×
Ad

ʼಅಯೋಧ್ಯೆ ಪ್ರಕರಣ ಹೊಸದೇನಲ್ಲʼ; ಒಂದು ಸಾವಿರ ವರ್ಷಗಳ ಹಿಂದೆಯೇ ದೇವಾಲಯದ ಹಗರಣಗಳನ್ನು ತನಿಖೆ ಮಾಡಿದ್ದರು ಚೋಳ ಅರಸರು!

ಅನಿರುದ್ಧ್ ಕಾನಿಸೆಟ್ಟಿ – theprint. in ವರದಿ

Update: 2026-07-03 20:27 IST

Photo: Wikimedia Commons

ʼThe printʼನ ಜನಪ್ರಿಯ ಸರಣಿ ‘ಥಿಂಕಿಂಗ್ ಮೆಡೀವಲ್’ ಅಡಿಯಲ್ಲಿ ಪ್ರಕಟವಾಗಿರುವ ಈ ವಿಶೇಷ ಲೇಖನವನ್ನು ಇತಿಹಾಸಕಾರ ಮತ್ತು ಲೇಖಕ ಅನಿರುದ್ಧ್ ಕಾನಿಸೆಟ್ಟಿ ಅವರು ಬರೆದಿದ್ದಾರೆ. ಇವರು ಪ್ರಶಸ್ತಿ ವಿಜೇತ ‘ಲಾರ್ಡ್ಸ್ ಆಫ್ ದಿ ಡೆಕ್ಕನ್’ ಮತ್ತು 'ಲಾರ್ಡ್ಸ್ ಆಫ್ ಅರ್ಥ್ ಅಂಡ್ ಸೀ: ಎ ಹಿಸ್ಟರಿ ಆಫ್ ದಿ ಚೋಳ ಎಂಪೈರ್' ಪುಸ್ತಕದ ಕರ್ತೃ, Echoes of India ಮತ್ತು Yuddha ಪಾಡ್ಕಾಸ್ಟ್ಗಳ ನಿರೂಪಕರೂ ಹೌದು. ಭಾರತದ ಮಧ್ಯಕಾಲೀನ ರಾಜಕೀಯ, ಸಂಸ್ಕೃತಿ ಮತ್ತು ಇತಿಹಾಸದ ಆಳವಾದ ಅಧ್ಯಯನ ನಡೆಸಿರುವ ಲೇಖಕರು, ಪ್ರಸ್ತುತ ದೇವಾಲಯಗಳ ಆಡಳಿತ ಮತ್ತು ಸ್ವಾಯತ್ತತೆಯ ಕುರಿತು ನಡೆಯುತ್ತಿರುವ ಚರ್ಚೆಗಳಿಗೆ ಚೋಳರ ಕಾಲದ ಇತಿಹಾಸದ ಮೂಲಕ ಕನ್ನಡಿ ಹಿಡಿದಿದ್ದಾರೆ.

ಇದು 2026ರಲ್ಲಿ ನಡೆದ ಘಟನೆಯ ಸುದ್ದಿಯಂತೆ ಕಾಣಬಹುದು. ದೇವಾಲಯದ ಸಮಿತಿಯೊಂದು ಹಗರಣದಲ್ಲಿ ಸಿಲುಕಿಕೊಂಡಿದೆ. ಮಧ್ಯರಾತ್ರಿಯಲ್ಲಿ ಇಬ್ಬರ ಕೊಲೆಯಾಗಿದೆ. ದೇವರಿಗೆ ಸೇರಿದ ಆಭರಣಗಳು ಖಾಸಗಿ ವ್ಯಕ್ತಿಗಳ ಪಾಲಾಗಿವೆ. ಕದ್ದ ನಿಧಿ ಎಲ್ಲಿಗೆ ಹೋಯಿತು ಎಂದು ಪತ್ತೆಹಚ್ಚಲು ಮಧ್ಯರಾತ್ರಿಯೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದರೆ, ಈ ಘಟನೆ ನಡೆದಿದ್ದು ಇತ್ತೀಚೆಗಲ್ಲ, ಸುಮಾರು ಒಂದು ಸಾವಿರ ವರ್ಷಗಳ ಹಿಂದೆ, ತಮಿಳುನಾಡು ಕರಾವಳಿಯ ದೇವಾಲಯವೊಂದರಲ್ಲಿ! ಆಗ ತನಿಖೆ ನಡೆಸಿದವರು ಚೋಳ ರಾಜನ ಅಧಿಕಾರಿಗಳು. ಈ ಇಡೀ ಘಟನೆಯ ವಿವರಗಳು ಇಂದಿಗೂ ಅಲ್ಲಿನ ಕಲ್ಲಿನ ಶಾಸನಗಳಲ್ಲಿ ಕೆತ್ತಲ್ಪಟ್ಟಿವೆ. ಇಲ್ಲಿ ಮತ್ತೊಂದು ಆಘಾತಕಾರಿ ವಿಷಯವೆಂದರೆ, ಅಂದಿನ ಮಧ್ಯಕಾಲೀನ ಅಪರಾಧಿಗಳನ್ನು ಕೊನೆಗೂ ಕಟಕಟೆ ಮುಂದೆ ನಿಲ್ಲಿಸಿದಾಗ, ಅವರು ಹೊರಗಿನಿಂದ ಬಂದ ಕಳ್ಳರಾಗಲಿ ಅಥವಾ ದೇವನಿಂದಕರಾಗಲಿ ಆಗಿರಲಿಲ್ಲ. ಬದಲಿಗೆ, ಅದೇ ದೇವಾಲಯದ ಅರ್ಚಕರಾಗಿದ್ದರು.

ಪ್ರಾಚೀನ ಭಾರತದಲ್ಲಿದ್ದ ದೇವಾಲಯಗಳು ಕೇವಲ ಪವಿತ್ರ ದೇವರ ಮನೆಗಳಾಗಿದ್ದವು, ಅಲ್ಲಿನ ಸಂಪತ್ತು ಪವಿತ್ರವಾಗಿತ್ತು ಮತ್ತು ಭಕ್ತರು ನೀಡಿದ ದೇಣಿಗೆಯನ್ನು ಒಳ್ಳೆಯ ಕೆಲಸಗಳಿಗಾಗಿಯೇ ಪ್ರಾಮಾಣಿಕವಾಗಿ ಬಳಸಲಾಗುತ್ತಿತ್ತು ಎಂದು ನಾವು ಸಾಮಾನ್ಯವಾಗಿ ಭಾವಿಸುತ್ತೇವೆ. ಆದರೆ ಇಂದು, ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲೊಂದಾದ ಅಯೋಧ್ಯೆಯ ರಾಮಮಂದಿರದ ಟ್ರಸ್ಟ್, ಕಾಣೆಯಾದ ಕಾಣಿಕೆಗಳು, ಆಭರಣಗಳು ಮತ್ತು ಮೂಲ ಬೆಲೆಗಿಂತ ಹಲವು ಪಟ್ಟು ಹೆಚ್ಚಿನ ದರಕ್ಕೆ ಭೂಮಿ ಖರೀದಿಸಿದ ಹಗರಣದ ತನಿಖೆಯನ್ನು ಎದುರಿಸುತ್ತಿದೆ.

ಕೆಲವು ಸಮಯದ ಹಿಂದೆ, ಇಶಾ ಫೌಂಡೇಶನ್ನ ಜಗ್ಗಿ ವಾಸುದೇವ್ ಅವರು ʼತಮಿಳುನಾಡು ದೇವಾಲಯಗಳನ್ನು ಮುಕ್ತಗೊಳಿಸಿʼ ಎಂಬ ಅಭಿಯಾನವನ್ನು ಮುನ್ನಡೆಸಿದ್ದರು. ನಂತರ ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಕೂಡ ಇದಕ್ಕೆ ಧ್ವನಿಗೂಡಿಸಿದ್ದರು. ಸರ್ಕಾರಿ ಉಸ್ತುವಾರಿಯಲ್ಲಿ ದೇವಾಲಯಗಳು ಸೊರಗುತ್ತಿವೆ, ಆದ್ದರಿಂದ ಅವುಗಳ ನಿರ್ವಹಣೆಯನ್ನು ಭಕ್ತರಿಗೇ ವಹಿಸಬೇಕು ಎಂಬುದು ಈ ಅಭಿಯಾನದ ವಾದವಾಗಿತ್ತು. ಆಧ್ಯಾತ್ಮಿಕ ಸಂಸ್ಥೆಗಳು ಭ್ರಷ್ಟಾಚಾರ ಮತ್ತು ಹಗರಣಗಳಿಂದ ದೂರವಿರುತ್ತವೆ ಎಂದು ನಾವು ನಂಬಲು ಬಯಸಿದರೂ, ಮಧ್ಯಕಾಲೀನ ಇತಿಹಾಸದ ಪುರಾವೆಗಳು ನಮಗೆ ತದ್ವಿರುದ್ಧವಾದ ಎಚ್ಚರಿಕೆಯನ್ನು ನೀಡುತ್ತವೆ.

►ದೇವಾಲಯಗಳು ಮತ್ತು ಆಸ್ತಿಪಾಸ್ತಿಗಳು

ಇದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳಬೇಕಾದರೆ, ಸುಮಾರು ಕ್ರಿ.ಶ 1100ರ ಅವಧಿಯಲ್ಲಿ ದಕ್ಷಿಣ ಭಾರತದ ದೊಡ್ಡ ದೇವಾಲಯಗಳು ಹೇಗಿದ್ದವು ಎಂಬುದನ್ನು ನಾವು ಕಲ್ಪಿಸಿಕೊಳ್ಳಬೇಕು. ಆ ಹೊತ್ತಿಗಾಗಲೇ ಕಾವೇರಿ ಕಣಿವೆಯು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದ ಬೃಹತ್ ದೇವಾಲಯ ಸಂಕೀರ್ಣಗಳಿಂದ ತುಂಬಿಹೋಗಿತ್ತು. ಎತ್ತರದ ಗೋಪುರಗಳು ಮತ್ತು ಕೋಟೆಗಳಂತಹ ಗೋಡೆಗಳಿಂದ ಆವೃತವಾಗಿದ್ದ ಈ ದೇವಾಲಯಗಳ ಸುತ್ತಮುತ್ತ ಮಾರುಕಟ್ಟೆಗಳು ಹಾಗೂ ವಸತಿ ಬಡಾವಣೆಗಳು ತಲೆಯೆತ್ತಿದ್ದವು. ಅವುಗಳ ಸುತ್ತಲೂ ಕಾಲುವೆಗಳು, ಪೊದೆಗಳು ಮತ್ತು ಮರಗಳಿಂದ ಕೂಡಿದ ನೂರಾರು ಎಕರೆ ಫಲವತ್ತಾದ ಕೃಷಿ ಭೂಮಿಯಿತ್ತು.

ಒಂದೇ ಒಂದು ದೇವಾಲಯವು ಡಝನ್ ಗಟ್ಟಲೆ ಹಳ್ಳಿಗಳಲ್ಲಿ ಭೂಮಿಯನ್ನು ಹೊಂದಿರಬಹುದಿತ್ತು. ದಿನಗಟ್ಟಲೆ ಅಥವಾ ವಾರಗಟ್ಟಲೆ ಪ್ರಯಾಣ ಬೆಳೆಸಿ ಬರುತ್ತಿದ್ದ ಭಕ್ತರು ಚಿನ್ನ, ಜಾನುವಾರು, ಭೂಮಿ, ಆಭರಣಗಳು ಅಥವಾ ಕಂಚಿನ ವಿಗ್ರಹಗಳನ್ನು ಕಾಣಿಕೆಯಾಗಿ ನೀಡುತ್ತಿದ್ದರು. ವಿಭಿನ್ನ ಉಪ-ಗುಡಿಗಳಲ್ಲಿ ಕೆಲಸ ಮಾಡುವ ಬ್ರಾಹ್ಮಣ ಧಾರ್ಮಿಕ ಪಂಡಿತರಿಗೆ ಸಂಬಳ ನೀಡಲು, ಕರ್ಪೂರದಂತಹ ದುಬಾರಿ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಮತ್ತು ದೊಡ್ಡ ಪ್ರಮಾಣದ ಕಾರ್ಮಿಕರನ್ನು ಸಲಹಲು ಅಪಾರ ಪ್ರಮಾಣದ ಸಂಪತ್ತಿನ ಅಗತ್ಯವಿತ್ತು. ಒಂದು ಸಾಧಾರಣ ದೇವಸ್ಥಾನವೂ ಸಹ ಭೂಮಿಯನ್ನು ಹೊಂದಿತ್ತು, ಜನರಿಗೆ ಸಾಲ ನೀಡುತ್ತಿತ್ತು ಮತ್ತು ಡಝನ್ ಗಟ್ಟಲೆ ಜನರಿಗೆ ಉದ್ಯೋಗ ನೀಡಿತ್ತು.

