ವೈಭವ್ ಸೂರ್ಯವಂಶಿ | Photo Credit : PTI 

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಸ್ಟ್ರೇಲಿಯ ವಿರುದ್ಧದ ತವರು ಸರಣಿಗಾಗಿ 15 ಸದಸ್ಯರ ಭಾರತದ 19ರೊಳಗಿನ ತಂಡವನ್ನು ಘೋಷಿಸಿದೆ. ಅದರಲ್ಲಿ ಭಾರತೀಯ ಕ್ರಿಕೆಟ್ ದಿಗ್ಗಜರಾದ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಮೊದಲಾದವರು ಇದ್ದಾರೆ. ಆದರೆ 15 ವರ್ಷ ವಯಸ್ಸಿನವರಾಗಿದ್ದರೂ ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಸ್ಥಾನ ದೊರೆತಿಲ್ಲ. ಅವರು ಇತ್ತೀಚೆಗೆ ಇಂಗ್ಲೆಂಡ್ ನಲ್ಲಿ ಭಾರತ ಆಡಿದ ಟಿ20 ಕ್ರಿಕೆಟ್ ಪಂದ್ಯಾವಳಿಯ ಮೂಲಕ ಹಿರಿಯರ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಆದರೆ, ಬಿಸಿಸಿಐ ನಿಯಮಗಳ ಅನುಸಾರ ಅವರನ್ನು 19ರೊಳಗಿನವರ ತಂಡದಲ್ಲಿ ಸೇರಿಸಲಾಗುವುದಿಲ್ಲ.

2016ರಲ್ಲಿ ತಂದ ಹೊಸ ನಿಯಮಗಳ ಪ್ರಕಾರ ಬಿಸಿಸಿಐ ಆಟಗಾರರನ್ನು ಒಂದಕ್ಕಿಂತ ಹೆಚ್ಚು 19ರೊಳಗಿನ ವಿಶ್ವಕಪ್ ನಲ್ಲಿ ಭಾಗವಹಿಸುವುದನ್ನು ನಿಷೇಧಿಸಿದೆ. ಹೀಗಾಗಿ 2018ರಲ್ಲಿ ವಾಷಿಂಗ್ಟನ್ ಸುಂದರ್ 19ರೊಳಗಿನವರ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಲು ಸಾಧ್ಯವಾಗಿರಲಿಲ್ಲ. ಅದಕ್ಕೆ ಮೊದಲು ಸರ್ಫರಾಜ್ ಖಾನ್, ಸಂದೀಪ್ ಶರ್ಮಾ, ವಿಜಯ್ ಜೋಲ್ ಮೊದಲಾದವರು ಎರಡನೇ ಅವಕಾಶ ಕಳೆದುಕೊಂಡಿದ್ದರು. ವೈಭವ್ ಸೂರ್ಯವಂಶಿ ಈಗಾಗಲೇ 2026ರ 19ರೊಳಗಿನವರ ವಿಶ್ವಕಪ್ ಆಡಿರುವ ಕಾರಣದಿಂದ ಮತ್ತೊಂದು ಅವಕಾಶಕ್ಕೆ ಅವರು ಅರ್ಹರಲ್ಲ. ಹೀಗಾಗಿ ಮುಂದಿನ 19ರೊಳಗಿನವರ ವಿಶ್ವಕಪ್ ಪಂದ್ಯಾವಳಿಯಿಂದ ಅವರು ಹೊರಗುಳಿಯಲಿದ್ದಾರೆ. ಅದೇ ಕಾರಣದಿಂದ ತವರು ಸರಣಿಗೆ ಅವರನ್ನು ಆರಿಸಲಾಗಿಲ್ಲ.

ಶೀಘ್ರದಲ್ಲೇ ಅವಧಿ ಮುಗಿಯಲಿರುವ ಜೂನಿಯರ್ ಪುರುಷರ ಆಯ್ಕೆ ಸಮಿತಿಯು ಸೆಪ್ಟೆಂಬರ್ 18, 21, 32ರಂದು ರಾಜ್ಕೋಟ್ ನಲ್ಲಿ ನಡೆಯಲಿರುವ ಮೂರು 50 ಓವರ್ ಗಳ ಪಂದ್ಯಗಳನ್ನು ಒಳಗೊಂಡ ತವರಿನ ಪಂದ್ಯಾವಳಿಗೆ ತಂಡವನ್ನು ಘೋಷಿಸಿದೆ. ಈ ಪಂದ್ಯಾವಳಿಯ ನಂತರ ಕಿರಿಯರ ಆಸ್ಟ್ರೇಲಿಯ ಮತ್ತು ಭಾರತ ತಂಡ ಎರಡು ಟೆಸ್ಟ್ ಪಂದ್ಯಗಳನ್ನೂ ಆಡಲಿದ್ದಾರೆ. ಸೆಪ್ಟೆಂಬರ್ 27ರಿಂದ 30ರ ನಡುವೆ ರಾಜ್ಕೋಟ್ ನಲ್ಲಿ ಮತ್ತು ಅಕ್ಟೋಬರ್ 5ರಿಂದ 8ರ ನಡುವೆ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನ ‘ಬಿ’ ಮೈದಾನದಲ್ಲಿ ಆ ಪಂದ್ಯಗಳು ನಡೆಯಲಿವೆ.

50 ಓವರ್ ಗಳ ಪಂದ್ಯಾವಳಿಯಲ್ಲಿ ಉತ್ತರಾಖಂಡದ ಬ್ಯಾಟ್ಸ್ಮನ್ ಲಕ್ಷ್ಯ ರಾಯ್ಚಂದಾನಿ ತಂಡವನ್ನು ಮುನ್ನಡೆಸಲಿದ್ದಾರೆ. ಮಧ್ಯಪ್ರದೇಶದ ಬ್ಯಾಟ್ಸ್ಮನ್ ಯಶ್ವರ್ಧನ್ ಚೌಹಾಣ್ ಉಪನಾಯಕರಾಗಿರಲಿದ್ದಾರೆ. ಟೆಸ್ಟ್ ಪಂದ್ಯಾವಳಿಗೆ ಯಶ್ವರ್ಧನ್ ನಾಯಕ ಮತ್ತು ರಾಯ್ಚಂದಾನಿ ಉಪನಾಯಕರಾಗಲಿದ್ದಾರೆ.

ಲೆಗ್ಸ್ಪಿನ್ ಆಲ್ರೌಂಡರ್ ಆರ್ಯವೀರ್ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಅನ್ವಯ್ 15 ಸದಸ್ಯರ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಿದ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆರ್ಯವೀರ್ ಸದ್ಯ 2026ರ ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್)ನಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ಪರ ಆಡುತ್ತಿದ್ದಾರೆ. ಈವರೆಗೆ 2 ಪಂದ್ಯಗಳನ್ನಷ್ಟೇ ಆಡುವ ಅವಕಾಶ ಪಡೆದಿದ್ದಾರೆ.

ಈ ನಡುವೆ ಅನ್ವಯ್ ಜುಲೈನಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ಭಾರತ 19ರೊಳಗಿನ ತಂಡದಲ್ಲಿದ್ದು 50 ಓವರ್ ಏಕದಿನ ಪಂದ್ಯದಲ್ಲಿ 101 ರನ್ ಗಳಿಸಿದರು. ಆದರೆ ಭಾರತ ತಂಡವು ಈ ಪ್ರವಾಸದ ಸರಣಿಯನ್ನು 2-1 ಅಂತರದಲ್ಲಿ ಸೋತಿದೆ. ಆದರೆ ಟೆಸ್ಟ್ ಪಂದ್ಯವನ್ನು 1-0 ಅಂತರದಿಂದ ಗೆದ್ದುಕೊಂಡಿದೆ.

ಆಸ್ಟ್ರೇಲಿಯ ವಿರುದ್ಧದ ಸರಣಿಯಲ್ಲಿ ಆಡಲಿರುವ 19ರೊಳಗಿನ ತಂಡದಲ್ಲಿ ಮನಾಲ್ ಚೌಹಾಣ್ ಮತ್ತು ಚಿಗುರುಪತಿ ವೆಂಕಟ ಅವರೂ ಇದ್ದಾರೆ. ಸಾಗರ್ ವಿರ್ಕ್, ಅನ್ಮೋಲ್ಜೀತ್ ಸಿಂಗ್ ಮತ್ತು ಇಶಾನ್ ಸೂದ್ರನ್ನು ಕೈಬಿಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor