Photo Credit : X 

ಬೆಂಗಳೂರು: ಸಾಮಾಜಿಕ ಜಾಲತಾಣ X (ಹಿಂದಿನ Twitter)ನಲ್ಲಿ ಕಳೆದ ಕೆಲವು ದಿನಗಳಿಂದ ಗಮನ ಸೆಳೆಯುತ್ತಿರುವ ರಾಜಕೀಯ ವ್ಯಂಗ್ಯ ಸರಣಿಯೊಂದು ಇದೀಗ ಮಂಗಳ ಗ್ರಹವನ್ನೂ ತಲುಪಿದೆ.

‘BJP Palestine’, ‘BJP Russia’, ‘BJP China’, ‘BJP Brazil’, ‘BJP South Korea’, ‘BJP North Korea’, ‘BJP Uganda’, ‘BJP PoJK’ ಹೀಗೆ ದೇಶ, ಪ್ರದೇಶ ಹಾಗೂ ಸಂಘರ್ಷ ವಲಯಗಳ ಹೆಸರಿನಲ್ಲಿ ಬಿಜೆಪಿ ಖಾತೆಗಳು ಕಾಣಿಸಿಕೊಂಡ ಬಳಿಕ, ವ್ಯಂಗ್ಯ ಈಗ ‘BJP Mars’ (ಬಿಜೆಪಿ ಮಂಗಳ ಗ್ರಹ)ವರೆಗೆ ತಲುಪಿದೆ.

ಅಲ್ಲಿಗೆ ನಿಲ್ಲದೆ ‘BJP Epstein Land’ ಹಾಗೂ ‘BJP Whole Universe’ (ಬಿಜೆಪಿ ಇಡೀ ವಿಶ್ವ) ಎಂಬ ಹೆಸರಿನ ಅಣಕ ಖಾತೆಗಳೂ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿವೆ.

ಬಹುತೇಕ ಖಾತೆಗಳಲ್ಲಿ ಬಿಜೆಪಿಯ ಕಮಲದ ಚಿಹ್ನೆ, ಕೇಸರಿ ಬಣ್ಣದ ವಿನ್ಯಾಸ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ನಾಯಕರ ಚಿತ್ರಗಳನ್ನು ಬಳಸಲಾಗಿದೆ. ಕೆಲವು ಖಾತೆಗಳು ‘Official’ (ಅಧಿಕೃತ) ಅಥವಾ ‘State President’ (ರಾಜ್ಯಾಧ್ಯಕ್ಷ) ಎಂಬಂತೆ ಬಿಂಬಿಸಿಕೊಂಡಿದ್ದರೆ, ಇನ್ನೂ ಕೆಲವು ತಮ್ಮನ್ನು ‘Parody’ (ಅಣಕ), ‘Satire’ (ವ್ಯಂಗ್ಯ) ಅಥವಾ ‘Commentary’ (ವಿಮರ್ಶಾತ್ಮಕ ಟಿಪ್ಪಣಿ) ಖಾತೆಗಳೆಂದು ಸ್ಪಷ್ಟಪಡಿಸಿವೆ.

ಆಗಸ್ಟ್ 29ರಂದು @aapalacolumbus ಎಂಬವರು ಇಂತಹ ಹಲವು ಖಾತೆಗಳ ಚಿತ್ರಗಳನ್ನು ಒಟ್ಟಿಗೆ ಸೇರಿಸಿ ಹಂಚಿಕೊಂಡ ಪೋಸ್ಟ್ ಕೂಡ ಸಾಕಷ್ಟು ಗಮನ ಸೆಳೆದಿದ್ದು, ಈ ವ್ಯಂಗ್ಯ ಸರಣಿ ಇನ್ನಷ್ಟು ಹರಡುವಂತೆ ಮಾಡಿದೆ.

ಒಂದು ಮೀಮ್‌ ನಿಂದ ಸಾಮೂಹಿಕ ವ್ಯಂಗ್ಯದವರೆಗೆ

ಇದು ಕೇವಲ ಕೆಲವು ಅಣಕ ಖಾತೆಗಳು ಹುಟ್ಟಿಕೊಂಡಿರುವ ಕಥೆಯಲ್ಲ. ಸಾಮಾಜಿಕ ಜಾಲತಾಣದಲ್ಲಿ ‘Collective Satire’ (ಸಾಮೂಹಿಕ ವ್ಯಂಗ್ಯ) ಹೇಗೆ ರೂಪುಗೊಳ್ಳುತ್ತದೆ ಎಂಬುದಕ್ಕೆ ಇದು ಒಂದು ಉದಾಹರಣೆ. ಒಬ್ಬರು ಒಂದು ರಾಜಕೀಯ ಜೋಕ್ ಮಾಡುತ್ತಾರೆ; ಮತ್ತೊಬ್ಬರು ಅದೇ ಕಲ್ಪನೆಯನ್ನು ಹೊಸ ರೀತಿಯಲ್ಲಿ ಬಳಸುತ್ತಾರೆ; ಇನ್ನೊಬ್ಬರು ಅದನ್ನು ಮತ್ತಷ್ಟು ಅತಿರಂಜಿತಗೊಳಿಸುತ್ತಾರೆ. ನಂತರ ಮೀಮ್‌ ಗಳು, ಚಿತ್ರಗಳು, ರಿಪೋಸ್ಟ್‌ ಗಳು, ಪ್ರತಿಕ್ರಿಯೆಗಳು ಮತ್ತು ಹೊಸ ಅಣಕ ಖಾತೆಗಳ ಮೂಲಕ ಅದೇ ಕಲ್ಪನೆ ಹಲವು ರೂಪಗಳಲ್ಲಿ ಹರಡುತ್ತದೆ. ಹೀಗೆ ಒಬ್ಬರಿಂದ ಆರಂಭವಾದ ಜೋಕ್, ಹಲವು ಜನರ ಸೃಜನಶೀಲತೆಯಿಂದ ಸಾಮೂಹಿಕ ವ್ಯಂಗ್ಯವಾಗಿ ರೂಪುಗೊಳ್ಳುತ್ತದೆ.

ಈ ವ್ಯಂಗ್ಯ ಇಷ್ಟೊಂದು ವೇಗವಾಗಿ ಮತ್ತು ಹಲವು ರೂಪಗಳಲ್ಲಿ ಹರಡಲು ಬಿಜೆಪಿಯ ಪ್ರಚಾರದ ಏಕರೂಪತೆಯೂ ಒಂದು ಕಾರಣ. ಬಿಜೆಪಿಯ ಐಟಿ ಸೆಲ್‌ (ಮಾಹಿತಿ ತಂತ್ರಜ್ಞಾನ ಘಟಕ) ಒಂದು ನಿರೂಪಣೆ ರೂಪಿಸಿದರೆ, ಅದೇ ಮಾತು, ಅದೇ ವಾದ ಮತ್ತು ಅದೇ ಸಂದೇಶವನ್ನು ಕೇಂದ್ರ ಸಚಿವರಿಂದ ಹಿಡಿದು ಕೆಳಮಟ್ಟದ ಕಾರ್ಯಕರ್ತರವರೆಗೂ ಪುನರಾವರ್ತಿಸುವ ವ್ಯವಸ್ಥೆ ಬಿಜೆಪಿಯಲ್ಲಿದೆ. ಮೇಲಿನಿಂದ ಒಂದು ಮಾತು ಹೊರಬಂದರೆ, ಕೆಳಗಿನ ಹಂತಗಳಲ್ಲೂ ಅದೇ ಮಾತು ಕೇಳಿಸುತ್ತದೆ.

ಆದರೆ ಬಿಜೆಪಿಯ ವಿರುದ್ಧದ ಸಾಮಾಜಿಕ ಜಾಲತಾಣದ ಟೀಕೆ ಹಾಗಿಲ್ಲ. ಇಲ್ಲಿ ಯಾವುದೇ ಕೇಂದ್ರವಿಲ್ಲ, ಒಂದೇ ನಿರ್ದೇಶನವಿಲ್ಲ, ಒಂದೇ ರೀತಿಯ ಮಾತೂ ಇಲ್ಲ. ಒಬ್ಬರು ಒಂದು ವಿಚಾರವನ್ನು ಟೀಕಿಸಿದರೆ, ಮತ್ತೊಬ್ಬರು ಅದನ್ನೇ ಮೀಮ್ ಮಾಡುತ್ತಾರೆ; ಇನ್ನೊಬ್ಬರು ವ್ಯಂಗ್ಯ ಮಾಡುತ್ತಾರೆ; ಮತ್ತೊಬ್ಬರು ಅದಕ್ಕಿಂತ ಹೊಸ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಬಿಜೆಪಿಯ ಪ್ರಚಾರ ಒಂದು ಧ್ವನಿಯಲ್ಲಿ ಕೇಳಿಸಿದರೆ, ಅದರ ವಿರುದ್ಧದ ವ್ಯಂಗ್ಯ ನೂರು ಧ್ವನಿಗಳಲ್ಲಿ ಕೇಳಿಸುತ್ತಿದೆ. ಇದೇ ಅದರ ದೊಡ್ಡ ಶಕ್ತಿ. ಈ ವೈವಿಧ್ಯ ಮತ್ತು ಸೃಜನಶೀಲತೆಯೇ ಬಿಜೆಪಿಯ ವಿರುದ್ಧದ ಆನ್‌ಲೈನ್ ವ್ಯಂಗ್ಯವನ್ನು ಹೆಚ್ಚು ಗಮನ ಸೆಳೆಯುವಂತೆ ಮಾಡುತ್ತಿದೆ.

ಸಾಮಾಜಿಕ ಜಾಲತಾಣದ ಹೊಸ ತಲೆಮಾರು ಬಿಜೆಪಿಯ ರಾಜಕೀಯ ವಾದಕ್ಕೆ ಮತ್ತೊಂದು ವಾದದಿಂದ ಮಾತ್ರ ಉತ್ತರಿಸುತ್ತಿಲ್ಲ. ಅದರ ಭಾಷೆ, ಘೋಷಣೆ ಮತ್ತು ನಿರೂಪಣೆಯನ್ನೇ ಮೀಮ್ ಹಾಗೂ ವ್ಯಂಗ್ಯದ ವಸ್ತುವನ್ನಾಗಿ ಮಾಡುತ್ತಿದೆ. ಒಬ್ಬರು ಆರಂಭಿಸಿದ ವ್ಯಂಗ್ಯವನ್ನು ಮತ್ತೊಬ್ಬರು ತಮ್ಮದೇ ರೀತಿಯಲ್ಲಿ ಮುಂದುವರಿಸುವುದರಿಂದ ಒಂದೇ ವಿಚಾರಕ್ಕೆ ಹಲವು ಹೊಸ ರೂಪಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ಬಿಜೆಪಿಯ ವಿರುದ್ಧದ ಆನ್‌ಲೈನ್ ಟೀಕೆ ಹೆಚ್ಚು ವೈವಿಧ್ಯಮಯ, ಸೃಜನಶೀಲ ಮತ್ತು ತೀಕ್ಷ್ಣವಾಗುತ್ತಿದೆ.

ಇದೇ ಹೊಸ ತಲೆಮಾರನ್ನು ಹೆಚ್ಚು ಸೆಳೆಯುತ್ತಿರುವ ಅಂಶ.

ಹೀಗಾಗಿ ‘BJP Mars’ ಕೇವಲ ಒಂದು ಅಣಕ ಖಾತೆಯಲ್ಲ. ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ವಿರೋಧದ ಭಾಷೆ ಬದಲಾಗುತ್ತಿರುವುದರ ಒಂದು ಉದಾಹರಣೆ ಎಂದರೂ ತಪ್ಪಾಗದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಮಹಮ್ಮದ್‌ ಫೈಝಲ್‌ ಅಬ್ದುಲ್ಲಾ

contributor