ಸಂಪತ್ತು ಮತ್ತು ಅಧಿಕಾರ ಒಂದೇ ಕಡೆ ಕೇಂದ್ರೀಕೃತವಾಗಿದ್ದರಿಂದ, ಇದು ಸಹಜವಾಗಿಯೇ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಆಕರ್ಷಿಸಿತು. 10ನೇ ಶತಮಾನದ ಉತ್ತರಾರ್ಧದಲ್ಲಿ ಕಾಂಚೀಪುರದಲ್ಲಿ ಹೊರಡಿಸಲಾದ 'ಮದ್ರಾಸ್ ಮ್ಯೂಸಿಯಂ ತಾಮ್ರಪಟ'ಗಳ ಪ್ರಕಾರ, ಉಳಗಲಂದ ಪೆರುಮಾಳ್ ದೇವಾಲಯವು ಸ್ಥಳೀಯ ನೇಕಾರರಿಗೆ ಮತ್ತು ಹತ್ತಿ ಬೆಳೆಯುವ ಹಳ್ಳಿಗಳಿಗೆ ಚಿನ್ನವನ್ನು ಸಾಲವಾಗಿ ನೀಡಿತ್ತು. ಇದರ ಲೆಕ್ಕಪತ್ರಗಳನ್ನು ನೇಕಾರರೇ ನಿರ್ವಹಿಸುತ್ತಿದ್ದರು ಮತ್ತು ನಗರದ ಹಿರಿಯ ವರ್ತಕರು ಪ್ರತಿ ವರ್ಷ ಇದನ್ನು ಪರಿಶೀಲಿಸುತ್ತಿದ್ದರು. ಈ ಇಡೀ ವ್ಯವಸ್ಥೆಗೆ ಚೋಳ ರಾಜ ಉತ್ತಮನ (ಕ್ರಿ.ಶ 973–985) ಅಧಿಕೃತ ಮುದ್ರೆ ಇತ್ತು. ಇದು ಆರಂಭಿಕ ದಿನಗಳ ಒಂದು ವಿಶಿಷ್ಟ ಉದಾಹರಣೆಯಾಗಿದೆ.

ಆದರೆ ಬಹುತೇಕ ದೇವಾಲಯಗಳ ಶಾಸನಗಳು ಭೂಮಿಗೆ ಸಂಬಂಧಿಸಿದ ದಾನಗಳ ಮೇಲೆಯೇ ಹೆಚ್ಚು ಗಮನ ಹರಿಸಿವೆ. ಇತಿಹಾಸಕಾರ ಜೇಮ್ಸ್ ಹೈಟ್ಸ್ಮನ್ ಅವರು ತಮ್ಮ 'ಗಿಫ್ಟ್ಸ್ ಆಫ್ ಪವರ್' ಪುಸ್ತಕದಲ್ಲಿ ಮಧ್ಯಕಾಲೀನ ತಮಿಳು ದೇವಾಲಯಗಳ ಇತಿಹಾಸವನ್ನು ಅಧ್ಯಯನ ಮಾಡಿದ್ದಾರೆ. ಅವರ ಪ್ರಕಾರ, ಖಾಸಗಿ ಭೂಮಿ ಮತ್ತು ಇತರ ವಂಶಪಾರಂಪರ್ಯ ಹಕ್ಕುಗಳನ್ನು ಸೂಚಿಸುವ 'ಕಣಿ' ಎಂಬ ಪದವು ಕ್ರಿ.ಶ 980ರ ದಶಕಕ್ಕೂ ಮುನ್ನ ಅಪರೂಪವಾಗಿತ್ತು, ಆದರೆ ನಂತರ ಅದು ವೇಗವಾಗಿ ಬಳಕೆಗೆ ಬಂತು. ಚೋಳರ ಆಳ್ವಿಕೆಯಲ್ಲಿ ದೇವಾಲಯಗಳು ವಿಸ್ತರಣೆಯಾದಂತೆ, ಭೂಮಾಲಕತ್ವ ಮತ್ತು ಬಾಡಿಗೆಗೆ ಸಂಬಂಧಿಸಿದ ಪರಿಭಾಷೆಗಳೂ ಬೆಳೆದವು.

ಭೂದಾನ ಎಂದರೆ ಭಕ್ತನೊಬ್ಬ ತನ್ನ ಭೂಮಿಯನ್ನು ದೇವಸ್ಥಾನದ ವ್ಯವಸ್ಥಾಪಕರಿಗೆ ಒಪ್ಪಿಸುವ ಪವಿತ್ರ ಚಿತ್ರಣ ನಮ್ಮ ಕಣ್ಣಮುಂದೆ ಬರಬಹುದು. ಆದರೆ ವಾಸ್ತವದಲ್ಲಿ, ಶ್ರೀಮಂತರು ಇಡೀ ಭೂಮಿಯನ್ನು ನೀಡುವ ಬದಲಿಗೆ ಆ ಭೂಮಿಯಿಂದ ಬರುವ ಆದಾಯದ (ಕಂದಾಯದ) ಒಂದು ಭಾಗವನ್ನು ಮಾತ್ರ ದೇವಸ್ಥಾನಕ್ಕೆ ವರ್ಗಾಯಿಸುತ್ತಿದ್ದರು ಎಂದು ಹೈಟ್ಸ್ಮನ್ ನಿರೂಪಿಸಿದ್ದಾರೆ. ಇನ್ನು 12ನೇ ಶತಮಾನದ ರಿಯಲ್ ಎಸ್ಟೇಟ್ ದಲ್ಲಾಳಿಗಳು ಇಂದಿನಷ್ಟೇ ಚಾಣಾಕ್ಷರಾಗಿದ್ದರು. ಇತಿಹಾಸಕಾರ ನೊಬೊರು ಕರಾಶಿಮಾ ಅವರು ತಮ್ಮ 'ಏನ್ಷಿಯಂಟ್ ಟು ಮೆಡೀವಲ್' ಪುಸ್ತಕದಲ್ಲಿ ಅನೇಕ ಶಾಸನಗಳನ್ನು ಉಲ್ಲೇಖಿಸಿದ್ದಾರೆ. ಬರಗಾಲ, ಪ್ರವಾಹ ಅಥವಾ ತೆರಿಗೆ ಕಟ್ಟಲಾಗದೆ ದಿವಾಳಿಯಾಗುವ ಹಂತ ತಲುಪಿದ ಹಳ್ಳಿಗಳ ಮೇಲೆ ಕಣ್ಣಿಟ್ಟು, ಅಲ್ಲಿನ ಭೂಮಿಯನ್ನು ಅಗ್ಗದ ಬೆಲೆಗೆ ಖರೀದಿಸಲು ಈ ದಲ್ಲಾಳಿಗಳು ಮುಗಿಬೀಳುತ್ತಿದ್ದರು. ರಾಜನ ಹೆಸರಿನಲ್ಲಿ ರಾಜ್ಯಾಧಿಕಾರಿಗಳು ನಡೆಸುತ್ತಿದ್ದ ದೊಡ್ಡ ಹರಾಜುಗಳ (ಪೆರುವಿಲೈ) ಮೂಲಕವೇ ಇಂತಹ ಭೂಮಿಯನ್ನು ಹೆಚ್ಚಾಗಿ ಖರೀದಿಸಲಾಗುತ್ತಿತ್ತು.

ಹೀಗೆ ಖರೀದಿಸಿದ ಭೂಮಿಯನ್ನು ದೇವಸ್ಥಾನಕ್ಕೆ ದಾನ ನೀಡಿದಾಗ ಅದನ್ನು 'ದೇವದಾನ' (ದೇವರಿಗೆ ನೀಡಿದ್ದು) ಎಂದು ಕರೆಯಲಾಗುತ್ತಿತ್ತು. ಇದಕ್ಕೆ ಪ್ರತಿಯಾಗಿ ರಾಜನಿಗೆ ಒಂದು ದೊಡ್ಡ ಮೊತ್ತದ ನಗದನ್ನು ಮುಂಗಡವಾಗಿ ಪಾವತಿಸಿ, ಆ ಭೂಮಿಯನ್ನು ತೆರಿಗೆ ಮುಕ್ತ ಎಂದು ಘೋಷಿಸಲಾಗುತ್ತಿತ್ತು. ಕೆಲವು ಸಂದರ್ಭಗಳಲ್ಲಿ, ರಾಜನಿಗೆ ಹೋಗಬೇಕಾದ ತೆರಿಗೆಯನ್ನು ನೇರವಾಗಿ ದೇವಸ್ಥಾನಕ್ಕೆ ಸಲ್ಲುವಂತೆ ಮಾಡಲಾಗುತ್ತಿತ್ತು. ಆದರೆ, ಇಂತಹ ದೇವದಾನದ ಭೂಮಿಗಳು 'ಕುಡಿ-ನಿಂಗ' (ಅಂದರೆ ಭೂಮಿಯಲ್ಲಿ ಸಾಗುವಳಿ ಮಾಡುವ ರೈತರನ್ನು ಹೊರಹಾಕುವಂತಿಲ್ಲ) ಎಂಬ ನಿಯಮಕ್ಕೆ ಒಳಪಟ್ಟಿದ್ದವು ಎಂದು ಹಲವು ಶಾಸನಗಳು ಸ್ಪಷ್ಟಪಡಿಸುತ್ತವೆ. ಅಂದರೆ, ದಾನಿಯು ಭೂಮಿಯನ್ನು (ಹೆಚ್ಚಾಗಿ ಅಗ್ಗದ ಬೆಲೆಗೆ) ಖರೀದಿಸುತ್ತಿದ್ದ, ರಾಜನಿಗೆ ಬದಲಾಗಿ ದೇವಸ್ಥಾನಕ್ಕೆ ತೆರಿಗೆ ಕಟ್ಟುತ್ತಿದ್ದ (ಇದಕ್ಕೆ ಪ್ರತಿಯಾಗಿ ದೇವಸ್ಥಾನದಲ್ಲಿ ಗೌರವ ಮರ್ಯಾದೆಗಳನ್ನು ಪಡೆಯುತ್ತಿದ್ದ). ಆದರೆ, ಭೂಮಿ ಇಲ್ಲದ ಬಡ ರೈತರಿಂದ ಅಲ್ಲಿ ಕೃಷಿ ಮಾಡಿಸಿ, ಬೆಳೆದ ಬೆಳೆಯಲ್ಲಿ ಸಿಂಹಪಾಲನ್ನು ತಾನೇ ಇಟ್ಟುಕೊಳ್ಳುತ್ತಿದ್ದ. ಜೊತೆಗೆ ಮುಂದೆ ಭೂಮಿಯ ಬೆಲೆ ಹೆಚ್ಚಾದಾಗ ಅದನ್ನು ಮಾರಾಟ ಮಾಡುವ ಹಕ್ಕನ್ನೂ ತನ್ನ ಬಳಿಯೇ ಉಳಿಸಿಕೊಳ್ಳುತ್ತಿದ್ದ.

ದೇವಾಲಯಗಳು ಕೇವಲ ನಿಷ್ಕ್ರಿಯವಾಗಿ ಆಸ್ತಿಯನ್ನು ಸ್ವೀಕರಿಸುವ ಸಂಸ್ಥೆಗಳಾಗಿರಲಿಲ್ಲ ಎಂಬುದನ್ನು ಇತಿಹಾಸದ ಶಾಸನಗಳು ತೋರಿಸುತ್ತವೆ. ಆ ಕಾಲದಲ್ಲಿ (ಕೆಲವು ಕಡೆ ಇಂದಿಗೂ) ದೇವಾಲಯಗಳೇ ಪ್ರಾದೇಶಿಕವಾಗಿ ಅತಿ ಹೆಚ್ಚು ಕೃಷಿ ಭೂಮಿಯನ್ನು ಹೊಂದಿರುವ ಏಕೈಕ ದೊಡ್ಡ ಮಾಲಕರಾಗಿದ್ದವು. ಕರಾಶಿಮಾ ಅವರು ಶ್ರೀರಂಗಂ ದ್ವೀಪದಲ್ಲಿರುವ ಪ್ರಸಿದ್ಧ ಜಂಬುಕೇಶ್ವರಂ ಶಿವ ದೇವಾಲಯದ ಇತಿಹಾಸವನ್ನು ಪರಿಶೀಲಿಸಿದ್ದಾರೆ. 12 ಮತ್ತು 13ನೇ ಶತಮಾನದುದ್ದಕ್ಕೂ ದೇವಾಲಯದ ಆಡಳಿತ ಮಂಡಳಿಯು ದೇವರ ಹೆಸರಿನಲ್ಲಿ ಹಳ್ಳಿಗಳ ದೊಡ್ಡ ಭೂಭಾಗಗಳನ್ನು ನೇರವಾಗಿ ಖರೀದಿಸಿತ್ತು. ಕೇವಲ ಐದು ವಹಿವಾಟುಗಳಲ್ಲಿ, 39 ವಿಭಿನ್ನ ಮಾರಾಟಗಾರರಿಂದ ದೇವಸ್ಥಾನವು ಭೂಮಿಯನ್ನು ಖರೀದಿಸಿತ್ತು. ಈ ಮಾರಾಟಗಾರರು ಸಹ ಈ ಹಿಂದೆ ಇತರರಿಂದ ಆ ಭೂಮಿಯನ್ನು ಕೊಂಡುಕೊಂಡವರಾಗಿದ್ದರು.

ಇತಿಹಾಸದ ಈ ಘಟನೆಗಳಿಗೂ ಮತ್ತು ಇಂದು ದೇಶದಲ್ಲಿ ನಡೆಯುತ್ತಿರುವ ದೇವಾಲಯಗಳ ಭೂ ಹಗರಣಗಳಿಗೂ ಏನಾದರೂ ಹೋಲಿಕೆ ಕಂಡುಬಂದರೆ, ಅದು ಕೇವಲ ಕಾಕತಾಳೀಯವಷ್ಟೇ!

►ಹಸ್ತಕ್ಷೇಪ ಮತ್ತು ಒಕ್ಕಲೆಬ್ಬಿಸುವಿಕೆ

ರೈತರನ್ನು ಒಕ್ಕಲೆಬ್ಬಿಸದೆ ಕೇವಲ ಮಾಲಕತ್ವ ಬದಲಾಗುತ್ತಿದ್ದ ‘ಕುಡಿ-ನಿಂಗ’ ಮಾದರಿಯು ‘ದೇವದಾನ’ ಭೂಮಿಯ ಹಲವು ವಿಧಗಳಲ್ಲಿ ಒಂದಾಗಿತ್ತು. ಇಲ್ಲಿ ಆಸ್ತಿ ಕೈಬದಲಾಗುತ್ತಿತ್ತು, ಲಾಭ ಗಳಿಸಲಾಗುತ್ತಿತ್ತು, ಆದರೆ ಮಣ್ಣಿನಲ್ಲಿ ದುಡಿಯುವ ರೈತರು ಮಾತ್ರ ಬದಲಾಗುತ್ತಿರಲಿಲ್ಲ. ಕೇವಲ ಬೆಳೆಯ ಮುಖ್ಯ ಪಾಲುದಾರನಷ್ಟೇ ಬದಲಾಗುತ್ತಿದ್ದ. ಆದರೆ, ಮತ್ತೊಂದು ಅತ್ಯಂತ ಆತಂಕಕಾರಿ ಮಾದರಿಯೆಂದರೆ ‘ಕುಡಿ-ನಿಕ್ಕಿ’. ಈ ನಿಯಮದಡಿ ರೈತರನ್ನು ಜಮೀನಿನಿಂದ ನೇರವಾಗಿ ಒಕ್ಕಲೆಬ್ಬಿಸಲಾಗುತ್ತಿತ್ತು.

ಕೊಳ್ಳಿಡಂ ನದಿಯ ದಂಡೆಯ ಮೇಲಿರುವ ಕೀಳ್ಪಳುವೂರ್ನಲ್ಲಿ ಇತಿಹಾಸಕಾರ ಕರಾಶಿಮಾ ಅವರಿಗೆ ಇಂತಹ ಹಲವು ಉದಾಹರಣೆಗಳು ಸಿಕ್ಕಿವೆ. ಅಲ್ಲಿ ಮಿಲಿಟರಿ ಮುಖಂಡರು ಭೂಮಿಯನ್ನು ತಮ್ಮದಾಗಿಸಿಕೊಳ್ಳಲು ರೈತರನ್ನು ಸಾಮೂಹಿಕವಾಗಿ ಓಡಿಸಿದ್ದರು. ಈ ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ, 12ನೇ ಶತಮಾನದ ಹಲವು ಚೋಳ ಅರಸರು ಸಂತ್ರಸ್ತ ರೈತರಿಗೆ ಅವರ ಆಸ್ತಿ ಹಕ್ಕುಗಳನ್ನು ಮರಳಿ ಕೊಡಿಸಲು ಪ್ರಯತ್ನಿಸಿದರು ಮತ್ತು ಹರಾಜಿನಲ್ಲಿ ಭೂಮಿ ಖರೀದಿಸದಂತೆ ಉನ್ನತ "ರಾಜಕುಲದ ಕುಟುಂಬಗಳಿಗೆ" (ರಾಜಕುಲವರ್) ನಿಷೇಧ ಹೇರಿದರು. ಆದರೆ ನಂತರದ ಶಾಸನಗಳನ್ನು ಗಮನಿಸಿದರೆ ಈ ಎಲ್ಲಾ ಪ್ರಯತ್ನಗಳು ವ್ಯರ್ಥವಾದಂತೆ ತೋರುತ್ತದೆ. ದೇವಸ್ಥಾನಕ್ಕೆ ಮರಳಿದ ರೈತರು ಸಶಸ್ತ್ರ ರೌಡಿಗಳ ಹೆದರಿಕೆಗೆ ಅಥವಾ ಒತ್ತಡಕ್ಕೆ ಮಣಿದು ತಮ್ಮ ಭೂಮಿಯನ್ನು ಮತ್ತೆ ಅವರಿಗೆ ಒಪ್ಪಿಸಿದ್ದರು. ಇದು ಅವರ ಸ್ವಯಂಪ್ರೇರಿತ ನಿರ್ಧಾರವೇ ಎಂಬುದು ಇಂದಿಗೂ ಸ್ಪಷ್ಟವಾಗಿಲ್ಲ.

ಈ ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ಘಟನೆ, ಅಂದರೆ ಇಂದಿನ ಮಯಿಲಾಡುತುರೈ ಜಿಲ್ಲೆಯ ಸಾಯಾವನಂ ದೇವಾಲಯದಲ್ಲಿ ನಡೆದ 12ನೇ ಶತಮಾನದ ಹಗರಣವು ರಾಜನ ಹಸ್ತಕ್ಷೇಪಕ್ಕೆ ಮತ್ತೊಂದು ಸ್ಪಷ್ಟ ಉದಾಹರಣೆಯಾಗಿದೆ. ಮಧ್ಯರಾತ್ರಿ ನಡೆದ ದಿಢೀರ್ ತನಿಖೆಯ ವೇಳೆ, ಆಭರಣಗಳ ಕಳ್ಳತನದ ಹಿಂದೆ ಅದೇ ದೇವಾಲಯದ ಅರ್ಚಕರಾದ ಕೆಲವು ಶಿವ-ಬ್ರಾಹ್ಮಣರ ಕೈವಾಡ ಇರುವುದು ಪತ್ತೆಯಾಗಿತ್ತು.ಅವರಿಗೆ ಶಿಕ್ಷೆಯಾಗಿ 180 ಚಿನ್ನದ ನಾಣ್ಯಗಳ ದಂಡ ವಿಧಿಸಲಾಯಿತು. ಈ ಮೊತ್ತವು ದೇವಾಲಯದ ಕೇವಲ 20.5 ದಿನಗಳ ಆದಾಯಕ್ಕೆ ಸಮನಾಗಿತ್ತು. ಚೋಳರ ಕಾಲದ ಇಂತಹ ಹಲವು ಶಾಸನಗಳಲ್ಲಿ ರಾಜಾಧಿಕಾರಿಗಳು ದೇವಾಲಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದ ಉದಾಹರಣೆಗಳಿವೆ. ತಪ್ಪು ಲೆಕ್ಕ ಬರೆದಿದ್ದಕ್ಕಾಗಿ ಅಥವಾ ಕಲ್ಲಿನ ಶಾಸನಗಳಲ್ಲಿ ದಾಖಲಾಗಿರುವ ಕಾಣಿಕೆಗಳಿಗೂ ದೇವಸ್ಥಾನದ ಖಜಾನೆಯಲ್ಲಿರುವ ಹಣಕ್ಕೂ ಹೊಂದಾಣಿಕೆಯಾಗದಿದ್ದಾಗ ಅವರು ಅರ್ಚಕರಿಗೆ ಹಾಗೂ ವ್ಯವಸ್ಥಾಪಕ ಸಮಿತಿಗಳಿಗೆ ದಂಡ ವಿಧಿಸುತ್ತಿದ್ದರು. ಅಂದರೆ, ಮಧ್ಯಕಾಲೀನ ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿ ತಾವೇ ಸ್ವಯಂ ನಿಯಂತ್ರಣ ಹೊಂದಿರಲಿಲ್ಲ, ಅಲ್ಲಿ ಕಟ್ಟುನಿಟ್ಟಿನ ಕಾವಲಿತ್ತು.

ಹಾಗಾದರೆ, ತಪ್ಪುಗಳನ್ನು ತಿದ್ದಿ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ರಾಜರು ಮುಖ್ಯ ಪಾತ್ರ ವಹಿಸಿದ್ದರೇ? ಕೇಳಲು ಇದು ಆಕರ್ಷಕವಾಗಿ ಕಂಡರೂ, ಇತಿಹಾಸದ ಸರಣಿ ಘಟನೆಗಳು ಬೇರೆಯದೇ ಕಥೆ ಹೇಳುತ್ತವೆ. ಮೊದಲೇ ಹೇಳಿದಂತೆ, ರಾಜರ ಭಾರೀ ಕಂದಾಯದ ಹೊರೆಯಿಂದಾಗಿಯೇ ಹಳ್ಳಿಗಳ ಜನರು ತಮ್ಮ ಹಳ್ಳಿಯ ಸಾಮೂಹಿಕ ಭೂಮಿಯನ್ನು ಮಾರಾಟ ಮಾಡಲು ಅನಿವಾರ್ಯವಾಗಿ ಒತ್ತಾಯಿಸಲ್ಪಡುತ್ತಿದ್ದರು. ಈ ಭೂ ಹರಾಜುಗಳು ರಾಜನ ಹೆಸರಿನಲ್ಲಿ, ರಾಜ್ಯಾಧಿಕಾರಿಗಳ ನೇತೃತ್ವದಲ್ಲೇ ನಡೆಯುತ್ತಿದ್ದವು. ಒಮ್ಮೆ ಇಂತಹ ಸಾಮೂಹಿಕ ಭೂಮಿಗಳು ಖಾಸಗಿ ಆಸ್ತಿಯಾಗಿ ಬದಲಾದ ನಂತರ, ಅವುಗಳಿಗೆ ತೆರಿಗೆ ವಿನಾಯಿತಿ ನೀಡುವುದು ಹಾಗೂ ಅವು ‘ರೈತರನ್ನು ಉಳಿಸಿಕೊಳ್ಳುವ’ ಅಥವಾ ‘ರೈತರನ್ನು ಒಕ್ಕಲೆಬ್ಬಿಸುವ’ ಭೂಮಿಗಳೇ ಎಂಬುದನ್ನು ನಿರ್ಧರಿಸುತ್ತಿದ್ದುದೇ ಇದೇ ರಾಜಾಧಿಕಾರಿಗಳು. ವಾಸ್ತವವಾಗಿ, ತಿರುವಿಡೈಮರುದೂರ್ ಮತ್ತು ತಿರುಕ್ಕೋವಿಲೂರ್ ದೇವಾಲಯಗಳ ಶಾಸನಗಳ ಬಗ್ಗೆ ಹೈಟ್ಸ್ಮನ್ ನಡೆಸಿರುವ ವಿಶ್ಲೇಷಣೆಯ ಪ್ರಕಾರ, ದೇವಾಲಯಗಳಿಗೆ ತೆರಿಗೆ ರಹಿತ ಭೂಮಿಯನ್ನು ದಾನ ಮಾಡಿದವರಲ್ಲಿ ಹೆಚ್ಚಿನವರು ರಾಜನ ಆಸ್ಥಾನದಿಂದ ಉನ್ನತ ಗೌರವ ಬಿರುದುಗಳನ್ನು ಪಡೆದ ಶ್ರೀಮಂತರೇ ಆಗಿದ್ದರು.

►ಹಗರಣಗಳು ಮತ್ತು ಸಮುದಾಯದ ಹಸ್ತಕ್ಷೇಪ

ವಾಸ್ತವವಾಗಿ, ಮಧ್ಯಕಾಲೀನ ಯುಗದ ಅತಿ ಶ್ರೀಮಂತರು ರಾಜನ ತೆರಿಗೆ ಬೇಡಿಕೆಗಳನ್ನು ಹಾಗೂ ದೇವಾಲಯಗಳಿಗೆ ನೀಡುವ ದೇಣಿಗೆಯಿಂದ ಸಿಗುವ ಗೌರವ-ಮರ್ಯಾದೆಗಳನ್ನು ತಮ್ಮ ಲಾಭಕ್ಕೆ ತಕ್ಕಂತೆ ಬಳಸಿಕೊಂಡರು. ಹಳ್ಳಿಯ ಜನರ ಮಾಲಕತ್ವದಲ್ಲಿದ್ದ, ತೆರಿಗೆಗೆ ಒಳಪಡುತ್ತಿದ್ದ ಸಾಮಾನ್ಯ ಕೃಷಿ ಭೂಮಿಯನ್ನು ಗುಟ್ಟಾಗಿ ಪವಿತ್ರ ಹಾಗೂ ಖಾಸಗಿ ನಿಯಂತ್ರಣದ ತೆರಿಗೆ ರಹಿತ ಭೂಮಿಯಾಗಿ ಪರಿವರ್ತಿಸುವುದು ಅವರ ನೆಚ್ಚಿನ ತಂತ್ರವಾಗಿತ್ತು. ವಿಪರ್ಯಾಸವೆಂದರೆ, ರಾಜನ ಅಧಿಕಾರಿಗಳೂ ಈ ವ್ಯವಸ್ಥೆಯಿಂದ ಲಾಭ ಪಡೆಯುತ್ತಿದ್ದರಿಂದ, ಅವರೇ ಶ್ರೀಮಂತರ ಪರವಾಗಿ ಈ ಕೆಲಸವನ್ನು ಮಾಡಿಕೊಡುತ್ತಿದ್ದರು.

ಇದರ ಫಲವಾಗಿ, ಒಂದೆಡೆ ಚೋಳ ಸಾಮ್ರಾಜ್ಯಕ್ಕೆ ಸಿಗಬೇಕಿದ್ದ ತೆರಿಗೆ ವರಮಾನ ಕುಸಿಯತೊಡಗಿತು, ಮತ್ತೊಂದೆಡೆ ಸುಂದರವಾದ ಬೃಹತ್ ದೇವಾಲಯ ಸಂಕೀರ್ಣಗಳು ತಲೆಯೆತ್ತಿದವು. ಆದರೆ ಇದರ ಮಧ್ಯೆ ಸಿಲುಕಿ ಜರ್ಜರಿತರಾಗಿದ್ದು ಮಾತ್ರ ಭೂಮಿ ಇಲ್ಲದ ಬಡ ರೈತರು. ಇತಿಹಾಸಕಾರ ಕರಾಶಿಮಾ ಬರೆಯುವಂತೆ, 13ನೇ ಶತಮಾನದ ಆರಂಭದ ವೇಳೆಗೆ ತೀವ್ರವಾದ ಕೃಷಿ ಬಿಕ್ಕಟ್ಟು ತಲೆದೋರಿ ಹಳ್ಳಿಗಳ ನೂರಾರು ಕುಟುಂಬಗಳು ದಿವಾಳಿಯಾದವು. ಬದುಕಲು ದಾರಿಯಿಲ್ಲದೆ ಜನರು ತಾವಾಗಿಯೇ ಜೀತದಾಳುಗಳಾಗಿ ಮಾರಾಟವಾಗತೊಡಗಿದರು. ಇದೇ ಸಮಯದಲ್ಲಿ ಪಾಂಡ್ಯ ಮತ್ತು ಹೊಯ್ಸಳ ಸೈನ್ಯಗಳು ಚೋಳರ ಮೇಲೆ ದಾಳಿ ನಡೆಸಿದ್ದರಿಂದ, ಇಡೀ ಸಾಮ್ರಾಜ್ಯವು ಅರಾಜಕತೆಗೆ ಸಿಲುಕಿ ಕುಸಿಯಿತು. ಸಣ್ಣ ಸಣ್ಣ ದೇವಾಲಯಗಳು ಇದರಿಂದ ತೀವ್ರ ಸಂಕಷ್ಟಕ್ಕೀಡಾದರೆ, ಜಂಬುಕೇಶ್ವರಂನಂತಹ ಪ್ರಸಿದ್ಧ ಮತ್ತು ಸ್ಥಾಪಿತ ದೇವಾಲಯಗಳು ತಮ್ಮ ಭೂಸ್ವಾಧೀನವನ್ನು ಇನ್ನಷ್ಟು ಹೆಚ್ಚಿಸಿಕೊಂಡವು.

ಚೋಳರ ಇತಿಹಾಸದ ಹಿರಿಯ ಸಂಶೋಧಕರಾದ ಕೆ.ಎ. ನೀಲಕಂಠ ಶಾಸ್ತ್ರಿ ಅವರು ತಂಜಾವೂರಿನ ಸಮೀಪದ ಶಿವಪುರಂನಲ್ಲಿ ನಡೆದ ಅತ್ಯಂತ ದೊಡ್ಡ ಹಗರಣವೊಂದನ್ನು ದಾಖಲಿಸಿದ್ದಾರೆ. 13ನೇ ಶತಮಾನದ ಆ ಗೊಂದಲದ ವಾತಾವರಣದಲ್ಲಿ, ಇಬ್ಬರು ಬ್ರಾಹ್ಮಣ ಅರ್ಚಕರು ದೇವಾಲಯದ ಸಂಪೂರ್ಣ ನಿಯಂತ್ರಣವನ್ನು ತಮ್ಮದಾಗಿಸಿಕೊಂಡರು. ಸುತ್ತಮುತ್ತಲಿನ ಹಳ್ಳಿಗಳಿಂದ ಬರೋಬ್ಬರಿ 50,000 ಚಿನ್ನದ ನಾಣ್ಯಗಳನ್ನು ವಸೂಲಿ ಮಾಡಲು ಅವರು ಕರ್ನಾಟಕದಿಂದ ಬಂದಿದ್ದ ಬಾಡಿಗೆ ಸೈನಿಕರನ್ನು (ಬಹುಶಃ ಹೊಯ್ಸಳ ಸೈನ್ಯದ ಚದುರಿದ ಗುಂಪು) ಬಳಸಿಕೊಂಡರು. (ಇಂದಿನ ಮಾರುಕಟ್ಟೆಯ ಚಿನ್ನದ ಮೌಲ್ಯಕ್ಕೆ ಹೋಲಿಸಿದರೆ ಇದು ಸುಮಾರು 100 ರಿಂದ 200 ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗುತ್ತದೆ). ಅಷ್ಟೇ ಅಲ್ಲದೆ, ಅವರು ದೇವಾಲಯದ ಆಸ್ತಿಯನ್ನು ಕದ್ದರು, ತೆರಿಗೆ ಕಟ್ಟಲು ನಿರಾಕರಿಸಿದರು ಮತ್ತು ದೇವತೆಗೆ ಅರ್ಪಿಸಬೇಕಾಗಿದ್ದ ಅಮೂಲ್ಯವಾದ ಹಾರವನ್ನು ತಮ್ಮ ಇಷ್ಟದ ಮಹಿಳೆಗೆ ಉಡುಗೊರೆಯಾಗಿ ನೀಡಿದರು.

ಕೊನೆಗೆ ಇದರಿಂದ ಆಕ್ರೋಶಗೊಂಡ ಹಳ್ಳಿಯ ಮಹಾಜನಸಭೆಯು ಪರಿಸ್ಥಿತಿಯನ್ನು ತನ್ನ ಕೈಗೆ ತೆಗೆದುಕೊಂಡಿತು. ಆ ಅರ್ಚಕರು ಶಿವನಿಗೆ ಮತ್ತು ರಾಜನಿಗೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿ, ಅಪರಾಧಿಗಳ ಎಲ್ಲಾ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತು. (ವಿಪರ್ಯಾಸವೆಂದರೆ, ಇದೇ ಶಿವಪುರಂನಲ್ಲಿ 1970ರ ದಶಕದಲ್ಲೂ ಮತ್ತೊಂದು ಹಗರಣ ನಡೆಯಿತು. ಅಲ್ಲಿ ಭೂಮಿಯಿಂದ ಪತ್ತೆಯಾಗಿದ್ದ ಅಸಲಿ ನಟರಾಜನ ಕಂಚಿನ ವಿಗ್ರಹವನ್ನು ಕದ್ದು, ಅದರ ಜಾಗದಲ್ಲಿ ನಕಲಿ ವಿಗ್ರಹವನ್ನು ಇಡಲಾಗಿತ್ತು.)

ಚೋಳ ಸಾಮ್ರಾಜ್ಯದ ಪತನದ ನಂತರ, ಸಾಂಪ್ರದಾಯಿಕ ಗ್ರಾಮ ಸಭೆಗಳು ಮತ್ತು ವಿವಿಧ ಜಾತಿ ಗುಂಪುಗಳ ಪ್ರಾದೇಶಿಕ ಒಕ್ಕೂಟಗಳು ಒಟ್ಟಾಗಿ ಸೇರಿ ದೇವಾಲಯಗಳ ಸೇವೆಗಳನ್ನು ಪುನರಾರಂಭಿಸಲು ಸಾಮೂಹಿಕ ಪ್ರಯತ್ನಗಳನ್ನು ನಡೆಸಿದ ಹಲವು ಉದಾಹರಣೆಗಳಿವೆ. ಆದರೆ, ದೀರ್ಘಾವಧಿಯಲ್ಲಿ ಭೂಮಾಲೀಕತ್ವದ ವ್ಯವಸ್ಥೆಯಲ್ಲಾದ ಈ ಬದಲಾವಣೆಗಳನ್ನು ಮತ್ತೆ ಸರಿಪಡಿಸಲು ಸಾಧ್ಯವಾಗಲೇ ಇಲ್ಲ. ಕಾಲಕ್ರಮೇಣ ವಿವಿಧ ಹಿನ್ನೆಲೆಯ ದಾನಿಗಳಿಗೆ ದೇವಾಲಯಗಳ ಬಾಗಿಲು ತೆರೆದುಕೊಂಡಿತಾದರೂ, ಒಟ್ಟಾರೆ ವ್ಯವಸ್ಥೆಯಲ್ಲಿ ಭೂಮಾಲಕ ಶ್ರೀಮಂತ ವರ್ಗದವರೇ ಮೇಲುಗೈ ಸಾಧಿಸುವುದನ್ನು ಮುಂದುವರಿಸಿದರು.

ಇತಿಹಾಸದ ಈ ದಾಖಲೆಗಳು ದೇವಾಲಯದ ಸಮಿತಿಗಳಿಗಿಂತ ಸರ್ಕಾರಿ ಅಧಿಕಾರಿಗಳೇ ಲೇಸು ಎಂದು ಎಲ್ಲೂ ವಾದಿಸುವುದಿಲ್ಲ. ಬದಲಿಗೆ, ಮಧ್ಯಕಾಲೀನ ಯುಗದ ಅತಿ ಶ್ರೀಮಂತ ದಾನಿಗಳಂತೆ, ಇತ್ತ ಸರ್ಕಾರಿ ಅಧಿಕಾರಿಗಳು ಮತ್ತು ಅತ್ತ ದೇವಾಲಯದ ಸಮಿತಿಗಳು ಇಬ್ಬರಿಗೂ ದೇವಾಲಯಗಳ ಮೂಲಕ ಆರ್ಥಿಕ ಲಾಭ ಮಾಡಿಕೊಳ್ಳುವ ಸ್ವಾರ್ಥ ಹಿತಾಸಕ್ತಿ ಇತ್ತು ಎಂಬುದನ್ನು ಇತಿಹಾಸ ನಮಗೆ ನೆನಪಿಸುತ್ತದೆ. ದೇವಾಲಯಗಳ ಸ್ವಾಯತ್ತತೆಯ ಕುರಿತು ಇಂದು ನಡೆಯುತ್ತಿರುವ ಚರ್ಚೆಗಳಲ್ಲಿ ಈ ಸೂಕ್ಷ್ಮ ಅಂಶವೇ ಕಾಣೆಯಾಗಿದೆ. ಭಕ್ತರ ಹೃದಯದಲ್ಲಿ ದೇವರು ಪರಿಶುದ್ಧನಾಗಿರುವುದು ನಿಜ. ಆದರೆ ಆ ಪರಿಶುದ್ಧತೆ ದೇವಾಲಯದ ರಾಜಕೀಯ ಪೋಷಕರಿಗಾಗಲಿ ಅಥವಾ ಕಾಣಿಕೆಗಳನ್ನು ನಿರ್ವಹಿಸುವ ಆಡಳಿತ ಮಂಡಳಿಗಾಗಲಿ ಅನ್ವಯಿಸುವುದಿಲ್ಲ.

ಸೌಜನ್ಯ: theprint.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News