ ಮೂಲಕ ರಕ್ಷಣಾ ಸಿಬ್ಬಂದಿಗೆ ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.

"ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲಾ ಭದ್ರತಾ ಸಿಬ್ಬಂದಿ, ರಕ್ಷಣಾ ಕಾರ್ಯಕರ್ತರು ಮತ್ತು ಸಾರ್ವಜನಿಕರು ತಕ್ಷಣವೇ ಜಾಗರೂಕರಾಗಿರಬೇಕು. ತಾವೂ ಸುರಕ್ಷಿತ ಸ್ಥಳಗಳಿಗೆ ತೆರಳಿ, ಇತರರಿಗೂ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ತಿಳಿಸಬೇಕು" ಎಂದು ಎಕ್ಸ್ ಪೋಸ್ಟ್‌ನಲ್ಲಿ ವಿನಂತಿಸಲಾಗಿದೆ.

ನೈಸರ್ಗಿಕ ತಡೆಗೋಡೆಯಿಂದ ನಿರ್ಮಾಣವಾದ ಸರೋವರದ ವೈಮಾನಿಕ ಸಮೀಕ್ಷೆ ಮತ್ತು 3D ಮಾಡೆಲಿಂಗ್ ನಡೆಸಲು ಚೀನಾ ಅಧಿಕಾರಿಗಳು 8 ಸದಸ್ಯರ ಇಂಜಿನಿಯರಿಂಗ್ ತಂಡವನ್ನು ನಿಯೋಜಿಸಿದ್ದಾರೆ ಎಂದು ಚೀನಾದ ಸರ್ಕಾರಿ ವಾಹಿನಿ ಸಿಸಿಟಿವಿ ಶುಕ್ರವಾರ ತಿಳಿಸಿದೆ.

ಸರೋವರದ ಅಪಾಯವನ್ನು ಕಡಿಮೆ ಮಾಡಲು ಆಣೆಕಟ್ಟಿನ ತಗ್ಗು ಪ್ರದೇಶದಲ್ಲಿ ನೀರು ಹೊರಹೋಗುವ ಕಾಲುವೆಯನ್ನು ತೋಡುವುದು ಸಾಮಾನ್ಯ ವಿಧಾನವಾಗಿದೆ ಎಂದು ಇಂಜಿನಿಯರ್‌ ಗಳಲ್ಲಿ ಒಬ್ಬರಾದ ಚೆನ್ ಹ್ಯಾನ್‌ ಕ್ಸಿಯಾವೋ ಚೀನಾದ ಮಾಧ್ಯಮಕ್ಕೆ ತಿಳಿಸಿದ್ದಾರೆ. ನೀರು ಎಷ್ಟು ವೇಗವಾಗಿ ಹರಿಯುತ್ತದೆ ಮತ್ತು ಸರೋವರ ಎಷ್ಟು ಬೇಗ ತುಂಬುತ್ತದೆ ಎಂಬುದರ ಲೆಕ್ಕಾಚಾರದ ಆಧಾರದ ಮೇಲೆ ಆ ಕಾಲುವೆಯ ಅಗಲ ಮತ್ತು ಆಳವನ್ನು ನಿರ್ಧರಿಸಬೇಕಾಗುತ್ತದೆ.

ಸಮೀಕ್ಷೆಯ ದತ್ತಾಂಶದ ಪ್ರಕಾರ, ಸರೋವರವು ಸುಮಾರು 150 ಮೀಟರ್ ಉದ್ದ, 40 ರಿಂದ 50 ಮೀಟರ್ ಆಳವಿದ್ದು, 15 ಲಕ್ಷದಿಂದ 20 ಲಕ್ಷ ಕ್ಯೂಬಿಕ್ ಮೀಟರ್ ನೀರನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor