ಹಿಂದೂ ಮಹಾಸಾಗರದಲ್ಲಿ ಚೀನೀಯರ ಸಂಶೋಧನೆ; ವಿಶ್ವದ ಅತಿ ದೊಡ್ಡ ತಿಮಿಂಗಿಲ ಸ್ಮಶಾನ ಪತ್ತೆ!
Photo Credit : X , @PDChina , @AMAZlNGNATURE
ಸಾಗರ ತಳದಲ್ಲಿರುವ 1,200 ಕಿಲೋಮೀಟರ್ ಕಾರಿಡಾರ್ನಲ್ಲಿ 5.3 ಮಿಲಿಯನ್ ವರ್ಷಗಳಷ್ಟು ಹಳೆಯವು ಎಂದು ಅಂದಾಜಿಸಲಾದ ಸುಮಾರು 500 ತಿಮಿಂಗಿಲ ಅಸ್ಥಿಪಂಜರಗಳನ್ನು ಪತ್ತೆಮಾಡಲಾಗಿದೆ.
ಸಾಗರದಡಿಯಲ್ಲಿ 7 ಕಿಲೋಮೀಟರ್ ಕೆಳಗೆ ಧುಮುಕಿದಾಗ ಒಂದು ಅಥವಾ ಎರಡಲ್ಲ, ಸಮುದ್ರತಳದಾದ್ಯಂತ ವ್ಯಾಪಿಸಿರುವ ನೂರಾರು ತಿಮಿಂಗಿಲದ ಅಸ್ಥಿಪಂಜರಗಳನ್ನು ನೋಡುವುದನ್ನು ಕಲ್ಪಿಸಿಕೊಳ್ಳಿ. ಹಿಂದೂ ಮಹಾಸಾಗರದಲ್ಲಿ ವಿಜ್ಞಾನಿಗಳು ಕಂಡುಹಿಡಿದಿರುವುದು ವಿಶ್ವದ ಅತಿದೊಡ್ಡ ತಿಮಿಂಗಿಲ ಸ್ಮಶಾನ!
ನೇಚರ್ ಜರ್ನಲ್ ನಲ್ಲಿ ಪ್ರಕಟವಾದ ವಿವರಗಳ ಪ್ರಕಾರ ಆಸ್ಟ್ರೇಲಿಯದ ಪಶ್ಚಿಮ ಕರಾವಳಿಯಲ್ಲಿ ಈ ಅಸಾಧಾರಣ ಸಂಶೋಧನೆ ಮಾಡಲಾಗಿದೆ. ಸಾಗರ ತಳದಲ್ಲಿರುವ 1,200 ಕಿಮೀ ಕಾರಿಡಾರ್ ನಲ್ಲಿ ಸುಮಾರು 500 ತಿಮಿಂಗಿಲ ಅಸ್ಥಿಪಂಜರಗಳನ್ನು ಪತ್ತೆಮಾಡಲಾಗಿದೆ. ಈ ಕೆಲವು ಪಳೆಯುಳಿಕೆಗಳು 5.3 ಮಿಲಿಯನ್ ವರ್ಷಗಳಷ್ಟು ಹಳೆಯವು ಎಂದು ಅಂದಾಜಿಸಲಾಗಿದೆ. ಈವರೆಗೆ ಪತ್ತೆಯಾದ ಅತ್ಯಂತ ಆಳವಾದ ಮತ್ತು ಹಳೆಯ ತಿಮಿಂಗಿಲ ಸ್ಮಶಾನವಿದು!
ವಿಜ್ಞಾನಿಗಳ ಅಚ್ಚರಿಯ ಸಂಶೋಧನೆ:
2023ರಲ್ಲಿ ಚೀನಾದ ಸಬ್ಮರ್ಸಿಬಲ್ ‘Fendouzhe’ ಆಳ ಸಮುದ್ರದಲ್ಲಿ ನಡೆಸಿದ ಸರಣಿ ಸಂಶೋಧನೆಯಲ್ಲಿ ತಿಮಿಂಗಿಲ ಸ್ಮಶಾನ ಪತ್ತೆಯಾಗಿದೆ. ಸಂಶೋಧಕರು 7000 ಮೀಟರ್ ಗಳ ಆಳದಲ್ಲಿ ಡೈಮಂಟಿನಾ ಫ್ರ್ಯಾಕ್ಚರ್ ವಲಯಕ್ಕೆ 32 ಡೈವ್ಗಳನ್ನು ನಡೆಸಿದ್ದರು. ಅಲ್ಲಿ ಕಂಡುಬಂದಿರುವ ದೃಶ್ಯ ಅವರನ್ನು ದಿಗ್ಭ್ರಮೆಗೊಳಿಸಿದೆ.
“ತಿಮಿಂಗಿಲದ ಸ್ಮಶಾನ ಕಂಡುಬರುವುದು ಅನಿರೀಕ್ಷಿತವಾಗಿತ್ತು. ಹರಡಿಕೊಂಡಿರುವ ಗಾತ್ರ, ಆಳ ಮತ್ತು ವಯಸ್ಸಿನ ವ್ಯಾಪ್ತಿಯು ನಾವು ಊಹಿಸಿದ್ದಕ್ಕಿಂತ ಹೆಚ್ಚಿನದಾಗಿತ್ತು” ಎಂದು ಚೈನೀಸ್ ಅಕಾಡೆಮಿ ಆಫ್ ಸೈನ್ಸ್ನ ಮುಖ್ಯ ಲೇಖಕ ಕ್ಸಿಯಾಟಾಂಗ್ ಪೆಂಗ್ ಹೇಳಿದ್ದಾರೆ. ತಂಡ ಒಟ್ಟು 485 ತಿಮಿಂಗಿಲ ಪಳೆಯುಳಿಕೆಗಳನ್ನು ಪಟ್ಟಿ ಮಾಡಿದೆ. ಅವುಗಳಲ್ಲಿ ಹೆಚ್ಚಿನವು ವಿವಿಧ ಜಾತಿಯ ಕೊಕ್ಕಿನ ತಿಮಿಂಗಿಲ (beaked whales) ಪ್ರಭೇದಕ್ಕೆ ಸೇರಿವೆ. ಅವುಗಳ ಸಂತತಿ ಅಳಿದು ಹೋಗುವ ಅಂಚಿನಲ್ಲಿದೆ ಎಂದೂ ಸಂಶೋಧಕರು ತಿಳಿಸಿದ್ದಾರೆ.
►ತಿಮಿಂಗಿಲ ಪತನ ಎಂದರೇನು?
ತಿಮಿಂಗಿಲವೊಂದು ಸತ್ತಾಗ ಅದರ ದೇಹ ಕೆಲವೊಮ್ಮೆ ‘ತಿಮಿಂಗಿಲ ಪತನ’ (“whale fall”) ಎಂದು ಕರೆಯಲಾಗುವ ಘಟನೆಯಲ್ಲಿ ಸಮುದ್ರತಳಕ್ಕೆ ಮುಳುಗುತ್ತದೆ. ಕಾಲಾನಂತರದಲ್ಲಿ ಆಳವಾದ ಸಾಗರದಲ್ಲಿ ತಿಮಿಂಗಿಲದ ಮೃತದೇಹವು ಇತರ ಜೀವಿಗಳಿಗೆ ಪೋಷಣೆಯ ಮೂಲವಾಗುವ ಸಾಧ್ಯತೆಯಿದ್ದು, ಸಂಪೂರ್ಣ ಪರಿಸರ ವ್ಯವಸ್ಥೆಯೇ ಒಂದೇ ಅಸ್ಥಿಪಂಜರದ ಸುತ್ತಲೂ ಬೆಳೆಯಬಹುದು.
ಹೊಸದಾಗಿ ಪತ್ತೆಯಾದ ಸ್ಮಶಾನವು ಈ ಪ್ರಕ್ರಿಯೆಯನ್ನು ಅಭೂತಪೂರ್ವ ಪ್ರಮಾಣದಲ್ಲಿ ತೋರಿಸುತ್ತದೆ. ಸಬ್ಮಿರ್ಸೆಲ್ ಒಳಗಿನಿಂದ ಜೆಲ್ಲಿ ಮೀನುಗಳು, ಸುಲಭವಾಗಿ ಚಲಿಸುವ ನಕ್ಷತ್ರ ಮೀನುಗಳು, ಮೂಳೆ ಕೊರೆಯುವ ಹುಳುಗಳು ಮತ್ತು ಬೈವಾಲ್ವ್ ಗಳು ಸೇರಿದಂತೆ ಮೂಳೆಗಳ ಮೇಲೆ ಮತ್ತು ಸುತ್ತಲೂ ವಾಸಿಸುವ ಆಳ ಸಮುದ್ರ ಜೀವಿಗಳ ಅಭಿವೃದ್ಧಿ ಹೊಂದುತ್ತಿರುವ ಸಮುದಾಯವನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ವಿಜ್ಞಾನಕ್ಕೆ ಹೊಸದಾದ ಅನೇಕ ಪ್ರಾಣಿಗಳನ್ನು ಪತ್ತೆಮಾಡಲಾಗಿದೆ.
►ತಿಮಿಂಗಿಲ ಸ್ಮಶಾನವೆಂಬ ಜೀವ ನಿಕ್ಷೇಪ
ವಿಜ್ಞಾನಿಗಳ ಪ್ರಕಾರ ಈ ಪ್ರದೇಶ ತಿಮಿಂಗಿಲಗಳ ಮೃತದೇಹಗಳು ನೈಸರ್ಗಿಕವಾಗಿ ಸಂಗ್ರಹವಾಗುವ ಸ್ಥಳ ಇದಾಗಿರಬಹುದು! ಈ ಪ್ರದೇಶ ತಿಮಿಂಗಿಲಗಳಿಗೆ ಪ್ರಮುಖ ಆಹಾರ ತಾಣವಾಗಿದೆ. ಜೊತೆಗೆ ಸಮುದ್ರತಳದಲ್ಲಿರುವ V-ಆಕಾರದ ಕಂದಕವು ಸಾವಿರಾರು ಮತ್ತು ಲಕ್ಷಾಂತರ ವರ್ಷಗಳಿಂದ ಮುಳುಗುವ ತಿಮಿಂಗಿಲಗಳ ಮೃತದೇಹಗಳನ್ನು ಅದೇ ಪ್ರದೇಶಕ್ಕೆ ಸಾಗಿಸಿರಬಹುದು. ಪಳೆಯುಳಿಕೆ ಸಾಂದ್ರತೆಯ ಆಧಾರದ ಮೇಲೆ ವಿಶಾಲವಾದ ಡೈಮಂಟಿನಾ ವಲಯದಲ್ಲಿ 10 ದಶಲಕ್ಷಕ್ಕಿಂತಲೂ ಹೆಚ್ಚು ತಿಮಿಂಗಿಲ ಮೃತದೇಹಗಳು ಹರಡಿಕೊಂಡಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಆವಿಷ್ಕಾರದ ಪ್ರಮಾಣ ನೋಡಿದಲ್ಲಿ ಸ್ಮಶಾನವು ಭೂಮಿಯ ಕೆಲವು ಅತ್ಯಂತ ತೀವ್ರವಾದ ಪರಿಸರದಲ್ಲಿ ಜೀವ ಹೇಗೆ ಬದುಕುಳಿಯುತ್ತದೆ ಎಂಬುದರ ಅಪರೂಪದ ನೋಟ ನೀಡುತ್ತದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಅವಶೇಷಗಳು ಸುಮಾರು 6.7 ಮಿಲಿಯನ್ ಟನ್ಗಳಷ್ಟು ಪ್ರತ್ಯೇಕವಾದ ಇಂಗಾಲವನ್ನು ಪ್ರತಿನಿಧಿಸಬಹುದು! ನೀರೊಳಗಿನ ತಿಮಿಂಗಿಲ ಸ್ಮಶಾನಗಳು ವಿಕಸನದ ಮೆಟ್ಟಿಲುಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸಂಶೋಧಕರು ನಂಬುತ್ತಾರೆ. ಈವರೆಗೆ ಪತ್ತೆಯಾದ ಅತಿದೊಡ್ಡ ತಿಮಿಂಗಿಲ ಸ್ಮಶಾನ ಇದಾಗಿದ್ದರೂ, ಇಂತಹ ಗುಪ್ತ ಸ್ಥಳಗಳು ಅಥವಾ ಜೀವ ನಿಕ್ಷೇಪಗಳು ವಿಶ್ವದ ಸಾಗರಗಳಲ್ಲಿ ಕಂಡುಬರಲು ಕಾಯುತ್ತಿರಬಹುದು ಎಂದು ವಿಜ್ಞಾನಿಗಳು ಅನುಮಾನಿಸಿದ್ದಾರೆ.
ಕೃಪೆ: indianexpress.com