×
Ad

VAR ವಿವಾದದಲ್ಲಿ ಮೆಸ್ಸಿಯನ್ನು ಎಳೆದ ಅಮೆರಿಕ; ಫೋಲಾರಿನ್ ಬಾಲೊಗುನ್ ಗೆ ರೆಡ್ ಕಾರ್ಡ್ ವಿರುದ್ಧ ಆಕ್ರೋಶ

Update: 2026-07-02 22:58 IST

ಫೋಲಾರಿನ್ ಬಾಲೊಗುನ್ | Photo Credit : AP, PTI  

"ಬಾಲೊಗುನ್ ಹೆಸರು ಮೆಸ್ಸಿ ಆಗಿದ್ದರೆ, ಹಿಂದಿನ ಪಂದ್ಯದಲ್ಲಿ ಕಂಡಂತೆ ಇನ್ನೂ ಅವರು ಮೈದಾನದಲ್ಲಿ ಆಡುತ್ತಿದ್ದರು" ಎಂದು ಅಮೆರಿಕ ಟೀಕಿಸಿದೆ.

ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊ ಬೇ ಅರೆನಾ ಕ್ರೀಡಾಂಗಣದಲ್ಲಿ ಜುಲೈ 2ರ ಗುರುವಾರ ನಡೆದ 32ರ ಸುತ್ತಿನ ಪಂದ್ಯದಲ್ಲಿ ಅಮೆರಿಕ ತಂಡವು ಬೋಸ್ನಿಯಾ ಮತ್ತು ಹರ್ಜೆಗೋವಿನಾ ತಂಡದ ವಿರುದ್ಧ ಹತ್ತು ಮಂದಿ ಆಟಗಾರರೊಂದಿಗೆ 2-0 ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಆದರೆ ಈ ಪಂದ್ಯವೂ VAR ನಿರ್ಧಾರಕ್ಕೆ ಸಂಬಂಧಿಸಿದ ವಿವಾದಕ್ಕೆ ಒಳಗಾಗಿದೆ.

ಪಂದ್ಯದ ಆರಂಭದಿಂದಲೇ ಅಮೆರಿಕ ಆಕ್ರಮಣಕಾರಿಯಾಗಿ ಆಡಿತ್ತು. ಫೋಲಾರಿನ್ ಬಾಲೊಗುನ್ ತಂಡಕ್ಕಾಗಿ ಅದ್ಭುತ ಗೋಲು ಗಳಿಸಿದರು. ಆದರೆ ಆಫ್‌ಸೈಡ್ ಕಾರಣದಿಂದ ಅವರ ಗೋಲು ರದ್ದಾಯಿತು. ನಂತರ 45ನೇ ನಿಮಿಷದಲ್ಲಿ ಮತ್ತೊಂದು ಅವಕಾಶವನ್ನು ಸೃಷ್ಟಿಸಿ ಗೋಲು ಬಾರಿಸಿದರು. ಇದರಿಂದ ಅಮೆರಿಕಕ್ಕೆ 1-0 ಮುನ್ನಡೆ ದೊರೆಯಿತು. ಆದರೆ ಎರಡನೇ ಅರ್ಧದಲ್ಲಿ ತಾರಿಕ್ ಮುಹರೆಮೊವಿಕ್ ಅವರ ಮೇಲೆ ದುಡುಕಿನ ಟ್ಯಾಕಲ್ ಮಾಡಿದ ಕಾರಣ ಅವರನ್ನು ಹೊರಗೆ ಕಳುಹಿಸಲಾಯಿತು. ಹೀಗಾಗಿ ಅಮೆರಿಕ ಉಳಿದ ಭಾಗವನ್ನು ಹತ್ತು ಆಟಗಾರರೊಂದಿಗೆ ಆಡಬೇಕಾಯಿತು.

ಆದರೂ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ಬೋಸ್ನಿಯಾ ವಿಫಲವಾಯಿತು. ಪಂದ್ಯದ ಕೊನೆಯಲ್ಲಿ ಮಲಿಕ್ ಟಿಲ್ಮನ್ ಅದ್ಭುತ ಫ್ರೀ ಕಿಕ್ ಮೂಲಕ ಗೋಲು ಗಳಿಸಿ ಅಮೆರಿಕದ ಮುನ್ನಡೆಯನ್ನು 2-0ಕ್ಕೆ ವಿಸ್ತರಿಸಿದರು.

ಆದರೆ 61ನೇ ನಿಮಿಷದಲ್ಲಿ ಬಾಲೊಗುನ್ ಅವರನ್ನು ಹೊರಗೆ ಕಳುಹಿಸಿದ VAR ನಿರ್ಧಾರಕ್ಕೆ ಟೀಕೆ ವ್ಯಕ್ತವಾಗಿದೆ. ವಾಸ್ತವದಲ್ಲಿ, ಬಾಲೊಗುನ್ ಬೋಸ್ನಿಯಾದ ಡಿಫೆಂಡರ್‌ನ ಕಾಲಿನ ಮೇಲೆ ಬಿದ್ದಾಗ ಅವರ ಕಾಲು ವಿಚಿತ್ರವಾಗಿ ತಿರುಚಲ್ಪಟ್ಟಿತು. ಮುಹರೆಮೊವಿಕ್ ತಕ್ಷಣ ತಮ್ಮ ಕಾಲನ್ನು ಹಿಡಿದುಕೊಂಡು ಕೆಳಗೆ ಬಿದ್ದರು. ಅವರಿಗೆ ಚಿಕಿತ್ಸೆ ನೀಡಲಾಯಿತು.

ಆರಂಭದಲ್ಲಿ ರೆಫ್ರಿ ಯಾವುದೇ ಕಾರ್ಡ್ ನೀಡಿರಲಿಲ್ಲ. ಆದರೆ VAR ದೃಶ್ಯಗಳನ್ನು ಪರಿಶೀಲಿಸಿದ ನಂತರ ಬ್ರೆಜಿಲ್‌ನ ಅಧಿಕಾರಿ ರಾಫೆಲ್ ಕ್ಲಾಸ್ ನೇರ ಕೆಂಪು ಕಾರ್ಡ್ ನೀಡಿದರು.

ಈ ನಿರ್ಧಾರವು ವಿವಾದವನ್ನು ಹುಟ್ಟುಹಾಕಿದೆ. ತಜ್ಞರು VAR ನಿರ್ಧಾರಗಳ ಸ್ಥಿರತೆಯನ್ನು ಪ್ರಶ್ನಿಸುತ್ತಿದ್ದಾರೆ. ಅರ್ಜೆಂಟೀನಾ ಮತ್ತು ಅಲ್ಜೀರಿಯಾ ನಡುವಿನ ಕಾನ್ಸಾಸ್ ಸಿಟಿಯಲ್ಲಿ ನಡೆದ ಪಂದ್ಯದಲ್ಲಿ ಲಿಯೊನೆಲ್ ಮೆಸ್ಸಿ, ಅಲ್ಜೀರಿಯಾದ ನಾಯಕ ಐಸಾ ಮಂಡಿ ವಿರುದ್ಧ ಇದೇ ರೀತಿಯ ತಪ್ಪು ಮಾಡಿದ್ದರು. ಆದರೆ ಆ ಪಂದ್ಯದಲ್ಲಿ ಅವರು ಯಾವುದೇ ಶಿಕ್ಷೆಯಿಲ್ಲದೆ ಮುಂದುವರಿದಿದ್ದರು ಎಂದು ಅಮೆರಿಕದ ವಿಶ್ಲೇಷಕರು ಹೇಳುತ್ತಿದ್ದಾರೆ.

ಅಮೆರಿಕದ ಮಾಜಿ ಫುಟ್‌ಬಾಲ್ ಆಟಗಾರ ಅಲೆಕ್ಸಿ ಲಾಲಾಸ್ VAR ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಇದನ್ನು ಅವರು "ಹೊಲಸು ನಿರ್ಧಾರ" (crap call) ಎಂದು ಕರೆದಿದ್ದಾರೆ. "ಅದು ಕೆಂಪು ಕಾರ್ಡ್ ಅಲ್ಲ. ವೀಡಿಯೋದಲ್ಲಿ ನೋಡಿದಾಗ ಹಾಗೆ ಕೆಟ್ಟದಾಗಿ ಕಾಣುತ್ತದೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ಏನು ನಡೆದಿದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಇದು ಕಚಡಾ ನಿರ್ಧಾರ ಎಂದು ನನಗೆ ಅನಿಸುತ್ತದೆ" ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಲಾಲಾಸ್ ಮುಂದುವರಿದು, "ಬಾಲೊಗುನ್ ಅವರ ಹೆಸರು ಮೆಸ್ಸಿ ಆಗಿದ್ದರೆ ಅವರು ಕೆಂಪು ಕಾರ್ಡ್‌ನಿಂದ ತಪ್ಪಿಸಿಕೊಳ್ಳುತ್ತಿದ್ದರು" ಎಂದು ಹೇಳಿದರು. "ಅವರ ಹೆಸರು ಮೆಸ್ಸಿ ಆಗಿದ್ದರೆ, ನಾವು ಹಿಂದಿನ ಪಂದ್ಯದಲ್ಲಿ ಕಂಡಂತೆ ಅವರು ಇನ್ನೂ ಮೈದಾನದಲ್ಲಿ ಆಡುತ್ತಿದ್ದರು. ಸೋಮವಾರ ಸಿಯಾಟಲ್‌ನಲ್ಲಿ ನಡೆಯುವ ಪಂದ್ಯಕ್ಕೂ ಅವರು ಅರ್ಹರಾಗುತ್ತಿದ್ದರು" ಎಂದು ವ್ಯಂಗ್ಯವಾಡಿದ್ದಾರೆ.

ಈ ಹಿನ್ನಡೆಯ ಹೊರತಾಗಿಯೂ, 24 ವರ್ಷಗಳ ನಂತರ ನಾಕೌಟ್ ಹಂತವನ್ನು ದಾಟಲು ಅಮೆರಿಕಕ್ಕೆ ಸಾಧ್ಯವಾಗಿದೆ. ಮೌರಿಸಿಯೊ ಪೊಚೆಟ್ಟಿನೊ ಅವರ ತಂಡವು 16ನೇ ಸುತ್ತಿಗೆ ಮುನ್ನಡೆದಿದೆ. 16ನೇ ಸುತ್ತಿನಲ್ಲಿ ಜುಲೈ 7ರಂದು ಅಮೆರಿಕ ತಂಡವು ಬೆಲ್ಜಿಯಂ ಅನ್ನು ಎದುರಿಸಲಿದೆ. ಫಿಫಾ ನಿಯಮಗಳ ಪ್ರಕಾರ, ನೇರ ಕೆಂಪು ಕಾರ್ಡ್ ಮೂಲಕ ಹೊರಬಿದ್ದ ಯಾವುದೇ ಆಟಗಾರನನ್ನು ತಮ್ಮ ತಂಡದ ಮುಂದಿನ ಪಂದ್ಯದಿಂದ ಸ್ವಯಂಚಾಲಿತವಾಗಿ ಅಮಾನತುಗೊಳಿಸಲಾಗುತ್ತದೆ. ಹೀಗಾಗಿ ಬಾಲೊಗುನ್ ಮುಂದಿನ ಪಂದ್ಯದಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News