ಹಣಕಾಸು ಉತ್ಪನ್ನಗಳು ಮತ್ತು ಏಜೆಂಟ್ ಗಳ ಅಬ್ಬರ; ಎಚ್ಚರಿಕೆಯಿಂದ ಕಠಿಣ ನಿಯಮದತ್ತ ರಿಸರ್ವ್ ಬ್ಯಾಂಕ್
ಭಾರತೀಯ ರಿಸರ್ವ್ ಬ್ಯಾಂಕ್ | Photo Credit : PTI
1 ಫೈನಾನ್ಸ್ ನಡೆಸಿದ 2024ರ ಸಮೀಕ್ಷೆಯ ಪ್ರಕಾರ, ಸಮೀಕ್ಷೆಗೆ ಒಳಗಾದ ರಿಲೇಶನ್‌ಶಿಪ್ ಮ್ಯಾನೇಜರ್! ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಮಾರಾಟ ಗುರಿಗಳನ್ನು ತಲುಪಲು ಹಣಕಾಸು ಉತ್ಪನ್ನಗಳನ್ನು ತಪ್ಪಾಗಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಗ್ರಾಹಕರೊಬ್ಬರು ಸ್ಥಿರ ಠೇವಣಿಯನ್ನು ನವೀಕರಿಸಲು ಬ್ಯಾಂಕ್/ಗೆ ಹೋದರೆ, ಹಲವು ತಿಂಗಳ ನಂತರ ತಾವು ಸ್ಥಿರ ಠೇವಣಿಯಲ್ಲ, ವಿಮೆಯನ್ನು ಹೊಂದಿರುವುದು ತಿಳಿದುಬರುತ್ತದೆ. ಮತ್ತೊಬ್ಬ ಗ್ರಾಹಕ ಗೃಹಸಾಲಕ್ಕೆ ಅರ್ಜಿ ಹಾಕಿದರೆ, ವಿಮೆಯು ಸದ್ದಿಲ್ಲದೆ ವಹಿವಾಟಿನ ಭಾಗವಾಗಿದೆ ಎಂಬುದು ನಂತರ ತಿಳಿದುಕೊಳ್ಳುತ್ತಾರೆ. ಇತರರಿಗೆ ಅಗತ್ಯವಿಲ್ಲದ ಹೂಡಿಕೆ ಉತ್ಪನ್ನಗಳನ್ನು ಖರೀದಿಸುವಂತೆ ಮನವೊಲಿಸಲಾಗಿರುತ್ತದೆ. ಇವುಗಳ ಬಗ್ಗೆ ‘ಸುರಕ್ಷಿತ’, ‘ಖಾತರಿಯುತ’ ಅಥವಾ ‘ಸ್ಥಿರ ಠೇವಣಿಯಂತೆಯೇ’ ಎಂದು ಭರವಸೆ ನೀಡಲಾಗುತ್ತದೆ.
ವರ್ಷಗಳಿಂದ ಈ ಬಗ್ಗೆ ಚರ್ಚೆಯಾಗುತ್ತಿತ್ತು. ಉದ್ಯೋಗಿ ಸಂಘಗಳು ಮಾರಾಟದ ಒತ್ತಡದ ಬಗ್ಗೆ ದೂರು ನೀಡುತ್ತಿದ್ದವು. ಹಣಕಾಸು ಸಲಹೆಗಾರರು ಅನಗತ್ಯ ಮಾರಾಟಗಳನ್ನು ಗುರುತಿಸಿದ್ದರು. ಮಾಧ್ಯಮ ವರದಿಗಳು ಗ್ರಾಹಕರು ಬಯಸದ ಮತ್ತು ಖರೀದಿಸಲು ಉದ್ದೇಶಿಸದ ಉತ್ಪನ್ನಗಳನ್ನು ಮಾರುತ್ತಿರುವ ಪ್ರಕರಣಗಳನ್ನು ಎತ್ತಿ ತೋರಿಸಿವೆ. ಹಾಗಾಗಿ ಹಣಕಾಸು ಸಚಿವರೂ ಈ ಬಗ್ಗೆ ಸಾರ್ವಜನಿಕವಾಗಿ ಕಳವಳ ವ್ಯಕ್ತಪಡಿಸಿದ್ದರು.
ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಬಲ ಚೌಕಟ್ಟೊಂದನ್ನು ಪರಿಚಯಿಸಿದೆ. ತಪ್ಪು ಮಾರಾಟವೇನು ಎಂಬುದನ್ನು ಇದೀಗ ವ್ಯಾಖ್ಯಾನಿಸಲಾಗಿದೆ. ಮೋಸಗೊಳಿಸುವ ಡಿಜಿಟಲ್ ಅಭ್ಯಾಸಗಳನ್ನು ನಿಷೇಧಿಸಲಾಗಿದೆ. ಒಂದು ಹಣಕಾಸು ಉತ್ಪನ್ನವನ್ನು ಖರೀದಿಸಿದರೆ ಮತ್ತೊಂದು ಖರೀದಿಸಲೇಬೇಕು ಎನ್ನುವ ಒತ್ತಡ ಹೇರುವುದನ್ನು (forced bundling) ನಿಷೇಧಿಸಲಾಗಿದೆ. ಸ್ಪಷ್ಟ ಒಪ್ಪಿಗೆಯನ್ನು ಕಡ್ಡಾಯಗೊಳಿಸಲಾಗಿದ್ದು, ತಪ್ಪು ಮಾರಾಟವನ್ನು ಸ್ಥಾಪಿಸಿದಾಗ ಗ್ರಾಹಕರಿಗೆ ಪರಿಹಾರ ನೀಡಲು ಸಂಸ್ಥೆಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ.
ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಹೆಸರು ಬಹಿರಂಗಪಡಿಸಲು ಇಚ್ಛಿಸದ ಮಹಿಳೆಯೊಬ್ಬರ ಪ್ರಕಾರ, “ನಾನು ಇತ್ತೀಚೆಗಷ್ಟೇ ಗೃಹಸಾಲವನ್ನು ಅವಧಿ ಮುಗಿಯುವ ಮೊದಲು ಪಾವತಿಸಿದ್ದೇನೆ. ಗೃಹಸಾಲ ಬಹುತೇಕ ಸಂಪೂರ್ಣ ಪಾವತಿಸಿರುವ ಜೊತೆಗೆ ವಿಮೆಯ ಹಣವನ್ನೂ ಸಂಪೂರ್ಣ ಪಾವತಿಸಬೇಕಾಗಿ ಬಂತು. ಆದರೆ ಹಾಗೆ ಪಾವತಿಸಿದ ಹಣವೂ ದೊರೆತಿಲ್ಲ. ನಾನು ಗೃಹಸಾಲ ಮಾಡಿದ ಸಂದರ್ಭದಲ್ಲಿ ವಿಮೆಗೆಂದು ಪ್ರತ್ಯೇಕ ಸಾಲ ಮಾಡಿಸಿಕೊಂಡಿದ್ದರು. ಆದರೆ ಅದರ ಬಾಂಡ್ ಕೊಟ್ಟಿರಲಿಲ್ಲ. ಆಗ ನಾನು ಅದನ್ನು ಕೇಳಿರಲೂ ಇಲ್ಲ. ಇದೀಗ ಗೃಹಸಾಲ ಪೂರ್ಣ ಪಾವತಿಸಿದಾಗ ವಿಮೆಯ ಸಾಲವನ್ನೂ ಪೂರ್ತಿ ಪಾವತಿಸಿಕೊಂಡಿದ್ದಾರೆ. ಪಾವತಿಸಿದ ಹಣವನ್ನು ನೀವು ವಿಮಾ ಕಂಪೆನಿಯಿಂದ ಪಡೆದುಕೊಳ್ಳಬಹುದು ಎಂದು ಹೇಳುತ್ತಿದ್ದಾರೆ. ಆದರೆ ವಿಮಾ ಕಂಪನಿ ಬಾಂಡ್ ಕೇಳುತ್ತಿದೆ. ಬಾಂಡ್ ಬ್ಯಾಂಕ್ ಇರಿಸಿಕೊಂಡಿದ್ದ ಮೂಲ ದಾಖಲೆಗಳ ಜೊತೆಗೆ ಇದೆ ಎಂದುಕೊಂಡಿದ್ದ ನನಗೆ ಆಘಾತವಾಗಿದೆ. ಬಾಂಡ್ ಇಲ್ಲದೆ ವಿಮೆಗೆ ತೆತ್ತ ಸಾಲದ ಮೊತ್ತವನ್ನು ಮರಳಿ ಪಡೆಯಲಾಗುತ್ತಿಲ್ಲ” ಎಂದು ಅಳಲು ತೋಡಿಕೊಂಡರು.
ಕಳೆದ ಮೂರು ವರ್ಷಗಳಲ್ಲಿ ಜೀವ ವಿಮಾದಾರರ ವಿರುದ್ಧ ವಾರ್ಷಿಕವಾಗಿ 1.2 ಲಕ್ಷಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (IRDAI) ದತ್ತಾಂಶವು ತೋರಿಸುತ್ತದೆ. ಜೀವ ವಿಮಾದಾರರು ವಿತ್ತೀಯ ವರ್ಷ 2024ರಲ್ಲಿ 120,726 ದೂರುಗಳನ್ನು ಮತ್ತು ವಿತ್ತೀಯ ವರ್ಷ 2025ರಲ್ಲಿ 120,429 ದೂರುಗಳನ್ನು ದಾಖಲಿಸಿದ್ದಾರೆ. ಒಟ್ಟು ದೂರುಗಳ ಸಂಖ್ಯೆಗಳು ವಿಶಾಲವಾಗಿ ಸ್ಥಿರವಾಗಿದ್ದರೂ, ನಿರ್ದಿಷ್ಟವಾಗಿ ಅನ್ಯಾಯದ ವ್ಯಾಪಾರ ಅಭ್ಯಾಸಗಳು ಮತ್ತು ತಪ್ಪು ಮಾರಾಟಕ್ಕೆ ಸಂಬಂಧಿಸಿದ ದೂರುಗಳು ಹೆಚ್ಚುತ್ತಲೇ ಇವೆ.
IRDAI ವಾರ್ಷಿಕ ವರದಿಯಲ್ಲೂ ತಪ್ಪು ಮಾರಾಟದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನಿಯಮಗಳು, ಷರತ್ತುಗಳು ಅಥವಾ ಸೂಕ್ತತೆಯ ಬಗ್ಗೆ ಸರಿಯಾದ ವಿವರಗಳನ್ನು ಬಹಿರಂಗಪಡಿಸದೆ ವಿಮಾ ಉತ್ಪನ್ನಗಳ ಮಾರಾಟ ನಡೆಯುತ್ತಿರುವ ಬಗ್ಗೆ IRDAI ಆತಂಕ ವ್ಯಕ್ತಪಡಿಸಿದೆ.
ಬ್ಯಾಂಕ್ ಗಳು ಕಳೆದ ಎರಡು ದಶಕಗಳಲ್ಲಿ ಪ್ರಾಥಮಿಕವಾಗಿ ಠೇವಣಿ ಸ್ವೀಕರಿಸುವ ಮತ್ತು ಸಾಲಗಳನ್ನು ವಿಸ್ತರಿಸುವ ಸಂಸ್ಥೆಗಳಿಂದ, ವಿಮೆ ಮತ್ತು ಮ್ಯೂಚುವಲ್ ಫಂಡ್ ಗಳಿಂದ ಹಿಡಿದು ಕ್ರೆಡಿಟ್ ಕಾರ್ಡ್‌ಗಳು ಮತ್ತು ಹೂಡಿಕೆ ಉತ್ಪನ್ನಗಳವರೆಗೆ ಎಲ್ಲವನ್ನೂ ಮಾರಾಟ ಮಾಡುವ ಹಣಕಾಸು ಸೂಪರ್ ಮಾರ್ಕೆಟ್ ಗಳಾಗಿ ರೂಪಾಂತರಗೊಂಡಿವೆ. ವಿತ್ತೀಯ ವರ್ಷ 2024ರಲ್ಲಿ ಹಣಕಾಸು ಉತ್ಪನ್ನಗಳು, ಹೆಚ್ಚಾಗಿ ವಿಮೆ ಮತ್ತು ಮ್ಯೂಚುವಲ್ ಫಂಡ್ ಗಳನ್ನು ಮಾರಾಟ ಮಾಡುವುದರಿಂದ ಬ್ಯಾಂಕ್‌ಗಳು 1,700 ಕೋಟಿ ರೂ.ಗೂ ಹೆಚ್ಚು ಕಮಿಷನ್‌ಗಳನ್ನು ಗಳಿಸಿವೆ ಎಂದು ವರದಿಯಾಗಿದೆ.
ಮಾಧ್ಯಮಗಳಲ್ಲಿ ವರದಿಯಾಗಿರುವ 1 ಫೈನಾನ್ಸ್ ನಡೆಸಿದ 2024ರ ಸಮೀಕ್ಷೆಯ ಪ್ರಕಾರ, ಸಮೀಕ್ಷೆಗೆ ಒಳಗಾದ ರಿಲೇಶನ್ ಶಿಪ್ ಮ್ಯಾನೇಜರ್ ಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಮಾರಾಟ ಗುರಿಗಳನ್ನು ತಲುಪಲು ಹಣಕಾಸು ಉತ್ಪನ್ನಗಳನ್ನು ತಪ್ಪಾಗಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಸುಮಾರು ಶೇ 51ರಷ್ಟು ಜನರು ಆ ಗುರಿಗಳನ್ನು ತಪ್ಪಿಸಿಕೊಂಡರೆ ತಮ್ಮ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದರೆ, ಶೇ 84ರಷ್ಟು ಮಂದಿ ಮಾರಾಟ ಮಾಡಬೇಕಾದ ಒತ್ತಡದಲ್ಲಿರುವುದಾಗಿ ತಿಳಿಸಿದ್ದಾರೆ.